ಮಲೆನಾಡಿನ ಜನ

ಮಲೆನಾಡು ಎಂದಾಕ್ಷಣ ನೆನಪಿಗೆ ಬರುವುದು ಅಲ್ಲಿನ ಹಚ್ಚ ಹಸುರಿನ ಪರಿಸರ, ಮನಬಂದಂತೆ ಸುರಿಯುವ ಮಳೆ, ಗದ್ದೆ, ಅಡಿಕೆ ತೋಟ, ಕಾಫಿ ತೋಟ, ದೊಡ್ಡ ದೊಡ್ಡ ಟೀ ಎಸ್ಟೇಟ್, ಅಲ್ಲಿಗೆ ಕೆಲಸಕ್ಕೆ ಹೋಗಿ ಬರುವ ಜನರು ಇತ್ಯಾದಿ. ಇಲ್ಲಿರುವ ಹೆಚ್ಚಿನ ಜನರು ತಮ್ಮ ಊಟಕ್ಕೆ ಸಾಕಾಗುವಷ್ಟು ಬೆಳೆ ಬೆಳೆಯುವಷ್ಟು ಆಸ್ತಿ ಹೊಂದಿದ್ದಾರೆ. ನೂರಾರು ಎಕರೆ ವಿಸ್ತೀರ್ಣದ ದೊಡ್ಡ ಎಸ್ಟೇಟ್ ಹೊಂದಿರುವ ಸಾಕಷ್ಟು ಶ್ರೀಮಂತರು ಕಾಣಸಿಗುತ್ತಾರೆ. ಹೆಚ್ಚಿನ ಹಳ್ಳಿಯ ಭಾಗದ ಜನರು ತಮ್ಮ ಆಸ್ತಿಯ ಕೆಲಸಗಳು ಮುಗಿದ ನಂತರ ಎಸ್ಟೇಟ್ನಲ್ಲಿ ಕೆಲಸಕ್ಕೆ ಹೋಗುತ್ತಾರೆ. 


ಸ್ವಂತ ಆಸ್ತಿಯುಳ್ಳ ಜನರು ತಮ್ಮ ಮನೆಯಲ್ಲಿ ಕೋಳಿ, ದನಗಳನ್ನು ಸಾಕುವ ಅಭ್ಯಾಸ ಮಾಡಿಕೊಂಡಿದ್ದಾರೆ. ತಮ್ಮ ಮನೆಗೆ ಪೂಜೆಯ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಿರುವ ಕೋಳಿಗಳನ್ನು ಹಾಗು ಮನೆಗೆ ಬೇಕಾದ ಹಾಲನ್ನು ಇದರಿಂದ ಪಡೆಯುತ್ತಾರೆ. ಮಲೆನಾಡು ಗಿಡ್ಡ ಎಂಬ ತಳಿಯ ದನಗಳು ಹೆಚ್ಚಾಗಿ ಈ ಭಾಗದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಪಶುಪಾಲನೆಯಲ್ಲಿ ಹೆಚ್ಚಿನ ಆಸಕ್ತಿಯಿರುವ ಜನರು ಹೆಚ್ಚು ಹಾಲು  ಕೊಡುವ ಸಿಂಧಿ ತಳಿಯ ದನಗಳನ್ನು ಸಾಕಲು ಆರಂಭಿಸಿದ್ದಾರೆ. ಮಲೆನಾಡ ಗಿಡ್ಡಗಳು ಕಡಿಮೆ ಹಾಲು ಕೊಟ್ಟರೂ ಹೆಚ್ಚಿನ ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ ಎಂಬ ವಿಚಾರವನ್ನು ಹಿಂದೊಮ್ಮೆ ಗೋಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ಮೇಲ್ವಿಚಾರಕರಿಂದ ತಿಳಿದುಕೊಂಡಿದ್ದೆ. 

