ಸಣ್ಣಕಥೆ - ಮಳೆಹನಿ

ಸಂತೋಷ ಕೊರೊನ ಕಾಟಕ್ಕೆ ಕೆಲಸ ಕಳೆದುಕೊಂಡು ನಗರದಿಂದ ಹಳ್ಳಿಗಾಡಿನ ಊರಿಗೆ ಹಿಂತಿರುಗಿ ಬಂದು ಒಂದು ತಿಂಗಳ ಕಾಲವಾಗಿತ್ತು. ಬೆಂಗಳೂರಿಂದ ಬಂದು ಇಷ್ಟು ದಿನವಾದರೂ ನಮ್ಮ ಮನೆಗಳಿಗೆ ಬಂದಿಲ್ಲ ಎಂದು ನೆರೆಹೊರೆಯವರು ಚಿಂತಿಸಿದ್ದರು. ಅವಾಗೆಲ್ಲ ನಮ್ಮ ಮನೆಯಲ್ಲೇ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಲ ಕಳೆಯುತ್ತಿದ್ದ ಹುಡುಗನಿಗೆ ಕೆಲಸ ಸಿಕ್ಕಿದ ಮೇಲೆ ಅಹಂಕಾರ ಬಂತೆಂದು ಕೆಲವರು ಯೋಚಿಸಿದ್ದರು. 


'ಎದ್ದವರ ಶನಿ ಬಿದ್ದವರಿಗೆ' ಎಂಬ ಅಮ್ಮನ ಮಾತು ಕೇಳಿ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಎಚ್ಚರವಾಯಿತು. ಅದೇನೋ ತೌತೆ ಚಂಡಮಾರುತ ಅಂತೆ, ರಾತ್ರಿಯಿಡೀ ಬಿಡುವಿಲ್ಲದೆ  ಮನಬಂದಂತೆ ಅಡ್ಡಾದಿಡ್ಡಿ ಸುರಿದ ಮಳೆಗೆ ಚಳಿ ಕೂಡ ಜಾಸ್ತಿಯಾಗಿತ್ತು. ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಅಗಣ್ಯ ಎನ್ನುವುದು ಎಡೆಬಿಡದೆ ಸುರಿಯುವ ಮಳೆಯನ್ನೋ, ತುಂಬಿ ಹರಿಯುವ ನದಿಯನ್ನೋ, ಉಕ್ಕಿ ಕಾರುವ ಜ್ವಾಲಾಮುಖಿಯನ್ನೋ ನೋಡಿದಾಗ ಮಾತ್ರ ಅನುಭವವಾಗುತ್ತದೆ. ಮಳೆಯ ಹನಿಗಳ ಮುಗ್ಧತೆ ಸುನಾಮಿಯ ಅಲೆಗಳಿಗೆ ಇರುವುದಿಲ್ಲ ಎಂದು ಏನೇನೋ ಮನಬಂದಂತೆ ಆಲೋಚಿಸಿದ. ಹಾಸಿಗೆಯಿಂದ ಎದ್ದು ಹೋಗಿ ಮುಖ ತೊಳೆದು ಅಡಿಗೆ ಮನೆಗೆ ಹೋದ. ಕಾಫಿ ಕುಡಿಯುವುದರ ಜೊತೆಗೆ ಚಳಿ ಕಾಯಿಸುವುದು ಅವನ ಉದ್ದೇಶವಾಗಿತ್ತು. 

