ಒಂದು ಶಿಕಾರಿಯ ಕಥೆ

ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಕಟ್ಟಿಕೊಂಡಿದ್ದ ಮನೆಯ ಕಟ್ಟೆಯ ಮೇಲೆ ಕೂತು ರಂಜಿತ್ ಬಿಸಿ ಕಾಫಿ ಹೀರುತ್ತಿದ್ದ.  ದಿನವೆಲ್ಲ ಕೆಲಸ ಮಾಡಿ ದಣಿದಿದ್ದ ಅವನು ತಾನು ಮದುವೆಯಾದ ನಂತರ ಶಿಕಾರಿಗೆ ಹೋಗುವುದು ಕಡಿಮೆ ಆಗಿದೆ ಎಂದು ಆಲೋಚಿಸುತ್ತಿದ್ದ. ಅದಕ್ಕೆ ಎರಡು ಪ್ರಮುಖ ಕಾರಣಗಳಿದ್ದವು. ಮೊದಲನೆಯದು, ಮೊದಲಿನಂತೆ ಗೊತ್ತು ಗುರಿಯಿಲ್ಲದೆ ಕೋವಿ ಹಿಡಿದು ದಟ್ಟ ಕಾಡುಗಳಲ್ಲಿ ನಾಯಿಯಂತೆ ಅಲೆಯುವುದನ್ನು ಕಂಡು ಹೆಂಡತಿ ಬಯ್ಯುತ್ತಿದ್ದಳು. ಎರಡನೆಯದು ಫಾರೆಸ್ಟ್ ಡಿಪಾರ್ಟ್ಮೆಂಟ್ ಅವರು ಶಿಕಾರಿ ಮಾಡುವವರ ಮೇಲೆ ಹದ್ದಿನ ಕಣ್ಣಿಡುತ್ತಿದ್ದಾರೆ ಎಂಬ ಸುದ್ಧಿಯನ್ನು ತನ್ನ ಸ್ನೇಹಿತರಿಂದ ತಿಳಿದಿದ್ದ. 


ಒಂದು ತಿಂಗಳ ಹಿಂದೆ ಜಿಂಕೆಯೊಂದನ್ನು ಕೊಂದಿದ್ದ ಶ್ಯಾಮೇಗೌಡರ ಮಗ ಸಂಪತ್ ಗೌಡನನ್ನು ಮನೆಗೆ ಬಂದು ವಿಚಾರಿಸಿ ಕೋವಿಯನ್ನು ಹಾಗು ಹುಗಿದಿಟ್ಟಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದರು. ಗೌಡರ ಮಗ ಇಂದು ಕಂಬಿ ಎಣಿಸುತಿದ್ದ. ಈ ಘಟನೆ ನಡೆದ ನಂತರ ಊರಿನ ಶಿಕಾರಿದಾರರಲ್ಲಿ ಭಯ ಹೆಚ್ಚಾಗಿತ್ತು. ಕೋವಿ ಹಿಡಿದು ಕಾಡು ತಿರುಗುತ್ತಿದ್ದವರು ತಮ್ಮ ತೋಟದಲ್ಲೇ ಹಂದಿ ಬಂದರೆ ಹೊಡೆಯಲು ಹೊಂಚು ಹಾಕುತಿದ್ದರು. ಯಾಕಂದರೆ ಮುಂದಿನ ತಿಂಗಳುಗಳಲ್ಲಿ ಚುನಾವಣೆ ಬರುವುದರಿಂದ ಕೋವಿಯನ್ನು ಪೋಲೀಸರ ವಶಕ್ಕೆ ಒಪ್ಪಿಸಬೇಕಿತ್ತು. 


