ಸಾಮಾಜಿಕ ಜಾಲತಾಣಗಳು

ಕಳೆದ ಕೆಲವು ವರ್ಷಗಳಲ್ಲ ಆದ ಬದಲಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳೆಕೆದಾರರ ಸಂಖ್ಯೆ ವಿಪರೀತವಾಗಿ ಏರಿಕೆ ಕಂಡಿರುವುದು ಒಂದು ಪ್ರಮುಖ ಬದಲಾವಣೆ. ಇದಕ್ಕೆ ಕಾರಣ ನಿಮಗೆ ತಿಳಿದೇ ಇದೆ. ಇಂಟರ್ನೆಟ್ ದರದಲ್ಲಿ ಆದ ಬದಲಾವಣೆ, ಕಡಿಮೆ ದರಕ್ಕೆ ಮಾರಾಟವಾಗುವ ಆಂಡ್ರಾಯ್ಡ್ ಮೊಬೈಲುಗಳು ಹಾಗು ಎಲ್ಲ ಊರುಗಳಲ್ಲಿ ಹೊಸದಾಗಿ ಹಾಕಿಸಿರುವ ಮೊಬೈಲ್ ನೆಟ್ವರ್ಕ್ ಟವರ್. ಇದರಿಂದಾಗಿ ಹೆಚ್ಚಿನ ಜನರ ಮನೆಯಲ್ಲಿ ಒಂದಾದರು ಸ್ಮಾರ್ಟ್ಫೋನ್ ಇದೆ. ಯುವಕರ ಕೈಯಲ್ಲಿ ಮೊಬೈಲುಗಳು ಹೆಚ್ಚಾಗಿವೆ. 


ಒಂದು ವಿಷಯವನ್ನು ನೀವು ಗಮನಿಸಿರಬಹುದು, ನಮ್ಮ ಮೊಬೈಲ್ ಅಲ್ಲಿ ಇರುವ ಸಾಕಷ್ಟು ಅಪ್ಲಿಕೇಶನ್ ನಮಗೆ ಉಚಿತವಾಗಿ ದೊರೆಯುತ್ತವೆ. ಅವುಗಳನ್ನು ಬಳಸಲೂ ಸಹ ಯಾವುದೇ ದರ ಪಾವತಿಸಬೇಕಿಲ್ಲ. ಹಾಗಾದರೆ ಅದನ್ನು ನಡೆಸುವವರಿಗೆ ಕೋಟ್ಯಾಂತರ ಡಾಲರ್ ಲಾಭವಾಗುವುದು ಹೇಗೆ ?
 
ಅಪ್ಲಿಕೇಶನ್ಗಳಲ್ಲಿ ತೋರಿಸುವ ಜಾಹೀರಾತುಗಳಿಂದ ಹಣ ಸಂಪಾದನೆ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವಿವರಗಳನ್ನು ಕಲೆಹಾಕುವ ಪ್ರಯತ್ನ ನಿಮಗೆ ಗೊತ್ತಿಲ್ಲದೆ ನಿರಂತರವಾಗಿ ಸಾಗಿರುತ್ತದೆ. ಯಾವ ವಿವರಗಳು ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ. ಕಲೆಹಾಕುವ ವಿವರಗಳಿಗೆ ಇಂತಹುದೇ ಎಂಬ ಮಿತಿಯಿಲ್ಲ. 

ನಿಮಗೆ ಯಾವ ಬಣ್ಣ ಇಷ್ಟ, ನೀವು ಯಾರೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದೀರಿ, ನೀವು ಆನ್ಲೈನ್ ಶಾಪಿಂಗ್ ಅಲ್ಲಿ ಏನನ್ನು ಹುಡುಕಿದ್ದೀರಿ, ನಿಮ್ಮ ನೆಚ್ಚಿನ ವಿಷಯಗಳು ಯಾವುವು, ನಿಮಗೆ ಯಾವ ರೀತಿಯ ವ್ಯಕ್ತಿಗಳು ಇಷ್ಟವಾಗುತ್ತಾರೆ, ನೀವು ಯಾವ ವಿಚಾರಗಳಿಗೆ ಸ್ಪಂದಿಸುತ್ತೀರಿ, ಯಾವ ರೀತಿಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವಿರಿ ಈ ರೀತಿಯ ಲಕ್ಷಾಂತರ ವಿವರಗಳನ್ನು ನಿಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೂ ಪಡೆಯುವ ಪ್ರಯತ್ನ ಆನ್ಲೈನ್ ಲೋಕದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಈ ವಿವರಗಳಿಂದ ನೀವು ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವಂತೆ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ.  