ಗ್ಯಾಸ್ ಒಲೆ ಬಂದಮೇಲೆ ಬೆಳಿಗ್ಗೆಯೇ ಸೌದೆ ಒಲೆ ಹಚ್ಚುವ ಅಭ್ಯಾಸ ಮನೆಯಲ್ಲಿ ಕಡಿಮೆಯಾಗಿತ್ತು. ಗ್ಯಾಸ್ ಒಲೆಯ ಮೇಲೆ ಒಂದು ಒಲೆಯಲ್ಲಿ ಕಾಫಿ ಪಾತ್ರೆ, ಇನ್ನೊಂದು ಒಲೆಯಲ್ಲಿ ಪಕ್ಕದಮೆನೆಯ ಪದ್ಮಕ್ಕನವರು ಹೇಳಿದಂತೆ ನೆಲನಲ್ಲಿ, ಅಮೃತಬಳ್ಳಿ, ಕಾಳುಮೆಣಸು, ಲವಂಗ, ಅರಿಶಿಣ,ಬೆಲ್ಲ ಮುಂತಾದವುಗಳನ್ನು ಹಾಕಿ ಕಷಾಯ ಕುದಿಯಲು ಇಡಲಾಗಿತ್ತು. ದಿನವೂ ಹೊಸ ಹೊಸ ಗಿಡಮೂಲಿಕೆಗಳು ಆ ಕಷಾಯಕ್ಕೆ ಸೇರ್ಪಡೆಯಾಗುತ್ತಿದ್ದವು. ಪುಣ್ಯಕ್ಕೆ ಇನ್ನೂ ಯಾರು ಗೋಮೂತ್ರ ಅಥವಾ ಸಗಣಿ ಹಾಕಿ ಕಷಾಯ ಮಾಡುವಂತೆ ಸಲಹೆ ನೀಡದೆ ಇರುವುದು ನಮ್ಮ ಪುಣ್ಯ ಎಂದುಕೊಂಡು ಸಂತೋಷ ನಸುನಕ್ಕ. 

ಕರೆಂಟ್ ಇಲ್ಲ, ನೆಟ್ವರ್ಕ್ ಇಲ್ಲ, ಎಷ್ಟೋ ಜನರ ಮನೆಯಲ್ಲಿ ಸ್ಮಾರ್ಟ್ ಫೋನುಗಳಿಲ್ಲ. ಈ ರೀತಿಯ ಹಳ್ಳಿಗಾಡಿನ ಊರುಗಳಲ್ಲಿನ ಜನರು ಕೊರೊನ ಲಸಿಕೆ ಬುಕಿಂಗ್ ಮಾಡುವುದಾದರೂ ಹೇಗೆ ?. ಲಸಿಕೆಯ ಹೊರತಾಗಿ ಅದೆಷ್ಟೇ ಜಾಗೃತಿ ಮೂಡಿಸಿದರು ಸಹ ಇವರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಯಾವಾಗಲೂ ಮಾಸ್ಕ್ ಧರಿಸಿ ಕೆಲಸ ಮಾಡುವುದು ಹಾಗು ಸ್ಯಾನಿಟೈಝೆರ್ ಬಳಸುವ ಅಭ್ಯಾಸ ಆಗದೆ ಇರುವುದನ್ನು ಕಂಡು ತನ್ನ ಮನಸ್ಸಿನಲ್ಲೇ ಕೊರಗಿದ. 


ಮಳೆ ಇನ್ನೂ ಸುರಿಯುತ್ತಲೇ ಇತ್ತು. ಕೊಟ್ಟಿಗೆಯ ಮೇಲೆ ತೆಂಗಿನ ಹೆಡಲು ಬಿದ್ದು ನಾಲ್ಕೈದು ಹಂಚು ಒಡೆದು ಹೋಗಿತ್ತು. ಮನೆಗೆ ಬರುತ್ತಿದ್ದ ನೀರು ಸ್ವಲ್ಪ ಕಳುಕಾಗಿತ್ತು. ನಿನ್ನೆ ತಾನೇ ಗದ್ದೆಯ ಹತ್ತಿರ ತೆಗೆದಿದ್ದ ಫೋಟೋವನ್ನು ಇನ್ಸ್ಟಾಗ್ರಾಮ್ ಅಲ್ಲಿ ಅಪ್ಲೋಡ್ ಮಾಡಿದ್ದ. ಅದಿಕ್ಕೆ ಎಷ್ಟು ಲೈಕ್ಸ್, ಕಾಮೆಂಟ್ಸ್ ಬಂದಿವೆ ಎಂದು ನೋಡಲು ಮೊಬೈಲ್ ಸ್ವಿಚ್ಆಫ್ ಆಗಿದೆ. ಇನ್ನೊಂದು ವಾರ ಕರೆಂಟ್ ಬರುವ ಸಾಧ್ಯತೆ ಇಲ್ಲ. ಪೇಟೆಗೆ ಗೆಳೆಯರ ಮನೆಗೆ ಮೊಬೈಲುಗಳನ್ನು ತಗೊಂಡು ಹೋದರೆ ಚಾರ್ಜ್ಗೆ ಹಾಕಬಹುದು. ಆದರೆ, ಕೊರೊನ ನಿಯಂತ್ರಣಕ್ಕಾಗಿ ಪೊಲೀಸರು ಎಲ್ಲರನ್ನು ಪ್ರಶ್ನಿಸುತ್ತಿದ್ದಾರೆ. ಈ ರೀತಿಯ ಕಾರಣ ಹೇಳಿದರೆ ಗಾಡಿ ಕೂಡ ವಶಪಡಿಸಿಕೊಳ್ಳುತ್ತಾರೆ. 