ಸ್ವಲ್ಪ ಮಳೆಯಾದ ದಿನ ಶಿಕಾರಿಗೆ ಹೋದರೆ ಏನಾದರೂ  ಪ್ರಾಣಿ ಸಿಗುವುದಂತೂ ಖಂಡಿತ ಎಂಬ ನಂಬಿಕೆ ರಂಜಿತ್ ತಲೆಯಲ್ಲಿ ಸುಳಿಯಿತು. ಮನೆಯವರೂ ಕಾಡು ಪ್ರಾಣಿಗಳ ರುಚಿ ನೋಡದೆ ಸಾಕಷ್ಟು ದಿನವಾಗಿತ್ತು. ಹೀಗಾಗಿ ಮನೆಯಲ್ಲಿರುವ ಕೆಲವರಿಗೆ ಶಿಕಾರಿಗೆ ಹೋಗಿದ್ದರೆ ಒಂದೆರಡು ತುಂಡಾದರೂ ಜಗಿಯಬಹುದು ಎಂಬ ಆಸೆಯಿತ್ತು. ಆದರೆ, ತನ್ನ ಹೆಂಡತಿ ಮಾತ್ರ ಇದಕ್ಕೆ ಒಪ್ಪುತ್ತಿರಲಿಲ್ಲ. ಯಾಕಂದರೆ, ಬೇರೆ ಶಿಕಾರಿದಾರರಂತೆ ಸುಮ್ಮನೆ ಕಾಡು ಸುತ್ತಿ ಸುಸ್ತಾಗಿ ಮನೆಗೆ ಕಾಲಿ ಕೈಯಲ್ಲಿ ಹಿಂತಿರುಗಿದ ದಿನ ಇತಿಹಾಸದಲ್ಲಿ ಇರಲಿಲ್ಲ. ಹೀಗಾಗಿ ಅಳಿವಿನ ಅಂಚಿನಲ್ಲಿ ಇರುವ ಯಾವುದಾದರೂ ಪ್ರಾಣಿ ಹೊಡೆದರೆ ಅರಣ್ಯ ಇಲಾಖೆಯವರು ಸುಮ್ಮನೆ ಇರುವುದಿಲ್ಲ ಎಂಬ ಚಿಂತೆ ಅವಳಿಗೆ ಯಾವಾಗಲೂ ಕಾಡುತಿತ್ತು. 

ಇದೇ ಚಿಂತೆಯಲ್ಲಿ ರಂಜಿತ್ ಸುಮ್ಮನೆ ಕೂತಿರಬೇಕಾದರೆ ದೂರದಲ್ಲಿ ತನ್ನ ಮನೆಯ ದಾರಿಯಲ್ಲಿ ಕಾರ್ ಬರುವುದು ಕಂಡಿತು. ಕಾರ್ ಹತ್ತಿರವಾದಾಗ ಅದು ತನ್ನ ಗೆಳೆಯ ಈಶ್ವರ್ ಎಂಬಾತನಿಗೆ ಸೇರಿದ್ದು ಎಂದು ತಿಳಿಯಿತು. ಈಶ್ವರ್ ಹಾಗು ರಂಜಿತ್ ಬಹಳ ಆಪ್ತ ಗೆಳೆಯರಾಗಿದ್ದರೂ ಅವನು ಮನೆಯ ಒಳಗೆ ಬರುತ್ತಿರಲಿಲ್ಲ. ಹಿಂದೊಮ್ಮೆ ಅವನು ರಂಜಿತ್ ಮನೆಗೆ ಬಂದಾಗ "ಇಂತಹ ಊರುಹಾಳು  ಮಾಡುವ ಮುಂಡೆಗಂಡ್ರು ಜೊತೆ ಸೇರಿ ನನ್ನ ಗಂಡ ಹಾಳಾಗಿದ್ದು"  ಎಂಬ ಬೈಗುಳವನ್ನು ಕೇಳಿಯೂ ಕೇಳದಂತೆ ವಾಪಸ್ಸು ಹೋಗಿದ್ದ. ರಂಜಿತ್ ಎದ್ದು ಗೆಳೆಯನ ಕಾರಿನ ಬಳಿ ಹೋದ . ಕಾರ್ ಬಾಗಿಲು ತೆಗೆದು ಒಳಗೆ ಕೂತು ಮಾತು ಆರಂಭಿಸಿದರು. 