ಈ ವಿವರಗಳಿಂದ ಅವರಿಗೆ ಏನು ಲಾಭ ? ಈ ವಿವರಗಳನ್ನು ನಾವು ಸಂತೆಯಲ್ಲಿ ತರಕಾರಿ ಮಾರುವಂತೆ ಅವರು ಕೂಡ ಆನ್ಲೈನ್ ಮೂಲಕ ಬೇಕಾದವರಿಗೆ ಮಾರುತ್ತಾರೆ. ಉದಾಹರಣೆಗೆ, ಒಬ್ಬರು ಹೊಸದಾಗಿ ನೀಲಿ ಬಣ್ಣದ ಮುದ್ದಾದ ಗೊಂಬೆಗಳನ್ನು ತಯಾರಿಸಿದ್ದಾರೆ. ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಟಾರ್ಗೆಟೆಡ್ ಆಡಿಯನ್ಸ್ ಬೇಕಾಗಿರುತ್ತಾರೆ. ಆ ಸಂದರ್ಭದಲ್ಲಿ ಜಾಹಿರಾತು ಆನ್ಲೈನ್ ಅಲ್ಲಿ ಪ್ರಕಟಿಸುವಾಗ ಅವರು ಯಾರನ್ನು ಉದ್ದೇಶಿಸಿ ಈ ಪ್ರಾಡಕ್ಟ್ ಮಾಡಿದ್ದರೋ, ಅಂತಹ ಕೊಳ್ಳುವ ಸಾಧ್ಯತೆಯಿರುವವರಿಗೆ ಆ ಜಾಹಿರಾತನ್ನು ತೋರಿಸಲಾಗುತ್ತದೆ. ಇದರಿಂದಾಗಿಯೇ ಬೇರೆ ಬೇರೆ ಜನರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಜಾಹಿರಾತುಗಳು ತೋರ್ಪಡಿಸಲಾಗುತ್ತದೆ. 


ನಿಮ್ಮ ಬಗ್ಗೆ ನಿಮಗೇ ಅರಿವಿಲ್ಲದ ಎಷ್ಟೋ ವಿವರಗಳು ಸಾಮಾಜಿಕ ಜಾಲತಾಣಕ್ಕೆ ತಿಳಿದಿರುತ್ತವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಆತ್ಮೀಯ ಸ್ನೇಹಿತರಿಗೆ ಯಾವ ಬಣ್ಣದ ಯಾವ ಜಾತಿಯ ನಾಯಿ ಮರಿ ಇಷ್ಟ ಎಂದು ನಿಮಗೆ ತಿಳಿಯದೇ ಇರಬಹುದು, ಆದರೆ ಅವುಗಳ ಚಿತ್ರವನ್ನೋ ಅಥವಾ ವಿಡಿಯೋಗಳನ್ನೋ ತೋರ್ಪಡಿಸುವ ಸಾಮಾಜಿಕ ಜಾಲತಾಣಕ್ಕೆ ಈ ವಿಷಯ ತಿಳಿದಿರುತ್ತದೆ. ಹೀಗೆ ಹತ್ತು ಹಲವಾರು ಉದಾಹರಣೆ ಕೊಡಬಹುದು. ನಿಮಗೆ ಗೊತ್ತಿಲ್ಲದೆ ನಿಮ್ಮ ಧ್ವನಿಯನ್ನು ಕದ್ದಾಲಿಸುವ ಯತ್ನಗಳೂ ಸಹ ನಡೆಯುವ ಸಾಧ್ಯತೆಯಿರುತದೆ ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು. ಆದರೆ ಕೆಳಗೆ ಒಂದು ವಿಡಿಯೋ ಲಿಂಕ್ ಹಾಕಿದ್ದೇನೆ ನೋಡಿ. 