ಜಗತ್ತಲ್ಲಿ ಏನೇ ಆಗಲಿ, ದಿನನಿತ್ಯ ಅಪ್ಪ ಮಾತ್ರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ತೋಟಕ್ಕೆ ಹೋಗುತ್ತಾರೆ. ಮಳೆಯಿಂದ ಏನೇನಾಗಿದೆಯೋ ನೋಡಿ, ತಮ್ಮ ಕೈಲಾದಷ್ಟು ಕೆಲಸ ಮಾಡಿಯೇ ಬೆಳಗ್ಗಿನ ತಿಂಡಿ ತಿನ್ನಲು ಬರುತ್ತಾರೆ. ತಿಂಡಿ ಆದ ಮೇಲೆ ಎಲೆ ಅಡಿಕೆ ಹಾಕಿಕೊಂಡು, ಹಾಳೆಕೊಟ್ಟೆ ತಲೆಗೆ ಹಾಕಿ, ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಂಡು ಮತ್ತೆ ಗದ್ದೆ ತೋಟಗಳ ಒಳಗೆ ಕೆಲಸದಲ್ಲಿ ತನ್ಮಯರಾಗುತ್ತಾರೆ. 


ಅಮ್ಮ ಮನೆಯ ಕೆಲಸಗಳಾದ ಅಡಿಗೆ ಮಾಡುವುದು, ಪಾತ್ರೆ ತೊಳೆಯುವುದು, ಕೊಟ್ಟಿಗೆ ಕೆಲಸ, ದನಕರುಗಳಿಗೆ ನೀರು ಆಹಾರ ಒದಗಿಸುವುದು ಮುಂತಾದ ಕೆಲಸಗಳಲ್ಲಿ ನಿರತರಾಗುತ್ತಾರೆ. ಈ ಮಳೆ ಸುರಿಯುವ ದಿನಗಳಲ್ಲಿ ಸಿಂಧಿ ದನಗಳನ್ನು ಹೊರಗಡೆ ಬಿಟ್ಟರೆ ಎಲ್ಲಾದರೂ ಕಾಲು ಹುಗಿದು ಮಲಗಿಬಿಟ್ಟರೆ ಏಳುವ ಪ್ರಯತ್ನವನ್ನೂ ಮಾಡದ ಮುಗ್ಧ ಪ್ರಾಣಿಗಳು ಅವು ಎಂದು ಯೋಚಿಸಿ ಅವನ್ನೇ ನೋಡುತ್ತಾ ಸ್ವಲ್ಪ ಹೊತ್ತು ಸಂತೋಷ ನಿಂತ. ಎಂದಿನಂತೆ ಮನೆಯಲ್ಲಿ ತಿಂಡಿಗೆ ಕಡ್ಬು, ಸಾರು ತಯಾರಾಗಿತ್ತು. 

ತಿನ್ನಲು ಕೂತಾಗ ನಾಲ್ಕು ಕಡ್ಬು ತಿನ್ನುವುದರೊಳಗೆ ಹೊಟ್ಟೆ ತುಂಬಿತು. ಸಾಕು ಎಂದಾಗ ಅಮ್ಮ ಊರಿನ ಮಕ್ಕಳು ಹೇಗೆ ಊಟ ತಿಂಡಿ ಮಾಡುತ್ತಾರೆ ಎಂಬುದನ್ನು ವರ್ಣಿಸಿದರು. ಏಳೆಂಟು ಕಡ್ಬು ತಿನ್ನದೆ ಮೇಲೇಳುವುದಿಲ್ಲ. ನಗರದ ಸದಾ ಗಿಜಿಗುಡುವ, ಕೆಲಸದಲ್ಲಿ ನಿರತರಾಗಿರುವ ಜನಜೀವನದಿಂದ ಹಳ್ಳಿಗೆ ಬಂದಾಗ ಅವರಿಗೆ ಆಗುವ ಅನುಭವಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ರಾತ್ರಿ ಮಲಗಿದ್ದಾಗ ಇದ್ದಕ್ಕಿದಂತೆ ಕೆಳಗೆ ಬಿದ್ದಂತಾಗಿ ಎಚ್ಚರವಾಗುವಂತೆ ದಿನವಿಡೀ ಒಂದು ರೀತಿಯ ಆಯಾಸ ಸಂತೋಷನನ್ನು ಭಾದಿಸುತಿತ್ತು. 