ಮಲೆನಾಡು ಗಿಡ್ಡ 
ಹುಡುಗಿಯರ ವಿಚಾರ ಹೇಳುವುದಾದರೆ, ಮೊದಲೆಲ್ಲ ೧೮-೨೦ ವರ್ಷಗಳಿಗೆ  ತಂದೆ ತಾಯಿಯ ಒತ್ತಾಯಕ್ಕೆ ಮಣಿದು ಮದುವೆಯಾಗುತ್ತಿದ್ದವರು ಇಂದು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒಲವು ತೋರುತ್ತಿದ್ದಾರೆ. ಮನೆಯ ಮಕ್ಕಳು ೨೦ ವರ್ಷ ಆದ ಮೇಲೆ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವುದು ಹೆಚ್ಚಾಗಿ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಹೋಟೆಲ್, ಫಾಸ್ಟ್ ಫುಡ್ ಉದ್ಯೋಗ ಮಾಡಿ,  ಸಾಕಷ್ಟು ಹಣ ಸಂಪಾದಿಸಿ ತಮ್ಮ ಊರಿಗೆ ಹಿಂತಿರುಗಿ ಮನೆ ಕಟ್ಟಿ, ಅಕ್ಕ ತಂಗಿಯರ ಮದುವೆ ಮಾಡಿ, ತಮ್ಮ ಊರಿನಲ್ಲೇ ಹೊಸ ಅಂಗಡಿ ತೆರೆದಿರುವವರನ್ನು ನಾನು ನೋಡಿದ್ದೇನೆ. 

ಅಡಿಕೆ ತೋಟ 

ಖರ್ಚಿನ ವಿಚಾರಕ್ಕೆ ಬಂದರೆ ಮನೆಗೆ ಬೇಕಾದ ಅಗತ್ಯ ದಿನಸಿ ವಸ್ತುಗಳನ್ನು ಬಿಟ್ಟರೆ ಹೆಚ್ಚಾಗಿ ಕೊಳ್ಳಲು ಹೋಗುವುದಿಲ್ಲ. ತಮ್ಮ ಮನೆಯ ಹಿತ್ತಲಲ್ಲೇ ಸಾಕಷ್ಟು  ಬೆಳೆಯುವ ಅಭ್ಯಾಸ ಇಲ್ಲಿನ ಜನರಿಗೆ ಇದೆ. ತಮ್ಮ ಮನೆಯಿಂದ ಸಾಕಷ್ಟು ದೂರದಲ್ಲಿ ಮಾರುಕಟ್ಟೆಗಳು ಇರುವುದರಿಂದ ಎರಡು ವಾರಕ್ಕೊಮ್ಮೆ ಪೇಟೆಗೆ ಹೋಗಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಇಲ್ಲಿನ ಹೆಚ್ಚಿನ ಹಳ್ಳಿ ಪ್ರದೇಶಗಳಿಗೆ ಇಂದಿಗೂ ಬಸ್ಸಿನ ವ್ಯವಸ್ಥೆ ಇಲ್ಲ. ಹೀಗಾಗಿ ಆಟೊಗಳನ್ನೇ ಜನರು ಅವಲಂಬಿಸಿದ್ದಾರೆ. ಬೆಂಗಳೂರಿನಂತೆ ಮೀಟರ್ ಲೆಕ್ಕ ಇಲ್ಲಿ ನಡೆಯಲ್ಲ. ಆಟೋ ಚಾಲಕರೇ ದರ ನಿಗದಿಪಡಿಸುತ್ತಾರೆ. 