ಅಷ್ಟೇ ಅಲ್ವಾ, ನಮ್ಮ ಬಗ್ಗೆ ವಿವರಗಳನ್ನು ಪಡೆದುಕೊಂಡು ನಮಗೆ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದುಕೊಂಡು ನೀವು ಸುಮ್ಮನಾಗಬಹುದು. ಆದರೆ ಇಂದು ಸಾಮಾಜಿಕ ಜಾಲತಾಣಗಳು ನಿಮ್ಮ ಆಲೋಚನೆ ಹಾಗು ನಿರ್ಧಾರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸರಿ ತಪ್ಪು ಎನ್ನುವ ಆಲೋಚನೆಯಿಲ್ಲದೆ ಎಲ್ಲಾ ರೀತಿಯ ಆಲೋಚನೆಗಳಿಗೂ ಲಕ್ಷಾಂತರ ಹಿಂಬಾಲಕರು ನಿಮಗೆ ಸಿಗುತ್ತಾರೆ. 

ಇಂದು ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಹಿಂಸೆಯನ್ನು ಪ್ರಚೋದಿಸುವ ಕೆಲಸವನ್ನು ಸಹ ಸದ್ದಿಲ್ಲದೇ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ನೀವು ಎಂಥವರೇ ಆಗಿರಿ, ನಿಮ್ಮ ವಿಚಾರಗಳನ್ನು ಒಪ್ಪಿ ಪ್ರೋತ್ಸಾಹಿಸುವ ಲಕ್ಷಾಂತರ ಜನರನ್ನು ಒಟ್ಟುಗೂಡಿಸುವ ಕೆಲಸವನ್ನು ಕೆಲವೇ ಕ್ಷಣಗಳಲ್ಲಿ ಈ ಸಾಮಾಜಿಕ ಜಾಲತಾಣಗಳು ಮಾಡಬಲ್ಲವು. ಇದೆಲ್ಲಕ್ಕಿಂತ ಹೆಚ್ಚಿನ ಸಮಸ್ಯೆಯೆಂದರೆ ನಮ್ಮ ಜೀವನದ ಮೇಲೆ ನಮಗೇ ಜಿಗುಪ್ಸೆ ಬರಿಸುವಷ್ಟು ಸಮರ್ಥವಾಗಿ ಸಾಮಾಜಿಕ ಜಾಲತಾಣಗಳು ಬೆಳೆದಿರುವುದು ಇಂದಿನ ದುರಂತವೇ ಸರಿ. 


ಇವುಗಳನ್ನೆಲ್ಲ ಸೃಷ್ಟಿ ಮಾಡುವ ಸಂದರ್ಭದಲ್ಲಿ ಈ ರೀತಿಯ ದುರಾಲೋಚನೆ ಇರಲಿಲ್ಲ. ಉಪಯೋಗಿಸುವ ಜನರ ಸಂಖ್ಯೆ ಹೆಚ್ಚಾದಂತೆ ಈ ರೀತಿಯ ಬೆಳವಣಿಗೆಗಳು ಆಗಿವೆ. ಈ ರೀತಿಯ ಹಲವಾರು ಸೂಕ್ಷ್ಮ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಒಂದು ಟಿವಿ ಸರಣಿ Netflix ಅಲ್ಲಿ ಇದೆ. ಕೆಳಗೆ ಟ್ರೈಲರ್ ಹಾಕಿದ್ದೇನೆ. ಸಮಯಾವಕಾಶ ಸಿಕ್ಕಿದಾಗ ಟಿವಿ ಸರಣಿ ನೋಡಿ. 

"If you are not paying for a product, then you are the product."

ಕಾಮೆಂಟ್‌ಗಳು

- Follow us on

- Google Search