ಪುಸ್ತಕ ಪರಿಚಯ : ವಿಸ್ಮಯ ವಿಶ್ವ - ೧, ೨ ಬರೆದವರು : ಕೆ . ಪಿ . ಪೂರ್ಣಚಂದ್ರ ತೇಜಸ್ವಿ

"ಜಗತ್ತು ವಿಸ್ಮಯಗಳ ಅಕ್ಷಯಪಾತ್ರೆ" ಎಂದು ಹೇಳಿದ ತೇಜಸ್ವಿಯವರ ಎರಡು ಪುಸ್ತಕಗಳನ್ನು ಓದಿ ಮುಗಿಸಿದೆ. ಈ ಮೂಲಕ ಮಿಲೇನಿಯಂ ಸರಣಿಯ ಎಲ್ಲ ೧೬ ಪುಸ್ತಕಗಳನ್ನು ಓದಿದ ಹಾಗಾಯಿತು. ಯಾವುದೇ ಕಥೆಯನ್ನೋ ಅಥವಾ ಕಾದಂಬರಿಯನ್ನೋ ನಾನು ಓದುತ್ತಿರಬೇಕಾದರೆ ಮನಸ್ಸಿನ ಯಾವುದೋ ಒಂದು ಮೂಲೆಯಿಂದ ಎದ್ದು ಬರುವ ಪ್ರಶ್ನೆಯೆಂದರೆ "ಇದನ್ನು ಓದಿ ಆಗಬೇಕಾಗಿರುವುದು ಏನು ?" . ಈ ಪ್ರಶ್ನೆಗೆ ಸೂಕ್ತವಾದ ಉತ್ತರ ನನ್ನ ಮನಸ್ಸಿಗೆ ಇನ್ನೂ ಹೊಳೆದಿಲ್ಲ. ಆದರೆ, ಪುಸ್ತಕಗಳನ್ನು ಓದುವುದು ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುವುದಕ್ಕಿಂತ ಉತ್ತಮ ಹವ್ಯಾಸ ಎಂದು ನಂಬಿದ್ದೇನೆ. ಜಗತ್ತಿನ ವಿಸ್ಮಯಗಳ ಬಗ್ಗೆ ತಿಳಿಯುವ ಕುತೂಹಲ ಸಾಮಾನ್ಯವಾಗಿ ಎಲ್ಲಾ ಓದುಗರಿಗೂ ಇರುತ್ತದೆ. ಅಂತಹ ಓದುಗರಿಗೆ ವಿಸ್ಮಯ ವಿಶ್ವ ಪುಸ್ತಕಗಳು ಸಾಕಷ್ಟು ಇಷ್ಟವಾಗುತ್ತವೆ.
 
ಮಲೆನಾಡಿನ ದಟ್ಟ ಕಾಡುಗಳಲ್ಲಿ ಅಪರೂಪಕ್ಕೆ ಒಮ್ಮೊಮ್ಮೆ ಹಲ್ಲಿಯಂತೆ ಕಾಣುವ ಮೊಸಳೆಯ ದೇಹರಚನೆ ಹೋಲುವ ಉಡಗಳು ಕಾಣಸಿಗುತ್ತವೆ. ಇವುಗಳು ಹಾವಿನಂತೆ ಸೀಳು ನಾಲಿಗೆಯನ್ನು ಹೊಂದಿರುತ್ತವೆ. ಉಡಗಳಲ್ಲೇ ಅತ್ಯಂತ ದೊಡ್ಡ ಶರೀರದ ಉಡಗಳು 'ಕೊಮೊಡೋ ಡ್ರ್ಯಾಗನ್'. ಸುಮಾರು ಇಪ್ಪತ್ತು ಅಡಿಗಳವರೆಗೆ ಇವು ಬೆಳೆಯುವ ಸಾಧ್ಯತೆ ಇರುತ್ತದೆ. ಇವುಗಳು ಭೂಮಿಯ ಮೇಲೆ ಜೀವಂತವಾಗಿರುವುದು ನಂಬಲು ಸತ್ಯಕ್ಕೆ ದೂರವಾಗಿತ್ತು. ಏಕೆಂದರೆ, ಯಾರಾದರೂ ನೋಡಿದರೆ ತಾನೇ ನಂಬಲು ಸಾಧ್ಯ. ಕೊಮೊಡೋ ಡ್ರ್ಯಾಗನ್ ಕುರಿತ ಅನ್ವೇಷಣೆ ಹಾಗು ಅವುಗಳನ್ನು ಅಧ್ಯಯನ ಮಾಡಿದವರ ಲೇಖನಗಳನ್ನು ತೇಜಸ್ವಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದನ್ನು ಓದಿದ ನಂತರ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಅಲ್ಲಿ ಕೊಮೊಡೋ ಡ್ರ್ಯಾಗನ್ ಕುರಿತಾದ ವಿಶೇಷ ಎಪಿಸೋಡ್ ನೋಡಿದ ನಂತರ ಇವುಗಳು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದವು. 

