ಕಥೆ: ಶಾಲೆ

ಮೀನಾಕ್ಷಿ ಓದು ಮುಗಿಸಿ, ಶಿಕ್ಷಕರ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕ ವೃತ್ತಿಗೆ ಸೇರಲು ಉತ್ಸುಕಳಾಗಿದ್ದಳು. ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಪುಣ್ಯದ ಕೆಲಸ ಬೇರೇನಿದೆ, ಜ್ಞಾನದಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಲ್ಲವೇ. ಆದರೆ, ಒಂದೇ ಅಳುಕೆಂದರೆ ಅವಳು ಶಿಕ್ಷಕಿಯಾಗಿ ಹೋಗುವ ಶಾಲೆ ಮನೆಯಿಂದ ಸ್ವಲ್ಪ ದೂರ. ರಸ್ತೆಗಳಲ್ಲಿ ಗುಂಡಿಗಳು ಇವೆ ಎನ್ನುವುದಕ್ಕಿಂತ ಗುಂಡಿಗಳಲ್ಲಿ ರಸ್ತೆ ಲೀನವಾಗಿದೆ ಎಂದರೆ ಸರಿಹೋಗುತ್ತದೆ. ಇದರಿಂದ ಊರಿನಲ್ಲಿ ಜನ ಆ ದಾರಿಯಲ್ಲಿ ಜೀಪು ಅಥವಾ ಪಿಕಪ್ ಅಂತಹ ಗಾಡಿಗಳಲ್ಲೇ ಓಡಾಡುವುದು ಹೆಚ್ಚು. ಆಗೊಮ್ಮೆ ಈಗೊಮ್ಮೆ ರಸ್ತೆಯ ಬದಿಯಲ್ಲಿ ಕಾಡುಕೋಣಗಳ ಹಿಂಡು ಕಾಣಸಿಗುತ್ತವೆ. ಅವುಗಳ ಮುಖವನ್ನು ಗಮನಿಸಿದರೆ ಈ ಬೇಲಿಗಳನ್ನು ಹಾರಬೇಕೋ ಅಥವಾ ಮುರಿದು ಪುಡಿಯೆಬ್ಬಿಸಿ ಮುಂದೆಸಾಗಬೇಕೋ ಎಂಬ ಚಿಂತೆಯಲ್ಲಿ ನಿಂತಿರುವಂತೆ ಕಾಣುತ್ತವೆ. 

ಬೈಕ್ ಸವಾರರು ಕಾಡುಕೋಣಗಳು ಕಾಣುತ್ತಿದಂತೆ ಗಾಡಿ ಹಿಂತಿರುಗಿಸುವ ಕೆಲಸ ಮಾಡುತ್ತಾರೆ. ಜೀಪು ಅಥವಾ ಕಾರಿನಂತಹ ಗಾಡಿಗಳಲ್ಲಿ ಇದ್ದವರು ಮಾತ್ರ ಜೀವ ಬಾಯಿಗೆ ಬಂದಂತೆ ಅವುಗಳನ್ನೇ ನೋಡುತ್ತಾ ಒಂದೆರಡು ನಿಮಿಷಗಳ ಕಾಲ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಷ್ಟಾದರೂ ಮೀನಾಕ್ಷಿ ಸ್ಕೂಟಿಯಲ್ಲೇ ಶಾಲೆಗೆ ಪಾಠ ಮಾಡಲು ಹೋಗಲು ನಿರ್ಧರಿಸಿದಳು. ಆ ಊರಿಗೆ ಬಸ್ಸಿನ ಸಾರಿಗೆ ಸಂಪರ್ಕ ಇಲ್ಲ, ಒಂದು ಸರ್ಕಾರಿ ಆಸ್ಪತ್ರೆಯೂ ಇಲ್ಲ. 

