ಏಳನೇ ತರಗತಿಯಲ್ಲಿ ಓದುತಿದ್ದಾಗ ನಡೆದ ಒಂದು ಘಟನೆ.

ನಾನು ಏಳನೇ ತರಗತಿಗೆ ಬರುವವರೆಗೂ ಕೇವಲ ನನ್ನ ಮನಸ್ಸಿನಲ್ಲಿ ಜಾಸ್ತಿ ಅಂಕ ತೆಗೆಯಬೇಕು ಎನ್ನುವ ಆಸೆ ಇತ್ತೇ ಹೊರತು ಅದಿಕ್ಕೆ ಬೇಕಾದಂತಹ ಪರಿಶ್ರಮ ಹಾಕುವುದು ನನಗೆ ಅಭ್ಯಾಸವಾಗಿರಲಿಲ್ಲ. ಹೀಗಾಗಿ ನಮ್ಮ ಶಾಲೆಯ ಶಿಕ್ಷಕರಿಗೆ ನನ್ನ ಮೇಲೆ ವಿಶೇಷ ಒಲವೇನು ಇರಲಿಲ್ಲ. ಯಾವಾಗಲೋ ಒಮ್ಮೆ ಚೆನ್ನಾಗಿ ಅಂಕ ತೆಗೆಯುತಿದ್ದೆ ಅಷ್ಟೇ. ಆದರೂ ಕೆಲವೊಂದಷ್ಟು ಶಿಕ್ಷಕರಿಗೆ ನಾನು ಬಹಳ ಇಷ್ಟವಾಗುತಿದ್ದೆ. ಕಾರಣ ಇಷ್ಟೇ ನನ್ನ ದುಂಡಾದ ಕೈಬರಹ. ಪರೀಕ್ಷೆಯಿರಲಿ, ನೋಟ್ಸ್ ಇರಲಿ, ರಫ್ ಬುಕ್ ಇರಲಿ ಎಲ್ಲ ಕಡೆಯಲ್ಲಿಯೂ ಅಷ್ಟೇ ಚಂದ ಬರೆಯುತಿದ್ದೆ. 


ಬರೀ ಚಂದ ಬರೆದರೆ ಸಾಕೆ? ಪರೀಕ್ಷೆಯಲ್ಲಿ ಬೇಕಾಗಿರುವುದು ಸರಿಯಾದ ಉತ್ತರ. ಇದು ನನಗೆ ಇನ್ನಿಲ್ಲದ ತೊಂದರೆಗಳನ್ನು ಕೊಡಲಾರಂಭಿಸಿತು. ನಮ್ಮ ಶಾಲೆಯಲ್ಲಿದ್ದ ಹುಡುಗಿಯರು ಸಿಕ್ಕಾಪಟ್ಟೆ ಓದುತ್ತಿದ್ದರು. ಇದಕ್ಕೆ ಎರಡು ಪ್ರಮುಖ ಕಾರಣಗಳಿದ್ದವು. ಮೊದಲನೆಯದು ಬಹಳಷ್ಟು ಜನ ನಮ್ಮ ಕನ್ನಡ ಮಾಧ್ಯಮ ಶಾಲೆ ಬಿಟ್ಟು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರುವ ಗುರಿ ಹೊಂದಿದ್ದರು, ಇನ್ನು ಕೆಲವರು ಓದಿನಲ್ಲಿ ಬಹಳ ಆಸಕ್ತಿಯುಳ್ಳವರಾಗಿದ್ದರು. ಇವರೆಲ್ಲರ ದೆಸೆಯಿಂದ ಹಾಗು ನನ್ನ ಆಸಕ್ತಿಯ ಕೊರತೆಯಿಂದಲೋ ಏನೋ ಶಾಲೆಯ ಮೇಲೆ ಹಾಗು ಓದಿನ ಮೇಲೆ ಸ್ವಲ್ಪ ಮಟ್ಟಿನ ಬೇಸರ ಉಂಟಾಗಿತ್ತು. 