ಇನ್ನೊಂದು ವರ್ಗದ ಜನ ಎಂದರೆ ದೂರದ ಊರುಗಳಿಂದ ಇಲ್ಲಿಗೆ ಕೆಲಸ ಹುಡುಕಿ ಬಂದವರು. ಇವರಲ್ಲಿ ಹೆಚ್ಚಿನ ಜನರು ಟೀ ಹಾಗು ಕಾಫೀ ಎಸ್ಟೇಟ್ ಮೊರೆ ಹೋಗುತ್ತಾರೆ. ವರ್ಷವಿಡೀ ಜನರಿಗೆ ಉದ್ಯೋಗವನ್ನು ಎಸ್ಟೇಟ್ ಜನರಿಗೆ ಒದಗಿಸುತ್ತದೆ. ಅಗತ್ಯ  ಸಂದರ್ಭಗಳಲ್ಲಿ ಹಣದ ಅವಶ್ಯಕತೆಯನ್ನು ಸಹ ಒದಗಿಸುವ ವ್ಯವಸ್ಥೆ ಇಲ್ಲಿ ಜಾರಿಯಲ್ಲಿದೆ. ಜನರನ್ನು ಒಟ್ಟು ಹಾಕಿ ಕೆಲಸಕ್ಕೆ ತಂದು ಬಿಡುವ ಮೇಸ್ತ್ರಿಗಳು ಸಾಕಷ್ಟು ಹಣ ಸಂಪಾದಿಸುತ್ತಾರೆ. ನಮ್ಮ ಮಲೆನಾಡಿನ ಭಾಗದ ತೋಟಗಳಿಗೆ ಮೊದಲೆಲ್ಲ ಉತ್ತರ ಕರ್ನಾಟಕದ ಭಾಗದಿಂದ ಜನರು ಕೆಲಸಕ್ಕಾಗಿ ವಲಸೆ ಬರುತ್ತಿದ್ದಾರೆ. ಆದರೆ, ಇತ್ತೀಚಿನ ಐದಾರು ವರ್ಷಗಳಲ್ಲಿ ಉತ್ತರ ಭಾರತದ ದೂರದ ರಾಜ್ಯಗಳಿಂದ ಜನರು ಬಂದು ಇಲ್ಲಿ ನೆಲೆಸಲು ಆರಂಭಿಸಿದ್ದಾರೆ. 

ಟೀ ಎಸ್ಟೇಟ್ 

ಇಲ್ಲಿನ ಮೂಲವಾಸಿಗಳಿಗೆ ತಮ್ಮ ಗದ್ದೆ, ತೋಟ, ಕೆಲಸ, ಪೂಜೆ ವಿಷಯಗಳ ಹೊರತಾಗಿ ಬೇರೆ ಯೋಚನೆ ಸ್ವಲ್ಪ ಕಡಿಮೆಯೆಂದೇ ಹೇಳಬಹುದು. ರಾಜಕೀಯ ನಾಯಕರ ಬಗ್ಗೆ ತಿಳುವಳಿಕೆಯಿದ್ದರೂ ಅದರ ಕುರಿತಾದ ಚರ್ಚೆಗಳು ಕಡಿಮೆ. ಆಂಡ್ರಾಯ್ಡ್ ಮೊಬೈಲ್ ಹೊಂದಿದವರೂ ಸಹ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಸಾಹಸ ಮಾಡುವುದು ಕಡಿಮೆ. ತಿಂಗಳುಗಟ್ಟಲೆ ವಿದ್ಯುತ್ ಕಡಿತವಾದರೂ, ದಶಕಗಳಿಂದ ತಮ್ಮ ಹಳ್ಳಿಯ ರಸ್ತೆ ಟಾರು ಕಾಣದೆ ಇದ್ದರೂ, ತಮ್ಮ ಊರಿನಲ್ಲಿ ಸರ್ಕಾರೀ ಸೌಲಭ್ಯಗಳು ಸರಿಯಾಗಿ ದೊರೆಯದೇ ಇದ್ದರೂ ತುಟಿಕ್ ಪಿಟಿಕ್ ಎನ್ನದೆ ಬೆಳಿಗ್ಗೆ ಇದ್ದಲ್ಲಿಂದ ರಾತ್ರಿ ಮಲಗುವ ವರೆಗೆ ಕೆಲಸ ಹಾಗು ಇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಸಾಕಷ್ಟು ಜನರು ಕಾಣಸಿಗುತ್ತಾರೆ. 