ಮಗಳನ್ನು ಒಬ್ಬಳನ್ನೇ ಆ ಊರಿಗೆ ಕೆಲಸಕ್ಕೆ ಕಳುಹಿಸಬೇಕಲ್ಲ ಎಂಬ ಚಿಂತೆ ಮನೆಯವರಿಗೂ ಇತ್ತು. ಆದರೂ ಸಿಕ್ಕಿದ ಮೊದಲ ಕೆಲಸ ಬಿಡುವುದು ಸರಿಯಲ್ಲ ಎಂದು ಯೋಚಿಸಿ ತಮ್ಮ ಮನೆಯ ದೇವರು, ಭೂತರಾಯ ಮುಂತಾದ ದೇವರುಗಳಿಗೆ ಹರಕೆ ಕಟ್ಟಿಕೊಂಡರು. ಬೆಳಿಗ್ಗೆ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸಿ ನಂತರ ಮೀನಾಕ್ಷಿ ಮನೆಯಿಂದ ಹೊರಟಳು. ಜೂನ್ ತಿಂಗಳಲ್ಲಿ ಮಳೆಯೊಂದಿಗೆ ಶಾಲೆಯೂ ಶುರುವಾಗುತ್ತದೆ. ಮಲೆನಾಡಿನ ಮಳೆಯೆಂದರೆ ಅದಕ್ಕೆ ಮೊದಲಿದೆಯೇ ಹೊರತು ಕೊನೆಯೆಂಬುದಿಲ್ಲ.    

ರೈನ್ ಕೋಟ್ ಧರಿಸಿ, ಹೆಡ್ಲೈಟ್ ಹಾಕಿ ಸ್ಕೂಟಿಯಲ್ಲಿ ಮಂದಗತಿಯಲ್ಲಿ ಮುಂದೆ ಮುಂದೆ ಸಾಗುತ್ತಿದಳು. ಮಳೆಗಾಲದಲ್ಲಿ ಆವರಿಸುವ ಇಬ್ಬನಿ ದಾರಿಯಲ್ಲಿ ಮುಂದೇನಿದೆ ಎಂದು ಕಾಣುವುದರಲಿ, ದಾರಿಯೇ ಕಾಣದಂತಾಗುತ್ತದೆ. ಹೀಗಾಗಿ ಧ್ಯಾನ ಮಾಡಿದಂತೆ ಗಾಡಿ ಓಡಿಸುವುದು ಇಲ್ಲಿನ ಬೈಕ್ ಅಥವಾ ಸ್ಕೂಟಿ ಸವಾರರಿಗೆ ಅಭ್ಯಾಸವಾಗಿರುತ್ತದೆ. ಪ್ರವಾಸಿಗರು ಕಾರಿನಲ್ಲೋ ಅಥವಾ ದೊಡ್ಡ ಗಾಡಿಗಳಲ್ಲೋ ಪ್ರವಾಹದ ಅಲೆಗಳಂತೆ ನುಗ್ಗುವುದು ಅದೆಷ್ಟೋ ಬೈಕ್ ಸವಾರರ ಜೀವಗಳನ್ನು ಕಳೆದುಕೊಳ್ಳುವಂತೆ ಮಾಡಿವೆ. ಮೀನಾಕ್ಷಿ ಇವನ್ನೆಲ್ಲಾ ಯೋಚಿಸುತ್ತ ಶಾಲೆಯ ಹತ್ತಿರಕ್ಕೆ ಬರತೊಡಗಿದಳು. 

ದೂರದಿಂದ ನೋಡುತ್ತಿದ್ದಂತೆಯೇ ಅದೇ ಶಾಲೆ ಎಂಬುದು ಗೊತ್ತಾಯಿತು. ಕೆಸರು ತುಂಬಿದ ಮೈದಾನ, ಕಟ್ಟಡದ ನೆಲಗಳಲ್ಲಿ ವಿವಿಧ ಚಪ್ಪಲಿಗಳ ಹೆಜ್ಜೆ ಗುರುತುಗಳು, ಮೂಲೆಯಲ್ಲಿ ಒಂದೆರಡು ಕಪ್ಪೆಗಳು, ಒಟ್ಟಿನಲ್ಲಿ ಆ ಶಾಲೆಯ ಕಟ್ಟಡ ಮಳೆಯ ಹೊಡೆತಕ್ಕೆ ನಲುಗಿ, ಚಳಿಯಿಂದ ನಡುಗುವಂತಿತ್ತು.