ಗೆಳೆಯರಿಬ್ಬರೂ ಕಾರಿನಲ್ಲೇ ಕೂತು ಒಂದೊಂದು ಪೆಗ್ ಏರಿಸಿ ಊರಿನ ಸಮಸ್ಯೆಗಳ ಬಗ್ಗೆ ಸ್ವಲ್ಪ ಹೊತ್ತು ಮಾತಾಡಿದರು. ಗೌಡರ ಮಗ ಪ್ರಾಣಿ ಹೊಡೆದಿದ್ದು ಅವರ ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ. ಆದರೂ ಅದು ಹೇಗೆ ಅವನ ಮನೆಯನ್ನೇ ಹುಡುಕಿ ಅರಣ್ಯ ಅಧಿಕಾರಿಗಳು ಬಂದರು ಎಂದು ದೀರ್ಘವಾಗಿ ಚಿಂತಿಸಿದರು. ಇಬ್ಬರಿಗೂ ಏನನ್ನೂ ಸ್ಪಷ್ಟವಾಗಿ ಚಿಂತಿಸಲು ಆಗಲಿಲ್ಲ. ಕುಡಿದ ಬಾಯಿಗೆ ಹುರಿದ ಕಾಡು ಪ್ರಾಣಿಯ ಮಾಂಸವಿದ್ದರೆ ಚೆನ್ನಾಗಿರುತಿತ್ತು ಎಂದು ಇಬ್ಬರಿಗೂ ಅನ್ನಿಸಿತು. ರಂಜಿತ್ ಮನೆಗೆ ಹೋಗಿ ಕೋವಿ, ಬುಲೆಟ್, ಹರಿತವಾದ ಕತ್ತಿಯನ್ನು ತಂದು ಕಾರಿನಲ್ಲಿ ಇಟ್ಟ. ಇಬ್ಬರೂ ಊರಿಂದ ಸ್ವಲ್ಪ ದೂರದಲ್ಲಿದ್ದ ಕಾಡಿನ ಕಡೆಗೆ ಶಿಕಾರಿಗೆ ಕಾರಿನಲ್ಲಿ ಹೊರಟರು. 


ತಾವು ಯಾವಾಗಲೂ ನಿಲ್ಲಿಸುತ್ತಿದ್ದ ಜಾಗದಲ್ಲೇ ಕಾರು ನಿಲ್ಲಿಸಿ ದಟ್ಟ ಕಾಡಿನಲ್ಲಿ ಪುಟ್ಟ ಪುಟ್ಟ ಕಳ್ಳ ಹೆಜ್ಜೆಗಳನ್ನಿಟ್ಟು ಮುಂದೆ ಸಾಗಿದರು. ಮಳೆ ಬಂದಿದ್ದರಿಂದ ಅಲ್ಲಲ್ಲಿ ಕೆಸರಿನಲ್ಲಿ ಕಾಲು ಜಾರುತಿತ್ತು. ಹೀಗೆಯೇ ಒಂದೆರಡು ಗಂಟೆಗಳ ಕಾಲ  ದಟ್ಟ ಕಾಡಿನಲ್ಲಿ ಒಬ್ಬರ ಹಿಂದೆ ಒಬ್ಬರು ಪ್ರಾಣಿಗಾಗಿ ಹುಡುಕಾಡಿದರು. ಯಾವ ಪ್ರಾಣಿಯಿರಲಿ, ಒಂದೇ ಒಂದು ಸದ್ದು ಕೂಡ ಕೇಳದಷ್ಟು ಕಾಡು ಮೌನವಾಗಿತ್ತು. ರಂಜಿತ್ ಮನಸ್ಸಿನಲ್ಲಿ ಹುಲಿ ಏನಾದರೂ ಸಮೀಪದಲ್ಲಿದಿಯೇ ? ಎಂಬ ಅನುಮಾನ ಸುಳಿದಾಡಿತು. ಆದರೂ ಅದನ್ನು ಸ್ನೇಹಿತನಿಗೆ ಹೇಳಿ ಧೈರ್ಯಗೆಡಿಸುವ ಯತ್ನ ಮಾಡಲಿಲ್ಲ. ಇನ್ನು ಮುಂದೆ ಕಾಡಿನಲ್ಲಿ ಸಾಗುವುದು ಅಪಾಯಕರವಾಗಿ ಭಾಸವಾಯಿತು. ಕೂಡಲೇ ಇನ್ನೊಂದು ದಾರಿಯಿಂದ ಕಾಡಿನಿಂದ ಹೊರಹೋಗುವ ದಾರಿಯನ್ನು ಹಿಡಿದು ನಡೆಯಲಾರಂಭಿಸಿದರು. 

