ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು


ಈ ಸಂದರ್ಭದಲ್ಲಿ ಜೀವನಕ್ಕೆ ಅರ್ಥವೇ ಇಲ್ಲದಂತಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಷ್ಟೋ ಜನ ಕೊರೊನ ರೋಗಕ್ಕೆ ತುತ್ತಾಗಿದ್ದರೆ, ಇನ್ನು ಕೆಲವರು ತಮ್ಮ ಜೀವನದಲ್ಲಿ ಎದುರಿಸಲಾಗದ ಬದಲಾವಣೆಗಳಿಗೆ ಚಿಂತೆಗೀಡಾಗಿದ್ದಾರೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೊದಲಿಗಿಂತ ಹೆಚ್ಚಿನ ಸಮಯವನ್ನು ಲ್ಯಾಪ್ಟಾಪ್, ಮೊಬೈಲುಗಳ ಮುಂದೆ ಕೂತು ಕಳೆಯುವಂತಾಗಿದೆ. ದಿನದ ಸಂಬಳಕ್ಕೆ ಹೊರಗಡೆ ಕೆಲಸಕ್ಕೆ ಹೋಗುವವರು ಲೊಕ್ಡೌನ್ ಆದಾಗಿನಿಂದ ಕೈಯಲ್ಲಿ ದುಡ್ಡು ಸಹ ಇಲ್ಲದೆ, ಕರೋನಕ್ಕೆ ಭಯ ಪಡುತ್ತಿದ್ದಾರೆ. 


ಸ್ವಲ್ಪ ಮಟ್ಟಿಗೆ ಈ ಸಮಯದಲ್ಲಿ ಆರಾಮಾಗಿ ಮನೆಯಲ್ಲಿ ಇರುವ ಒಂದು ವರ್ಗವೆಂದರೆ ಓದಲು ಆಸಕ್ತಿಯಿಲ್ಲದೆ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು. ಅವರೂ ಕೂಡ ಪರೀಕ್ಷೆ ವಿಷಯ ಬಂದರೆ ಕಂಗಾಲಾಗುತ್ತಾರೆ. ವಿದ್ಯಾಭ್ಯಾಸಕ್ಕೆ ಅವಶ್ಯವಾದ ಸಾಕಷ್ಟು ಪುಸ್ತಕಗಳು ಹಾಗು ಉಚಿತ ತರಗತಿಗಳು ಯೂಟ್ಯೂಬ್ ಮುಂತಾದ ಪ್ಲಾಟ್ಫಾರ್ಮ್ ಅಲ್ಲಿ ಲಭ್ಯ ಇವೆ. ಮೊಬೈಲ್ ಹಾಗು ಅಂತರ್ಜಾಲದ ಸೌಲಭ್ಯ ಇರುವವರು ತಮಗೆ ಸಿಕ್ಕಿದ ಈ ಅಮೂಲ್ಯ ಸಮಯವನ್ನು ಸದುಪಯೋಗ ಮಾಡಬೇಕು. ತಮಗೆ ಇಷ್ಟವಿರುವ ವಿಷಯಗಳ ಬಗ್ಗೆ ಹಾಗು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವತ್ತ ತಮ್ಮ ಗಮನ ಹರಿಸಬೇಕು. ನಮಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಲು ಆರಂಭಿಸಿದಾಗಲೇ ನಮ್ಮ ಜ್ಞಾನದ ಅಲ್ಪತನದ ಬಗ್ಗೆ ಸ್ಪಷ್ಟ ನಿಲುವು ಸಿಗುವುದು.


 ಇಂತಹ ಸಂಕಷ್ಟದ ಸಂದರ್ಭದಲ್ಲೂ ತಮ್ಮ ಕುಟುಂಬಕ್ಕಾಗಿ ಕೆಲಸ  ಮಾಡುತ್ತಿರುವ ಸಾಕಷ್ಟು ಜನರಿಂದಲೇ ಮನೆಯವರು ಆರಾಮಾಗಿದ್ದಾರೆ. ಕಳೆದ ವರ್ಷದಂತೆ ಈ ವರ್ಷವಿಲ್ಲ. ನಮ್ಮ ಅಕ್ಕ ಪಕ್ಕದ ಮನೆಗಳಲ್ಲಿ ಅಥವಾ ಹತ್ತಿರದ ನೆಂಟರುಗಳಲ್ಲಿ ಕೊರೊನ ರೋಗ ಬಂದಿರುವ ಸುದ್ಧಿಗಳನ್ನು ಕೇಳುವಂತಾಗಿದೆ. ರೋಗದ ಗುಣಲಕ್ಷಣಗಳು ಇದ್ದಲ್ಲಿ ಆದಷ್ಟು ಬೇಗ ಟೆಸ್ಟಿಂಗ್ ಮಾಡಿಸಿಕೊಂಡು ಔಷಧಿ ಪಡೆಯುವುದು ಒಳ್ಳೆಯ ಕೆಲಸ. ಸ್ವಲ್ಪ ದಿನದ ಮಟ್ಟಿಗೆ ಕಷ್ಟವಾಗುತ್ತದೆ, ಆದರೆ ಉಡಾಫೆ ತೋರಿಸಿದರೆ ಪ್ರಾಣವೇ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ತಡವಾದರೆ ಸ್ಥಿತಿ ಚಿಂತಾಜನಕವಾಗುತ್ತದೆ. 


ಹಸಿದವರಿಗೆ ಆಹಾರ ಒದಗಿಸುವುದು, ಬೇಕಾದವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡುವುದು, ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ಸಾವಿರಾರು ವೈದ್ಯರು ಹಾಗು ದಾದಿಯರ ಕೆಲಸ ನಿಜವಾಗಿಯೂ ಶ್ಲಾಘನೀಯ. ಈಗ ಬಂದಿರುವ ಸಮಸ್ಯೆಯಿಂದ ಹೇಗಾದರೂ ಪಾರಾಗಿಬಿಟ್ಟರೆ ಮುಂದೆ ಏನಾದರು ಮಾಡಿ ಜೀವನ ಕಟ್ಟಿಕೊಳ್ಳಬಹುದು. ಈಗ ದುಡುಕಿದರೆ ಬದುಕೇ ನಾಶವಾಗಬಹುದು. ಅದಿಕ್ಕೆ ಹಿರಿಯರು ಹೇಳಿದ್ದು "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು."

ಕಾಮೆಂಟ್‌ಗಳು

- Follow us on

- Google Search