ಕೊಮೊಡೋ ಡ್ರ್ಯಾಗನ್ 

ಯಾವುದೇ ಪ್ರಾಣಿಸಂಕುಲ ಅಳಿವಿನ ಅಂಚಿನಲ್ಲಿರುವ ಅರಿವಿಗೆ ಬಂದಾಗ ಅಲ್ಲಿನ ಸ್ಥಳೀಯ ಜನಗಳ ಹಾಗು ಪ್ರಾಣಿಸಂಕುಲವನ್ನು ರಕ್ಷಿಸುವ ಉದ್ದೇಶದಿಂದ ಮುನ್ನುಗ್ಗುವ ಉತ್ತಮ ಉದಾಹರಣೆ ಚಂದ್ರಸಿರಿ ಎಂಬ ಯುವಕ. ಆಮೆ ಮರಿಗಳ ರಕ್ಷಣೆಯನ್ನು ಅಂತಾರಾಷ್ಟ್ರೀಯ ಹಣದ ಸಹಾಯದೊಂದಿಗೆ ಹೇಗೆ ಮಾಡಲಾಯಿತು ಎಂದು ವಿವರಿಸಲಾಗಿದೆ. ಅತಿ ಬುದ್ಧಿಯ ಅವಿವೇಕಿ ಎಂಬ ಕಥೆಯು  ಇತ್ತೀಚಿಗೆ ಬಂದ "Young Sheldon" ಟಿವಿ ಸರಣಿ ನೆನಪಿಗೆ ತರುತ್ತದೆ. ರಷ್ಯಾದ ಕಮ್ಯುನಿಸ್ಟ್ ಅಧಿಕಾರಿಗಳು ನೆಡೆಸಿದ ಕೊಲೆಗಳಿಗೆ ಉದಾಹರಣೆಯಾಗಿ ಚಕ್ರವರ್ತಿಯ ಕೊಗ್ಗೊಲೆ ಇದೆ. ನಂತರ ಆಸ್ತಿ ಪಡೆಯಲು ಅನಾಸ್ಥೆಷಿಯ ಪಟ್ಟ ಪಾಡನ್ನು ಚಿತ್ರಿಸಲಾಗಿದೆ. 