ಕೆಲವು ಮಕ್ಕಳು ಎಂದಿನಂತೆ ತಮ್ಮ ಆಟಗಳಲ್ಲಿ ನಿರತರಾಗಿದ್ದರು. ಕಪ್ಪೆಗಳನ್ನು ಹಿಡಿದು ಒಂದೇ ಹೊಂಡಕ್ಕೆ ಬಿಡುವ ಯೋಚನೆಯೊಂದಿಗೆ ವೆಂಕಟೇಶ ಮತ್ತು ಸತೀಶ ಕಾರ್ಯನಿರತರಾಗಿದ್ದರು. ಹೊಸತಾಗಿ ಯಾರೋ ಬಂದಿದ್ದಾರೆ ಎಂದು ತಿಳಿದು ಅವರನ್ನು ನೋಡಲು ಬಂದರು. ಕೆಲವರ ಕಾಲುಗಳಲ್ಲಿ ಜಿಗಣೆಗಳು ರಕ್ತ ಹೀರುವ ಕೆಲಸ ಮಾಡುತ್ತಿದ್ದವು. ಇನ್ನೂ ಕೆಲವರ ಕಾಲುಗಳಲ್ಲಿ ರಕ್ತ ಹೀರಿ ಬಿದ್ದು ಹೋಗಿದ್ದರಿಂದ ರಕ್ತ ಸೋರುತಿತ್ತು. ಏನು ಮಾಡಬೇಕೋ ತೋಚದೆ ನಿಂತಿದ್ದ ನಾಲ್ಕೈದು ಮಕ್ಕಳನ್ನು ಮೀನಾಕ್ಷಿ ಮಾತನಾಡಿಸಲು ಯತ್ನಿಸಿದಳು. ಸ್ವೆಟರ್ ಟೊಪ್ಪಿ ಹಾಕಿ ಬಂದಿದ್ದ ಮಕ್ಕಳೆಲ್ಲರೂ ಕಣ್ಣು ಪಿಳಿ ಪಿಳಿ ಬಿಟ್ಟು ನೋಡುತಿದ್ದರು.

ಶಾಲೆಯ ಏಕೈಕ ಶಿಕ್ಷಕರಾಗಿದ್ದ ನರಸಿಂಹರವರು ಸ್ವಲ್ಪ ಹೊತ್ತಿನ ನಂತರ ನಡಗುತ್ತ ಮಳೆಯಲ್ಲಿ ತಮ್ಮ ಸ್ಪ್ಲೆಂಡರ್ ಬೈಕಿನಲ್ಲಿ ಬಂದು ಇಳಿದರು. ನಿನ್ನೆಯೇ ಕರೆಮಾಡಿ ಮೀನಾಕ್ಷಿ ವಿಷಯ ತಿಳಿಸಿದ್ದರಿಂದ ಅವರಿಗೆ ಅವಳನ್ನು ಕಂಡಾಗ ಆಶ್ಚರ್ಯವೇನು ಆಗಲಿಲ್ಲ. ಚಳಿಯಲ್ಲೇ ನಗುತ್ತಾ ಕುಶಲೋಪರಿ ವಿಚಾರಿಸಿದರು. ನಂತರ ಶಾಲೆಯ ಎರಡು  ಕೋಣೆಗಳಿಗೆ ಹಾಕಿದ್ದ ಬೀಗವನ್ನು ತೆಗೆದರು. ಒಂದು ಮುಖ್ಯೋಪಾಧ್ಯಾಯರ ಕೋಣೆ, ಇನ್ನೊಂದು ಪಾಠ ಮಾಡುವ ಕೋಣೆ. 

ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗಿನ ವಿದ್ಯಾರ್ಥಿಗಳಿದ್ದರು. ಅವರೆಲ್ಲರಿಗೂ ಒಂದೇ ಕೋಣೆ ಹಾಗು ಒಬ್ಬರೇ ಶಿಕ್ಷಕರು. ಹೀಗಾಗಿ ನಾಲ್ಕು ತರಗತಿಯ ಮಕ್ಕಳು ಒಟ್ಟಿಗೆ ಕೂತು ಪಾಠ ಕಲಿಯುತ್ತಿದ್ದರು. ಮಳೆಗೆ ಒಂದು ಮೂಲೆಯಲ್ಲಿ ಸ್ವಲ್ಪ ಸೋರುತ್ತಿತ್ತು. ಮೀನಾಕ್ಷಿ ಶಾಲೆಯನ್ನು ಕಂಡು ದಿಕ್ಕೇ ತೋಚದಂತಾಯಿತು. ಏಕೆಂದರೆ ಅವಳು ಓದಿದ್ದು ಪೇಟೆಯ ಶಾಲೆಗಳಲ್ಲಿ. ಅಲ್ಲಿಯೂ ಸರ್ಕಾರೀ ಶಾಲೆಯಲ್ಲೇ ಓದಿದ್ದರೂ, ಅಲ್ಲಿನ ಶಾಲೆಗಳ ಸ್ಥಿತಿಯೇ ಬೇರೆ. ಅಲ್ಲಿಯವರೆಗೂ ಯಾರೋ ಹೊಸಬರನ್ನು ಕಂಡು ಮೌನ ತಾಳಿದ್ದ ಶಾಲೆಯ ವಿದ್ಯಾರ್ಥಿಗಳು ಮೆಲ್ಲಗೆ ಅವರಲ್ಲೇ ಮಾತನಾಡಲು ಆರಂಭಿಸಿದರು. ಹಿರಿಯ ವಿದ್ಯಾರ್ಥಿಯಾಗಿದ್ದ ರಾಮು, ತನಗೆ ಇವರು ಗೊತ್ತೆಂದೂ ಒಂದು ಬಾರಿ ಇವರ ಮನೆಗೆ ಅಪ್ಪನ ಜೊತೆ ಹೋಗಿದ್ದೆ ಎಂದು ಸ್ನೇಹಿತನಿಗೆ ತಿಳಿಸಿದ. 

ತರಗತಿಯಲ್ಲಿ ಗಲಾಟೆ ಹೆಚ್ಚಾಗುತ್ತಿದ್ದಂತೆ ಮೀನಾಕ್ಷಿ ತರಗತಿಯ ಆಧಾರದ ಮೇಲೆ ನಾಲ್ಕು ಗುಂಪುಗಳನ್ನು ರಚಿಸಿ ಒಂದನೇ ತರಗತಿಯವರಿಗೆ ಅಆಇಈ ಬರೆಯುವಂತೆ ಹೇಳಿದಳು. ಎರಡನೇ ತರಗತಿಯವರಿಗೆ ಕಾಗುಣಿತ ಬರೆದು ತೋರಿಸುವಂತೆ ಹೇಳಿದಳು. ಮೂರನೇ ತರಗತಿಯವರಿಗೆ ಒಂದರಿಂದ ಹತ್ತರ ತನಕ ಮಗ್ಗಿ ಬರೆದು ತೋರಿಸಲು ಹೇಳಿದಳು. ನಾಲ್ಕನೇ ತರಗತಿಯವರಿಗೆ ಹನ್ನೊಂದರಿಂದ ಇಪ್ಪತರವರೆಗೆ ಮಗ್ಗಿ ಬರೆಯಲು ಹೇಳಿದಳು. ಮಕ್ಕಳು ಬರೆಯಲು ಆರಂಭಿಸಿದರು. ಸ್ವಲ್ಪ ಹೊತ್ತಿನ ನಂತರ ಇದುನ್ನೆ ಬರೆಯಬೇಕ ಎಂಬ ಅನುಮಾನದೊಂದಿಗೆ ಟೀಚರ್ ಬಳಿ ಸ್ಲೇಟು ಬಳಪ ಹಿಡಿದು ಕೆಲವರು ಬಂದರು. ಅದನ್ನು ನೋಡಿದ ಉಳಿದವರು ಸಹ ಎದ್ದು ಗುಂಪುಗೂಡತೊಡಗಿದರು. ಮತ್ತದೇ ಗಲಿಬಿಲಿ ಶುರುವಾಯಿತು. 