ಒಂದು ತಮಾಷೆಯ ಅಥವಾ ನನಗೆ ಬಹಳ ಬೇಸರ ಉಂಟು ಮಾಡಿದ ಘಟನೆ ಏಳನೇ ತರಗತಿಯಲ್ಲಿದ್ದಾಗ ನಡೆಯಿತು. ಇಂಗ್ಲಿಷ್ ಕಾಪಿ ರೈಟಿಂಗ್ ದಿನಕ್ಕೆ ಒಂದು ಪೇಜ್ ಬರೆದು ಇಡಬೇಕಿತ್ತು. ನಾನು ಬರೆದಿರಲಿಲ್ಲ, ಕೇಳಿದಾಗ ತಂದಿಲ್ಲ ಎಂದು ಹೇಳಿದೆ. ಹೀಗೆ ಮತ್ತೊಂದಿಷ್ಟು ಜನರು ನನ್ನ ಜೊತೆಗಿದ್ದರು. ಅದಿಕ್ಕೆ ಕೈಗೆ ಎರಡು ಏಟು ಕೊಟ್ಟು ನಾಳೆ ಎರಡು ಪೇಜ್ ಬರೆದು ಇಡಬೇಕು ಅಂದರು. ಪುಣ್ಯಕ್ಕೆ ಬ್ಯಾಗ್ ಚೆಕ್ ಮಾಡಿಲ್ಲ. ಯಾಕಂದ್ರೆ ನಾನು ಆ ವರ್ಷಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳನ್ನು ಬ್ಯಾಗ್ ಅಲ್ಲೇ ತುಂಬಿಸಿ ಇಟ್ಟಿದ್ದೆ. ಮನೆಗೆ ಬಂದ ಮೇಲೆ ನೋಟ್ಸ್ ತೆಗೆದು, ಪನಿಶ್ಮೆಂಟ್ ನೀಡಿದ್ದ ಎರಡು ಪೇಜ್ ಹಾಗು ನಾಳೆಯ ಒಂದು ಪೇಜ್ ಸೇರಿಸಿ ಒಟ್ಟು ಮೂರು ಪೇಜ್ ಬರೆದು ತೆಗಿದಿಟ್ಟೆ. 

ನಾಳೆ ಮಧ್ಯಾಹ್ನ ಎಂದಿನಂತೆ ಕಾಪಿ ರೈಟಿಂಗ್ ಬಗ್ಗೆ ಬಂದವರೇ ಕೇಳಿದರು. ಎಲ್ಲರೂ ಇಟ್ಟರು. ನಿನ್ನೆ ಕೊಡದಿದ್ದವರು ಸೆಪೆರೇಟ್ ಆಗಿ ಇಡಲು ಹೇಳಿದರು. ಹೀಗೆ ಸ್ವಲ್ಪ ಹೊತ್ತು ಅದಿಕ್ಕೆ ರೈಟ್ ಹಾಕಿ ಸೈನ್ ಮಾಡಿ ಇಡುತಿದ್ದರು. ನಾನು ದೂರದಿಂದಲೇ ನನ್ನ ಬುಕ್ ಬಂದಾಗ ನೋಡಲು ಕುಳಿತಿದ್ದೆ. ನನ್ನ ಮನಸ್ಸಿನಲ್ಲಿ ಏನು ಯೋಚನೆ ಮಾಡುತಿದ್ದೆ ಎಂದರೆ, ಅಷ್ಟು ಚೆನ್ನಾಗಿ ಬರೆದುಕೊಂಡು ಬಂದಿದೀನಿ, ಅದಿಕ್ಕೆ V.Good ಹಾಕಿ ಎಲ್ಲರ ಮುಂದೆ ಹೊಗಳಬಹುದು. ನನಗೆ ಈ ರೀತಿಯ ಹಗಲು ಕನಸು ಕಾಣುವುದು ಆಗಲೇ ಅಭ್ಯಾಸವಾಗಿ ಹೋಗಿತ್ತು. 

ನನ್ನ ಬುಕ್ ಬಂದಾಗ ನನ್ನ ಹೆಸರನ್ನು ಕರೆದರು. ಎಲ್ಲರೂ ನನ್ನ ಕಡೆ ನೋಡಿದರು. ನಾನು ಒಳಗೆ ಒಳಗೆ ಖುಷಿ ಹಾಗು ಹೆಮ್ಮೆಯಿಂದ ಅವರ ಹತ್ತಿರ ಹೋಗಿ ನಿಂತೆ. ಫಟಾರ್ ಅಂತ ಕಪಾಳಕ್ಕೆ ಒಂದು ಹೊಡೆದರು. ನನಗೆ ಅಲ್ಲಿಯವರೆಗೂ ಯಾರೂ ಸಹ ಕಪಾಳಕ್ಕೆ ಹೊಡೆದಿರಲಿಲ್ಲ. ನನಗೆ ಒಂದು ಕ್ಷಣ ಏನು ಮಾಡಬೇಕೆಂದೂ ಸಹ ತಿಳಿಯಲಿಲ್ಲ. ಅತಿ ಬುದ್ಧಿವಂತಿಕೆ ತೋರಿಸಬೇಡ ಅಂತ ಬಯ್ದರು. ನೋಟ್ಸ್ ವಾಪಸ್ಸು ತೆಗೆದುಕೊಂಡು ಬಂದು ಸುಮ್ಮನೆ ಕೂತೆ. ಮುಖವೆಲ್ಲ ಬಿಸಿ ಆದಂತೆ ಅನ್ನಿಸುತಿತ್ತು, ಕಿವಿ ಕೆಂಪಾಗಿತ್ತು. ಏನಾಯ್ತು ಎನ್ನುವುದೂ ಸಹ ಚಿಂತಿಸದಷ್ಟು ಬೇಜಾರು ನನ್ನ ಮನಸ್ಸನ್ನು ಆಕ್ರಮಿಸಿತ್ತು.

