ಪುಸ್ತಕ ಪರಿಚಯ : ಗಾಂಧೀಜಿ ಆತ್ಮಕಥೆ - The story of my experiments with truth


ಸಾಕಷ್ಟು ಬಾರಿ ನಾವು ಮನಸ್ಸಿನಲ್ಲಿ ಆಲೋಚಿಸುವುದಕ್ಕೂ, ನಾವು ಮಾಡುವ ಕೆಲಸಗಳಿಗೂ ಸಂಬಂಧವೇ ಇರುವುದಿಲ್ಲ. ಏನೋ ಬರೆಯಲು ಹೋಗಿ ಇನ್ನೇನೋ ಬರೆದು, ಅದುನ್ನ ಯಾರೋ ಓದಿ ಮತ್ತೇನೋ ಅಂದುಕೊಂಡು ಎಷ್ಟೋ ಪುಸ್ತಕಗಳು ಕೊನೆಗೊಳ್ಳುತ್ತವೆ. ಆದರೆ ಈ ಪುಸ್ತಕವನ್ನು ಓದಲು ಆರಂಭಿಸಿದಾಗ ಹಾಗೆ ಅನ್ನಿಸಲೇ ಇಲ್ಲ. ಪುಸ್ತಕವನ್ನು ಇನ್ನೂ ಪೂರ್ತಿಯಾಗಿ ಓದಿ ಮುಗಿಸಿಲ್ಲ. ಆದರೂ, ಈಗಲೇ ಯಾಕೆ ಬರೆಯುತ್ತಿದ್ದೇನೆ ಎಂದರೆ, ಪೂರ್ತಿ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಸಾಕಷ್ಟು ವಿಚಾರಗಳನ್ನು ನಾನು ಮರೆಯುತ್ತೇನೆ. ಪುಸ್ತಕ ಸುಮಾರು ೬೩೫ ಪುಟಗಳ ದೊಡ್ಡ ಪುಸ್ತಕ. ಒಬ್ಬ ಮಹಾನ್ ವ್ಯಕ್ತಿಯ ಆತ್ಮಕಥೆ ಎಷ್ಟು ದೊಡ್ಡದಿದ್ದರೂ ಓದುಗರಿಗೆ ಚಿಕ್ಕದೇ. 


ಈ ಪುಸ್ತಕವನ್ನು ಇಂಗ್ಲಿಷ್ ಭಾಷೆಯಲ್ಲಿ ಓದಲು ಯಾಕೆ ನಿರ್ಧಾರ ಮಾಡಿದೆನೋ ಗೊತ್ತಿಲ್ಲ. ಸತ್ಯವನ್ನು ಓದುವಾಗ ಅದು ಮನಸ್ಸಿಗೆ ಎಷ್ಟು ಹಿಡಿಸುತ್ತದೆ ಎಂಬುದು ಓದಿದ ನಂತರವೇ ಅರ್ಥವಾಗುವುದು. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ತಮ್ಮ ಜೀವನದ ಅನೇಕ ಘಟನೆಗಳನ್ನು ಕಾಲಾನುಸಾರವಾಗಿ ಓದುಗರಿಗೆ ಬರೆದಿಟ್ಟಿರುವುದು ಓದುಗರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. 


ಕೇವಲ ತಮ್ಮ ತತ್ವಗಳ ಬಗ್ಗೆ ಹೇಳದೆ, ಅವು ಹೇಗೆ ತಮ್ಮ ಮನಸ್ಸಿಗೆ ಬಂದವು, ಅವುಗಳನ್ನು ಅನುಸರಿಸುವಾಗ ಎದುರಾದ ತೊಂದರೆಗಳು, ತಪ್ಪುಗಳನ್ನು ಮಾಡಿ ನಂತರ ತಮ್ಮನ್ನು ತಾವು ಸರಿಪಡಿಸಿಕೊಂಡಂತಹ ಸಾಕಷ್ಟು ಉದಾಹರಣೆಗಳು ಪುಸ್ತಕದಲ್ಲಿ ಕಾಣಸಿಗುತ್ತವೆ. ನಮ್ಮ ಜೀವನದಲ್ಲಾದ ಅಹಿತಕರವಾದ ಘಟನೆಗಳನ್ನು ಅವು ನಡೆದಂತೆಯೇ ಬರೆಯಲು ಸಾಕಷ್ಟು ತಿಳುವಳಿಕೆ ಮತ್ತು ಪ್ರಾಮಾಣಿಕತೆ ಬೇಕಾಗುತ್ತದೆ. ಅವರು ಅವಮಾನಕ್ಕೀಡಾದ ಹಾಗು ಸೋಲನ್ನು ಕಂಡ ಸಾಕಷ್ಟು ಸನ್ನಿವೇಶಗಳು ಸರಳವಾಗಿ ಪುಸ್ತಕದಲ್ಲಿ ಕಾಣಸಿಗುತ್ತವೆ.
 

ಇಲ್ಲಿಯವರೆಗೆ ಓದಿದ ವಿಷಯಗಳಲ್ಲಿ ನನಗೆ ಇಷ್ಟವಾದ ಸನ್ನಿವೇಶಗಳೆಂದರೆ ಮಾಂಸಾಹಾರ ಸೇವನೆ, ಬ್ಯಾರಿಸ್ಟರ್ ಆಗಿ ಸೇವೆ ಸಲ್ಲಿಸಲು ಆರಂಭದಲ್ಲಿ ಅವರು ಎದುರಿಸಿದ ತೊಂದರೆಗಳು, ತಮ್ಮ ವೈವಾಹಿಕ ಜೀವನ , ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯಿಂದಾಗಿ ಅವರು ಅವಮಾನಕ್ಕೀಡಾಗಿದ್ದು, ಸಾಮಾಜಿಕ ಸೇವೆಯ ಆರಂಭದ ದಿನಗಳಲ್ಲಿ ನಡೆದ ಘಟನೆಗಳು, ತಲೆಗೆ ಸುತ್ತಿದ್ದ ಬಟ್ಟೆಯನ್ನು ತೆಗೆಯುವಂತೆ ಆದೇಶಿಸಿದ್ದನ್ನು ನಿರಾಕರಿಸಿದ್ದು ಹಾಗು ಮುಂದೊಂದು ದಿನ ಅದಕ್ಕಿಂತ ಉತ್ತಮ ಗುರಿಯ ಸಾಧನೆಗಾಗಿ ತಲೆಗೆ ಸುತ್ತಿದ್ದ ಬಟ್ಟೆಯನ್ನು ತೆಗೆಯಬೇಕಾದ  ಸಂದರ್ಭ ಇತ್ಯಾದಿ. ಸದ್ಯಕ್ಕೆ ೨೧೫ ಪುಟಗಳನ್ನು ಓದಿ ಮುಗಿಸಿದ್ದೇನೆ.  ಮುಂದಿನ ದಿನಗಳಲ್ಲಿ ಪುಸ್ತಕ ಓದಿದಂತೆ ಈ ಲೇಖನವನ್ನು ಮುಂದುವರಿಸುತ್ತೇನೆ.

ಕಾಮೆಂಟ್‌ಗಳು

- Follow us on

- Google Search