ಕೊಲೆಯಾದ ಚಕ್ರವರ್ತಿಯ  ಕುಟುಂಬ 

ಫೋಟೋಗ್ರಫಿ ಅಷ್ಟೊಂದು ಮುಂದುವರಿಯದ ಕಾಲಕ್ಕೆ ಸಂಬಂಧಿಸಿದ ಟುರಿನ್ ಶಾಲಿನ ರಹಸ್ಯವನ್ನು ಓದುಗರಿಗೆ ಮನವರಿಕೆ ಮಾಡಿಸುವ ಪ್ರಯತ್ನದೊಂದಿಗೆ ಮೊದಲ ಪುಸ್ತಕ ಮುಗಿಯುತ್ತದೆ. ಆ ಶಾಲಿನಲ್ಲಿ ಮೂಡಿರಿವ ವ್ಯಕ್ತಿ ಯಾರು ? ಅದನ್ನು ಹೇಗೆ ಚಿತ್ರಿಸಲಾಯಿತು ಎಂಬುದರ ಬಗ್ಗೆ ಸಾವಿರಾರು ವಿಜ್ಞಾನಿಗಳು ಅವಲೋಕನ ಮಾಡಿದ್ದರೂ ಇಂದಿಗೂ ಅದು ರಹಸ್ಯವಾಗಿಯೇ ಉಳಿದಿದೆ. ಅಂತಹ ಚಿತ್ರವನ್ನೇ ಮೂಡಿಸಲು ಸಾಕಷ್ಟು ಪ್ರಯೋಗಗಳು ನಡೆದಿವೆ. ಮುಂದಾದರು ಈ ಶಾಲಿನ ಚಿತ್ರದ ಒಗಟನ್ನು ಬಿಡಿಸಲು ವಿಜ್ಞಾನಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಓದುಗರಲ್ಲಿ ಮೂಡುತ್ತವೆ. 

ಟುರಿನ್ ಶಾಲು 


ಶಾಲಿನಲ್ಲಿ ಮೂಡಿರುವ ನೆಗೆಟಿವ್ ಚಿತ್ರ 

ವಿಸ್ಮಯ ವಿಶ್ವ ಎರಡನೇ ಪುಸ್ತಕ ಕುತೂಹಲ ಕೆರಳಿಸುವ ಒಂಭತ್ತು ಲೇಖನಗಳನ್ನು ಒಳಗೊಂಡಿದೆ. ಇಂಗ್ಲೆಂಡ್ ಗದ್ದೆಗಳಲ್ಲಿ ರಹಸ್ಯವಾಗಿ ಮೂಡುವ ವೃತ್ತಾಕಾರದ ರಚನೆಗಳು ಮೊದಲನೇ ಲೇಖನ. ಇತಿಹಾಸದಲ್ಲಿ ಕಂಡ ಭೀಕರ ಕ್ಷಾಮದ ಬಗ್ಗೆಯೂ ಲೇಖನವಿದೆ. ನೈಲ್ ನದಿ ಈಜಿಪ್ಟ್ ರಾಷ್ಟ್ರಕ್ಕೆ ಜೀವ ತುಂಬುವ ನದಿ. ನದಿ ಬತ್ತಿದರೆ ತಿನ್ನಲು ಆಹಾರವಿಲ್ಲದೆ ಸಾಕುಪ್ರಾಣಿಗಳನ್ನು ಮತ್ತು ಸತ್ತವರ ಹೆಣಗಳನ್ನು ತಿನ್ನುವಷ್ಟು ಬರಗಾಲವನ್ನು ಜನರು ಎದುರಿಸಬೇಕಾಗುತ್ತದೆ. ಅಷ್ಟು ಭೀಕರ ಬರಗಾಲವನ್ನು ಓದುಗರಿಗೆ ವಿವರಿಸಲಾಗಿದೆ. ಬಾಕ್ಸ್ ಅಲ್ಲಿ ಒಳಗಡೆ ಸಿಕ್ಕಿ ಬಿದ್ದ ಮಗುವಿನ ಬಗ್ಗೆ ಒಂದು ಲೇಖನವಿದೆ. 