ಆಮೇಲೆ ಯಾಕೆ ಹೊಡಿದಿರಬಹುದು ಎಂದು ನನ್ನ ಜೊತೆ ನಿನ್ನೆ ನಿಂತಿದ್ದವರ ಹತ್ತಿರ ಕೇಳಿದೆ. ಅವರೆಲ್ಲ ನಾಲ್ಕು ಪೇಜ್ ಬರೆದಿದ್ದರು. ನಾನು ಮೂರು ಪೇಜ್ ಬರೆದಿದ್ದೆ. ಮತ್ತೆ ಮನೆಗೆ ಬಂದಾಗ ಅದೇ ಯೋಚನೆ. ನಾಳೆಗೆ ಎಷ್ಟು ಪೇಜ್ ಬರೀಬೇಕು ?  

ಇನ್ನೊಂದು ಸರಿ ಹಾಗೆಲ್ಲ ಹೊಡೆದರೆ ನೇರವಾಗಿ ಶಾಲೆಯ ಆಡಳಿತ ಮಂಡಳಿಯಲ್ಲಿದ್ದ ಒಬ್ಬರಿಗೆ ಹೇಳಬೇಕೆಂದು ನಿರ್ಧರಿಸಿದೆ. ಯಾಕಂದರೆ ಅವರ ಅಂಗಡಿಯಲ್ಲೇ ನಾವು ದಿನಸಿ ಖರೀದಿಸುತ್ತಿದ್ದೆವು. ಇಷ್ಟು ಧೈರ್ಯ ಬಂದ ಮೇಲೆ ರಿಸ್ಕ್ ಯಾಕೆ ಅಂತ ಸುಮ್ಮನೆ ನಾಲ್ಕು ಪೇಜ್ ಬರೆದು ಇಟ್ಟೆ ಮಾರನೇ ದಿನ😂

ಎಂಟನೇ ತರಗತಿ ಮುಗಿಯುವವರೆಗೂ ಬರೀ ಈ ತರಹದ ಗೋಜಲುಗಳಲ್ಲೇ ನನ್ನ ಶಾಲಾ ದಿನಗಳನ್ನು ಕಳೆದಿದ್ದು. ಈ ಘಟನೆ ಕೆಲವೊಮ್ಮೆ ನನಗೆ ನೆನಪಾಗುತ್ತಿರುತ್ತದೆ. ಆ ಶಿಕ್ಷಕಿ ಮಾಡಿದ ಕೆಲಸ ತಪ್ಪೆಂದು ಗೊತ್ತಿದೆ. ಆದರೆ, ಅವರಿಗೆ ನನ್ನ ಮೇಲೆ ವಿಶೇಷ ಕಾಳಜಿ ಇದ್ದಿದ್ದು ಮಾತ್ರ ನಿಜ. ಆ ಕಾಳಜಿಯೇ ನನ್ನ ಸಣ್ಣ ತಪ್ಪಿಗೆ ಅಷ್ಟು ಕೋಪವಾಗಿ ಮಾರ್ಪಾಡಾಗಿತ್ತು ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಶಾಲೆ ಬಿಟ್ಟು ಸುಮಾರು ಐದು ವರ್ಷಗಳ ನಂತರ ಶಾಲೆಗೆ ಹೋದಾಗ, ಶಿಕ್ಷಕರ ಕೊಠಡಿಯಲ್ಲಿ ಸಾಕಷ್ಟು ಮಾತಾಡಿ, puc ಅಲ್ಲಿ ಇಂಗ್ಲಿಷ್ ಅಲ್ಲಿ ಕಡಿಮೆ ಅಂಕ(೮೮/೧೦೦) ಬಂದಾಗ ಸ್ವಲ್ಪ ಬೇಸರವಾಗಿದ್ದನ್ನು ಸಹ ನಾನು ನೋಡಿದ್ದೆ. ಅಷ್ಟೇ ಕೊಡೋದು ಇಂಗ್ಲಿಷ್ ಅಲ್ಲಿ ಅಂತ ಹೇಳಿದಾಗ, ನಿಮಗೆ ಲ್ಯಾಂಗ್ವೇಜ್ ಅಂದ್ರೆ negligence ಎಂದು ಹೇಳಿದ್ದರು.  

ಕಾಮೆಂಟ್‌ಗಳು

- Follow us on

- Google Search