ಮೀನಾಕ್ಷಿ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಎಲ್ಲರೂ ಅವರವರ ಸ್ಥಳಕ್ಕೆ ಹೋಗುವಂತೆ ಘರ್ಜಿಸಿದಳು. ಆದರೂ ಅಲ್ಲಿಯೇ ನಿಂತಿದ್ದವರಿಗೆ ಒಂದೆರಡು ಏಟು ಹಾಕಿದಳು. ಮತ್ತೆ ಮಕ್ಕಳು ಓಡಿ ಹೋಗಿ ಮನಬಂದಂತೆ ಬರೆಯುವ ಕೆಲಸದಲ್ಲಿ ನಿರತರಾದರು. ಇನ್ನು ಕೆಲವರು ಸೋರಿ ನಿಂತಿದ್ದ ನೀರಿನಿಂದ  ತಪ್ಪಾಗಿ ಬರೆದಿದ್ದನ್ನು ಅಳಸುವ ಪ್ರಯತ್ನದಲ್ಲಿ ತೊಡಗಿದ್ದರೆ ಇನ್ನು ಕೆಲವರು ಬಳಪದ ಕಡ್ಡಿಯನ್ನು ನೀರಿನಲ್ಲಿ ಒದ್ದೆ ಮಾಡಿ ಸ್ಲೇಟಿನಲ್ಲಿ ಬರೆಯತೊಡಗಿದರು. ಕೆಲವರು ಜೋಬಿಗೆ ಹಾಕಿಕೊಂಡು ಬಂದಿದ್ದ ಕಾಯಿ ಹಾಗು ಬೆಲ್ಲವನ್ನು ತಿನ್ನಲಾರಂಭಿಸಿದರು. 

ಮಳೆ ಒಂದೇ ಸಮನೆ ಸುರಿಯುತ್ತಲೇ ಇತ್ತು. ಕರೆಂಟ್ ಇಲ್ಲದ ಕಾರಣ ಕಂಪ್ಯೂಟರ್ ಆನ್ ಮಾಡುವ ಹಾಗಿಲ್ಲದೆ ದಾಖಲೆಗಳನ್ನು ಸರಿಯಾದ ಸಮಯಕ್ಕೆ ಅಪ್ಲೋಡ್ ಮಾಡಲು ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ನರಸಿಂಹ ಹೆಣಗಾಡುತ್ತಿದ್ದರು. ಹೊಸತಾಗಿ ಕೆಲಸಕ್ಕೆ ಸೇರಿದ್ದ ಶಿಕ್ಷಕಿಯನ್ನು ಕರೆದು ಶಾಲೆಯ ಬಗ್ಗೆ ಹಾಗು ಊರಿನ ಬಗ್ಗೆ ವಿವರಿಸಿದರು. ಸಾಧ್ಯವಾದರೆ ನಾವಿಬ್ಬರು ಸೇರಿ ಒಂದೇ ಆಟೋದಲ್ಲಿ ಬಂದರೆ ಮಳೆಯಲ್ಲಿ ಸಾಕಷ್ಟು ನೆನೆಯುವುದು ತಪ್ಪುತ್ತದೆ ಎಂಬ ನಿರ್ಧಾರ ತೆಗೆದುಕೊಂಡರು. ಮಕ್ಕಳಿಗೆ ಹೊಡೆಯಬಾರದೆಂದು, ಹಾಗೆ ಹೊಡೆದರೆ ಅವರು ಶಾಲೆ ಶುರುವಾಗುವ ಮುಂಚೆ  ಹಾಗು ಶಾಲೆ ಮುಗಿದ ನಂತರ ಮೈದಾನದಲ್ಲಿ  ಆಟವಾಡಲು ಮಾತ್ರ ಬರುತ್ತಾರೆಂದು ಎಚ್ಚರಿಸಿದರು. 

