ಡಿಜಿಟಲ್ ಪುಸ್ತಕಗಳು - eBooks

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಯುಗಕ್ಕೆ ತಕ್ಕಂತೆ ಮಾರ್ಪಾಡುಗುತ್ತಿವೆ. ಪುಸ್ತಕಗಳು ಸಾಕಷ್ಟು ಹಿಂದಿನ ಕಾಲದಿಂದಲೂ ಡಿಜಿಟಲ್ ರೂಪದಲ್ಲಿ ಇದ್ದರೂ ಓದುಗರಿಗೆ ಕಾಗದದಿಂದ ಮಾಡಿದ ಪುಸ್ತಕಗಳನ್ನೇ ಓದಿ ರೂಢಿ. ಆದರೆ ಈಗ ಪುಸ್ತಕಗಳನ್ನು ಮೊಬೈಲ್, ಟ್ಯಾಬ್, ಕಂಪ್ಯೂಟರ್ ಮುಂತಾದವುಗಳಲ್ಲಿ ಓದುವ ಅಭ್ಯಾಸ ಶುರುವಾಗಿದೆ. ಇಬುಕ್ ಎಂದು ಇವು ಕರೆಯಲ್ಪಡುತ್ತಿವೆ. ಇವುಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಈಗಿನ ಶಿಕ್ಷಣ ಪದ್ಧತಿಯಲ್ಲಿದೆ.
 

ಮೊದಲೆಲ್ಲ ಪುಸ್ತಕಗಳನ್ನು ಓದಲು ಖರೀದಿಸಿ ಓದಿದ ಹಲವಾರು ವರ್ಷಗಳ ನಂತರ ರದ್ದಿಗೆ ಸೇರುತ್ತಿದ್ದವು. ಗೆಳೆಯರ ನೋಟ್ಸ್ ಪುಸ್ತಕಗಳನ್ನು ಜೆರಾಕ್ಸ್ ಮಾಡಿಸಬೇಕಾಗಿತ್ತು. ಈಗ ಆ ಸಮಸ್ಯೆಗಳು ವಿದ್ಯಾರ್ಥಿಗಳಿಗೆ ಇಲ್ಲ. ಮೊಬೈಲ್ ಅಲ್ಲಿ ಫೋಟೋ ತೆಗೆದು ಅದನ್ನು ಪಿಡಿಎಫ್ ರೂಪಕ್ಕೆ ಪರಿವರ್ತಿಸಿ ಸೇವ್ ಮಾಡಿಕೊಂಡರೆ ಮೊಬೈಲ್ ಅಲ್ಲಿ ಉಳಿದುಬಿಡುತ್ತದೆ. ಇದರಿಂದ ಶಿಕ್ಷಕರಿಗೂ ಸಾಕಷ್ಟು ಸಹಾಯವಾಗಿದೆ. ಕೈಬರಹವನ್ನು ಗುರುತಿಸಿ ಡಿಜಿಟಲ್ ಡಾಕ್ಯುಮೆಂಟ್ ಆಗಿ ಪರಿವರ್ತಿಸುವ ಸಾಕಷ್ಟು ತಂತ್ರಾಂಶಗಳು ಇಂದು  ಲಭ್ಯವಿವೆ. ಇದರಿಂದಾಗಿ ಕೇವಲ ಒಂದು ಮೊಬೈಲ್ನಂತಹ ಸಣ್ಣ ಉಪಕರಣದಲ್ಲಿ ಲಕ್ಷಾಂತರ ಪುಸ್ತಕಗಳನ್ನು ಇಂದು ಕ್ರೋಢೀಕರಿಸಿ ಇಡಬಹುದು. 


ನಾನು ೧೨ನೇ ತರಗತಿವರೆಗೆ ಯಾವುದೇ eBook ಓದಿರಲಿಲ್ಲ. ಇಂಜಿನಿಯರಿಂಗ್ ಸೇರಿದ ನಂತರ ಇವುಗಳ ಉಪಯೋಗ ನನ್ನ ಅರಿವಿಗೆ ಬಂದಿದ್ದು. ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಡಿಜಿಟಲ್ ರೂಪದಲ್ಲಿರುವ ಪುಸ್ತಕಗಳು ವರದಾನವಾಗಿ ಪರಿಣಮಿಸಿವೆ.  ನಿಮಗೆ ಬೇಕಾದ ಸಾಕಷ್ಟು ಪುಸ್ತಕಗಳನ್ನು ಸ್ವಲ್ಪ ಹೊತ್ತು ಹುಡುಕಿದರೆ ಉಚಿತವಾಗಿ ಸಿಗುತ್ತವೆ. ಇದರಿಂದಾಗಿ ಪುಸ್ತಕಗಳಿಗೆ ಅಪಾರ ಪ್ರಮಾಣದ ಹಣವನ್ನು ವ್ಯಯಿಸುವುದು ತಪ್ಪುತ್ತದೆ. ಆದರೆ ಈ ರೀತಿಯಾಗಿ ಉಚಿತವಾಗಿ ಪುಸ್ತಕಗಳನ್ನು ಡೌನ್ಲೋಡ್ ಮಾಡುವುದು ಲೇಖಕರಿಗೆ ಸಾಕಷ್ಟು ತೊಂದರೆಗಳನ್ನು ಹಾಗೂ ನಷ್ಟವನ್ನು ಉಂಟುಮಾಡಿದೆ. ಏಕೆಂದರೆ, ಒಂದು ಬಾರಿ ಆನ್ಲೈನ್ ಅಲ್ಲಿ ಅಪ್ಲೋಡ್ ಆದ ಪುಸ್ತಕಗಳು ಸಾಕಷ್ಟು ಜನರಿಗೆ ಉಚಿತವಾಗಿ ಸಿಗುತ್ತವೆ.


ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕನ್ನಡ ಪುಸ್ತಕಗಳು ಸಹ ಡಿಜಿಟಲ್ ರೂಪದಲ್ಲಿ ದೊರೆಯುತ್ತಿರುವುದು ಬಹಳ ಸಂತೋಷದ ಸಂಗತಿ. ಗೂಗಲ್ ಪ್ಲೇ ಬುಕ್ಸ್ ಅಪ್ಲಿಕೇಶನ್ ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಓದುಗರು ಅದಕ್ಕೆ ಹಣ ಪಾವತಿಸಿ ಡೌನ್ಲೋಡ್ ಮಾಡಿ ಓದಬಹುದು. ಪುಸ್ತಕಗಳ ದರವೂ ಮುದ್ರಿಸಿದ ಪುಸ್ತಕಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ. 

ಮೊಬೈಲ್ ಮುಂತಾದ ಉಪಕರಣಗಳಲ್ಲಿ ಪುಸ್ತಕಗಳನ್ನು ಓದುವುದು ಅದರದೇ ಆದ ಅಡಚಣೆಗಳನ್ನು ಸಹ ಒಳಗೊಂಡಿದೆ. ನನ್ನ ಅನುಭವದಂತೆ ಕಾಗದದ ಪುಸ್ತಕಗಳನ್ನು ಎಷ್ಟು ಹೊತ್ತು ಬೇಕಾದರೂ ಹಿಡಿದುಕೊಂಡು ಕುಳಿತು ಓದಿದರೂ ಕಣ್ಣಿಗೆ ಅಷ್ಟು ಆಯಾಸವಾಗುವುದಿಲ್ಲ. ಆದರೆ, ಮೊಬೈಲ್ ಸ್ಕ್ರೀನ್ ನೋಡುತ್ತಾ ಹಲವಾರು ಗಂಟೆಗಳನ್ನು ಕಳೆಯುವುದು ಸಾಕಷ್ಟು ಕಷ್ಟ ಅನ್ನಿಸಬಹುದು ಅಭ್ಯಾಸ ಆಗುವವರೆಗೆ. ಇನ್ನೂ ಹೇಳಬೇಕೆಂದರೆ ಮೊಬೈಲ್ ಅಲ್ಲಿ ಇಂಟರ್ನೆಟ್ ಆನ್ ಇದ್ದರೆ ಇಲ್ಲಸಲ್ಲದ ನೋಟಿಫಿಕೇಶನ್ ಅಥವಾ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯಲು ಮನಸ್ಸು ಮುಂದಾಗುತ್ತದೆ. ಇಂಗ್ಲಿಷ್ ಪುಸ್ತಕಗಳನ್ನು ಓದುವಾಗ ಗೂಗಲ್ ಪ್ಲೇ ಬುಕ್ಸ್ ಅಥವಾ ಅಮೆಜಾನ್ ಕಿಂಡಲ್ ಅಪ್ಲಿಕೇಶನ್ಗಳು ಓದುಗರಿಗೆ ಡಿಕ್ಷನರಿ ಆಯ್ಕೆ ನೀಡುವುದರಿಂದ ಓದಲು ಸಾಕಷ್ಟು ನೆರವಾಗುತ್ತವೆ. 


ಇದೆಲ್ಲ ಏನೇ ಇರಲಿ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವ ಅನುಭವ ಮೊಬೈಲ್ ಅಥವಾ ಟ್ಯಾಬ್ ಮೂಲಕ ಓದುವ ಅನುಭವಕ್ಕೆ ಹೋಲಿಸಿದರೆ ಎರಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಅಂತಿಮ ಆಯ್ಕೆ ಓದುಗರಿಗೆ ಬಿಟ್ಟಿದ್ದು. 

ಗೂಗಲ್ ಪ್ಲೇ ಬುಕ್ಸ್ ಲಿಂಕ್ 👇


ಕಾಮೆಂಟ್‌ಗಳು

- Follow us on

- Google Search