ಏನಾದರು ಹೋಗಿ ತೋಟದಲ್ಲಿ ಕೆಲಸ ಮಾಡೋಣವೆಂದರೆ, ಅಭ್ಯಾಸವಿಲ್ಲದೆ ಮಳೆಯ ಥಂಡಿಯಲ್ಲಿ ಕೆಲಸ ಮಾಡಿ ಶೀತ ಜ್ವರ ಶುರುವಾದರೆ ಕೊರೊನ ಎಂದೇ ಊರಿನ ಜನರು ಭಾವಿಸುತ್ತಾರೆ. ಇದರಿಂದಾಗಿ ಮನೆಯಲ್ಲೇ ಸಮಯ ಕಳೆಯುವ ಭಾಗ್ಯ ಸಂತೋಷನದು. ಸಮಯಕ್ಕೆ ಸರಿಯಾಗಿ ಊಟ ತಿಂಡಿ ನಡೆಯುತಿತ್ತು. ಮಧ್ಯಾಹ್ನ ನಿದ್ಧೆ, ಎಚ್ಚರವಾದಾಗ ಒಂದಿಷ್ಟು ಪುಸ್ತಕಗಳನ್ನು ಓದುವ ಪ್ರಯತ್ನ, ಏನಾದರು ಒಳ್ಳೆಯ ಫೋಟೋ ತೆಗೆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಈ ರೀತಿಯ ಕೆಲಸಗಳಲ್ಲೇ  ದಿನ ಮುಗಿದು ಹೋಗುತಿತ್ತು. 


ರಾತ್ರಿ ಊಟ ಮಾಡಿ ಮಲಗಿದ್ದಾಗ ಮಧ್ಯಾಹ್ನ ಮಲಗಿದ್ದರಿಂದ ನಿದ್ಧೆ ಬರದೆ ಇದ್ದಾಗ ಸಂತೋಷ ಚಿಂತಕನಾಗುತ್ತಾನೆ. ತಮ್ಮವರನ್ನು ಕಳೆದುಕೊಂಡ ವಿಷಯಗಳು ಸಹ ಇವರಿಗೆ ತಲುಪಲು ಸಾಧ್ಯವಿಲ್ಲದಷ್ಟು ಅಜ್ಞಾತವಾಸಕ್ಕೆ ಹಳ್ಳಿಗಾಡಿನ ಜನರು ಮಳೆಗಾಲದಲ್ಲಿ ಒಳಗಾಗುತ್ತಾರೆ. ಬಹುಷಃ ಕಾರ್ಲ್ ಮಾರ್ಕ್ಸ್ ಹೇಳಿದ ಈ ಮಾತು ಸತ್ಯ ಎಂಬುದು ಮಲಗಿದ್ದಾಗ ಹಾಗೆ ಸಂತೋಷನಿಗೆ ನೆನಪಾಯಿತು. ಹಾಗೆಯೆ ನಿದ್ದೆ ಆವರಿಸಿತು. 


"ಒಂದು ಧ್ರುವದಲ್ಲಿ ಸಂಪತ್ತಿನ ಕ್ರೋಢೀಕರಣ ಅದೇ ಸಮಯದಲ್ಲಿ ಮತ್ತೊಂದು ಧ್ರುವದಲ್ಲಿ ನೋವು, ಸಂಕಟ, ಗುಲಾಮಗಿರಿ, ಅಜ್ಞಾನ, ಹಿಂಸಾಚಾರ, ಮಾನಸಿಕ ಅವನತಿಯ ಕ್ರೋಢೀಕರಣ. " 
-- ಕಾರ್ಲ್ ಮಾರ್ಕ್ಸ್ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

- Follow us on

- Google Search