ಈ ಹೊತ್ತಿಗೆ ಶಾಲೆಗೆ ಬಿಸಿಯೂಟದ ಅಡುಗೆ ಮಾಡುವ ಸರೋಜಮ್ಮ ಬಂದರು. ಕೇವಲ ಉಪ್ಪು ಬೇಳೆ ಮಾತ್ರ  ಅಡುಗೆ ಕೋಣೆಯಲ್ಲಿ ದಾಸ್ತಾನಿದೆ ಎಂಬ ವಿಚಾರವನ್ನು ಮುಂಚೆಯೇ ತಿಳಿಸಿದರು. ಹೊಸತಾಗಿ ಬಂದಿದ್ದ ಟೀಚರ್ ಕಡೆ ಮಂದಹಾಸವನ್ನು ಬೀರಿದರು. ಮಧ್ಯಾಹ್ನ ಎಂದಿನಂತೆ ಬಿಸಿಯೂಟ ಮುಗಿಯಿತು. ನಾಳೆಗೆ ಪುಸ್ತಕದಲ್ಲಿ ಏನು ಬರೆದುಕೊಂಡು ಬರಬೇಕೆಂದು ಮೀನಾಕ್ಷಿ ಮಕ್ಕಳಿಗೆ ವಿವರಿಸತೊಡಗಿದಳು. ಮಳೆ ಜೋರಾಗುತ್ತಲೇ ಹೋಯಿತು, ಅದರೊಂದಿಗೆ ಗಾಳಿಯೂ ಜೋರಾಗಿ ಬೀಸತೊಡಗಿತು. 

ನರಸಿಂಹರವರು ಆ ದಿನಕ್ಕೆ ರಜೆ ಘೋಷಿಸಿದರು. ಮಕ್ಕಳೆಲ್ಲರೂ ತಮ್ಮ ಛತ್ರಿ ಬ್ಯಾಗ್ ಹಿಡಿದುಕೊಂಡು ಹೆಜ್ಜೆ ಹಾಕಲಾರಂಭಿಸಿದರು. ಕೆಲವರ ಛತ್ರಿಗಳು ಗಾಳಿಗೆ ಅರಳಿ ಟಿವಿ ಆಂಟೆನ್ನಾದಂತೆ ಆಕಾಶದತ್ತ ಮುಖ ಮಾಡಿದವು. ಹೇಗೋ ಮಳೆ ಗಾಳಿಯೊಂದಿಗೆ ನಿಧಾನಕ್ಕೆ ಗಾಡಿ ಓಡಿಸಿಕೊಂಡು ಮೀನಾಕ್ಷಿ ಮನೆ ಸೇರಿದಳು. ಒಂದೆರಡು ಸೀನು ಬಂದವು. ಸ್ವಲ್ಪ ತಲೆನೋವು ಶುರುವಾಯಿತು. ಕಾಫಿ ಕುಡಿದು ಮಲಗಿದ ಮೇಲೆ ಸ್ವಲ್ಪ ಜ್ವರ ಬಂದವು. 

ರಾತ್ರಿ ಊಟ ಎದ್ದಾಗ ಊಟ ಸೇರದೆ ಸ್ವಲ್ಪವೇ ಊಟ ಮಾಡಿ ಮಲಗಿದಳು. ಆಯಾಸಕ್ಕೆ ಹಾಗೆಯೇ ನಿದ್ದೆ ಬರಲಾರಂಭಿಸಿತು. ನಿನ್ನೆ ಇದ್ದ ಕಾತರ ಕುತೂಹಲಗಳು ಇಂದು ಜ್ವರವಾಗಿ ಬದಲಾಗಿದ್ದವು. ಹೀಗೆಯೇ ಮಳೆ  ಸುರಿದರೆ ನಾಳೆ ಶಾಲೆಗೆ ರಜೆ ಘೋಷಣೆ ಮಾಡಬೇಕಾಗುತ್ತದೆ ಎಂದು ಹೇಳಿದ್ದ ನರಸಿಂಹರವರ ಮಾತುಗಳು ಮೀನಾಕ್ಷಿಗೆ  ನೆನಪಾದವು. ನಾಳೆ ಶಾಲೆಗೆ ರಜೆ ಕೊಟ್ಟರೆ ಒಳ್ಳೇದು ಎನ್ನುವ ಶಾಲೆಯ ಮಕ್ಕಳ ಯೋಚನೆಯೇ ಅವಳ ಮನಸ್ಸಿನಲ್ಲೂ ಸುಳಿಯಿತು...

ಕಾಮೆಂಟ್‌ಗಳು

- Follow us on

- Google Search