ಟೈಟಾನಿಕ್ ದುರಂತವನ್ನು ಈ ಪುಸ್ತಕ ಒಳಗೊಂಡಿದೆ. ಸಾಯುವ ಸಂದರ್ಭದಲ್ಲಿ ಮನುಷ್ಯರು ಹೇಗೆ ವರ್ತಿಸುತ್ತಾರೆ ಎಂಬ ಸ್ಥೂಲ ಚಿತ್ರಣ ಈ ಪುಸ್ತಕದಲ್ಲಿ ಕಾಣಸಿಗುತ್ತದೆ. ಕಳೆದ ಶತಮಾನದ ದೊಡ್ಡ ಸಾಧನೆಯಾದ ಸಿಡುಬು ರೋಗ ನಿವಾರಣೆ ಕುರಿತ ಲೇಖನ ಅದ್ಭುತವಾಗಿ ಮೂಡಿಬಂದಿದೆ. 

ಟೈಟಾನಿಕ್ ದುರಂತ 

ಇಡೀ ನಾಗರಿಕಥೆಯನ್ನೇ ಹೇಳ ಹೆಸರಿಲ್ಲದಂತೆ ನಾಶ ಮಾಡಿದ ಸಿಡುಬು ರೋಗವನ್ನು ಜಗತ್ತಿನಿಂದ ಹೇಗೆ ನಿರ್ಣಾಮ ಮಾಡಲಾಯಿತು ಎಂದು ವಿವರಿಸಲಾಗಿದೆ. ಉಳಿದಂತೆ ಜೇನುಗಳು ತಾವು ವಾಸಿಸುವ ವಾತಾವರಣಕ್ಕೆ ತಕ್ಕಂತೆ ಹೇಗೆ ತಮ್ಮ ನಡವಳಿಕೆಯಲ್ಲಿ ಬದಲಾವಣೆಗಳನ್ನು ತೋರುತ್ತವೆ ಎಂಬುದು ಬ್ರೆಜಿಲ್ನ ಕೊಲೆಗಡುಕ ಜೇನುಗಳೆಂಬ ಲೇಖನದಲ್ಲಿ ಇದೆ. 

ಹಿಮದಲ್ಲಿ ದೊರೆತ Otse ಅವಶೇಷ 

ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ಮಾನವನ ಅವಶೇಷವೊಂದು ದೊರೆತಾಗ ಅದನ್ನು ಸಂಗ್ರಹಿಸುವಲ್ಲಿ ಮಾಡಿದ ಎಡವಟ್ಟುಗಳನ್ನು ವಿವರಿಸಲಾಗಿದೆ. ಹಿಮದಲ್ಲಿ ಹುದುಗಿದ್ದ ಮೃತ ದೇಹವನ್ನು ಅಷ್ಟು ಹಳೆಯದೆಂದು ನಂಬಲೂ ಸಾಧ್ಯವಾಗದಷ್ಟು ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು ವಿಜ್ಞಾನಿಗಳ ಪುಣ್ಯವೇ ಸರಿ. ಆಗಿನ ಕಾಲದ ಆಯುಧಗಳು, ಬಟ್ಟೆಗಳು , ಚಕ್ರದ ಕಲ್ಪನೆಯ ಬಗ್ಗೆ ಸ್ಥೂಲವಾಗಿ ವರ್ಣಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಭತ್ತದ ಬುಟ್ಟಿಯನ್ನು ಮಾಡುವ ಕರಕುಶಲತೆಯ ಬಗ್ಗೆ ಹಾಗು ಮರಳುಗಾಡಿನಲ್ಲಿ ಅಪರೂಪಕ್ಕೆ ಕಾಣಸಿಗುವ ಸಾಗುವರ ಕಳ್ಳಿ ಸಸ್ಯವರ್ಗದ ಬಗ್ಗೆ ಒಂದು ಪುಟದ ಲೇಖನವಿದೆ. 

ಮಿಲೇನಿಯಂ ಸರಣಿಯ ಎಲ್ಲ ೧೬ ಪುಸ್ತಕಗಳನ್ನು ಖರೀದಿಸಲು ಈ ಲಿಂಕ್ ಬಳಸಿ 👉 https://t.co/iSaDeX2PiZ?amp=1


ಕಾಮೆಂಟ್‌ಗಳು

- Follow us on

- Google Search