ಭತ್ತದ ಗದ್ದೆ 

ಅಂಗಡಿಗಳಲ್ಲಿ MRP ದರಕ್ಕಿಂತ ಹೆಚ್ಚಿನ ದರಕ್ಕೆ ವಸ್ತುಗಳನ್ನು ಮಾರಿದರೂ ಜನ ಪ್ರಶ್ನಿಸುವುದಿಲ್ಲ, ಬದಲಿಗೆ ದೂರದ ಪೇಟೆಯಿಂದ ತಂದಿದಕ್ಕೆ ಹೆಚ್ಚು ಬೆಲೆ ಎಂದು ಸುಮ್ಮನಾಗುತ್ತಾರೆ. ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಅದನ್ನು ನಿರ್ಲಕ್ಷಿಸುವುದು ಇಲ್ಲಿನ ಹೆಚ್ಚಿನ ಜನರಿಗೆ ಅಭ್ಯಾಸ ಆಗಿ ಹೋಗಿದೆ. ದೂರದ ಊರುಗಳಿಂದ ಪ್ರವಾಸಕ್ಕೆ ಬಂದು ನಮ್ಮ ಊರಿನ ಪ್ರಕೃತಿ ಸೌಂದರ್ಯ ಹೊಗಳುವ ಜನರಿಗೆ ಹೋಲಿಸಿದರೆ ನಮ್ಮದೇ ಜನರಿಗೆ ಅಂತಹ ಹೆಮ್ಮೆಯೇನು ಇದ್ದಂತೆ ಕಾಣುವುದಿಲ್ಲ. ಈ ಊರನ್ನು ಬಿಟ್ಟು ನಗರಕ್ಕೆ ತೆರಳಿದ ಜನರು ಮಾತ್ರ ತಮ್ಮ ಊರಿಗೆ ಹಿಂತಿರುಗಲು ಹಾತೊರೆಯುತ್ತಾರೆ.  

ನನ್ನ ಯೋಚನೆಯ ಪ್ರಕಾರ ಮಲೆನಾಡಿನ ಜನರ ಈ ಆಲೋಚನೆಯ ಕ್ರಮವೇ ನಮ್ಮ ನಾಡಿನ ಪ್ರಕೃತಿ ಸೌಂದರ್ಯವನ್ನು ಇನ್ನೂ ಉಳಿಸಿರುವುದು. ತಮ್ಮ ಜೀವನ ನಿರ್ವಹಣೆಗೆ ಅಗತ್ಯದ ಮಟ್ಟಿಗೆ ಮಾತ್ರ ಕಾಡಿನ ಉತ್ಪನ್ನಗಳನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಇನ್ನು ನಮ್ಮ ನದಿಗಳು, ಕಾಡುಗಳು ಸ್ವಲ್ಪ ಮಟ್ಟಿಗಾದರೂ ಜೀವಂತವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕಾಡುಗಳನ್ನು ಉದ್ಯೋಗ ಅವಕಾಶವಾಗಿ ನೋಡಲು ಆರಂಭಿಸಿದ್ದಾರೆ. 

ಕಟ್ಟಿಗೆ ಕಡಿದು ದೊಡ್ಡ ಫ್ಯಾಕ್ಟರಿಗಳಿಗೆ ಮಾರುವುದು, ಕಾಡನ್ನು ಕಡಿದು ಹೋಂ ಸ್ಟೇ ಮುಂತಾದ ಪ್ರವಾಸಿ ತಾಣಗಳನ್ನು ನಿರ್ಮಿಸುವುದು. ಕಾಡನ್ನು ನಾಶಪಡಿಸಿ ತೋಟ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಹಾಗು ನಾಡಿನ ಜನರ ನಡುವೆ ಜಗಳ ಹೋರಾಟಗಳು ಹಲವು ವರ್ಷಗಳಿಂದ  ಬಂದಿವೆ. ಕೊರೊನ ಸಂದರ್ಭ ಅವಲೋಕಿಸಿದರೆ ಇಲ್ಲೇ ವಾಸವಿದ್ದವರಿಗೆ ಆಗಿರುವ ತೊಂದರೆಗಳು ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಆದರೆ , ದೂರದ ನಗರಗಳಲ್ಲಿ ಕೆಲ್ಸಕ್ಕೆ ಇದ್ದ ಜನರು ಮನೆಗೆ ವಾಪಸ್ಸು ಬಂದು ಮನೆಯಲ್ಲಿ ಕೂರುವ ಸಂದರ್ಭಗಳು ಎದುರಾಗಿವೆ. ನಗರಗಳಿಂದ ಬಂದ  ಜನರು ಕೊರೊನ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಾಮೆಂಟ್‌ಗಳು

- Follow us on

- Google Search