ಹೀಗೆ ದಾರಿಯಲ್ಲಿ ನಡೆದು ಬರುತಿದ್ದಾಗ ಒಂದು ದೊಡ್ಡ ದಿಬ್ಬವನ್ನು ದಾಟಿದ ನಂತರ ಜಿಂಕೆಗಳಂತೆ ಕಾಣುವ ಐದಾರು ಪ್ರಾಣಿಗಳು ನಿಂತಿರುವುದು ಕಣ್ಣಿಗೆ ಬಿತ್ತು. ತಡ ಮಾಡದೇ ಬಂದೂಕಿನಿಂದ ಗುಂಡನ್ನು ಹಾರಿಸಿದರು. ಬಹಳ  ಹತ್ತಿರದಿಂದ ಆಕಸ್ಮಿಕವಾಗಿ ಎದುರಾದ ಪ್ರಾಣಿಗಳಿಗೆ ಗುರಿಯಿಟ್ಟು ಹೊಡೆದ ಖುಷಿಯಲ್ಲಿ ಇಬ್ಬರೂ ಸ್ಥಬ್ಧವಾಗಿ ಹೋದರು. ಮುಖ ಮುಖ ನೋಡಿಕೊಂಡು ವೇಗವಾಗಿ ಬಿದ್ದಿದ್ದ ಎರಡು ಪ್ರಾಣಿಗಳತ್ತ ಹೋದರು. ಒಂದಕ್ಕೆ ಸ್ವಲ್ಪ ಜೀವ ಇತ್ತು. ಹರಿತವಾದ ಕತ್ತಿ ಈಗ ಕೆಲಸಕ್ಕೆ ಬಂತು. ಇಬ್ಬರೂ ಖುಷಿಯಿಂದ ಪ್ರಾಣಿ ಹೊತ್ತುಕೊಂಡು ಕಾರ್ ನಿಲ್ಲಿಸಿದ ಜಾಗ ತಲುಪಲು ನಡೆಯತೊಡಗಿದರು. 


ಪ್ರಾಣಿಗಳೆಲ್ಲ ನಡೆದಾಡಿದ್ದ ಹೆಜ್ಜೆಯ   ಗುರುತುಗಳು ಟಾರ್ಚ್ ಬೆಳಕಿನಲ್ಲಿ ಅವರಿಗೆ ಕಾಣತೊಡಗಿದವು. ಇನ್ನೇನು ಕಾರನ್ನು ಸಮೀಪಿಸಲು ಸ್ವಲ್ಪ ದೂರ ಉಳಿದಿತ್ತು. ರಂಜಿತ್ ಬಹಳ ಧೈರ್ಯದಿಂದ ಮುಂದೆ ಮುಂದೆ ಹೆಜ್ಜೆ ಹಾಕುತ್ತಿದ್ದ. ಇದ್ದಕ್ಕಿದ್ದಂತೆ ರಂಜಿತ್ ಮುಖಕ್ಕೆ ಬೆಳಕು ಅಪ್ಪಳಿಸಿತು. ಚಕ್ ಚಕ್ ಚಕ್ ಎಂದು ಐದಾರು ಬಾರಿ ಸದ್ದಾಯಿತು. ಏನೆಂದು ತಡವರಿಸಿ ನೋಡಿದಾಗ ಇಬ್ಬರೂ ನಡುಗತೊಡಗಿದರು. ಪಶ್ಚಿಮ ಘಟ್ಟಗಳಲ್ಲಿ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಗಣತಿ ಮಾಡಲು ಅವು ಓಡಾಡುವ ದಾರಿಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆ ಭಾಗದಲ್ಲಿ ಚಲೆನೆಯನ್ನು ಸೆನ್ಸರ್ ಗುರುತಿಸಿ ಫೋಟೋಗಳನ್ನು ತೆಗೆದು ಅರಣ್ಯ ಇಲಾಖೆಯ ಸರ್ವರ್ ಗೆ ಅಪ್ಲೋಡ್ ಮಾಡುತಿತ್ತು. 

ಈಗ ಅದೇ ಕೆಲಸವನ್ನು ಕ್ಯಾಮೆರಾಗಳು ಮಾಡಿವೆ. ಇಬ್ಬರ ಫೋಟೋಗಳನ್ನು ಹೊಡೆದ ಪ್ರಾಣಿಯ ಸಮೇತ ತೆಗೆದು ಸರ್ವರ್ ಗೆ ಅಪ್ಲೋಡ್ ಮಾಡಿವೆ. ಇಬ್ಬರಿಗೂ ಕ್ಷಣಕಾಲ ದಿಕ್ಕೇ ತೋಚದಂತಾಯಿತು. ಈಶ್ವರ್ ಭಯದಲ್ಲಿ ಕ್ಯಾಮೆರಾಗಳನ್ನು ಚಚ್ಚಿ ಪುಡಿ ಮಾಡಿದ. ನಂತರ ಸುತ್ತಲೂ ಎಲ್ಲಾದರೂ ಕ್ಯಾಮೆರಾ ಇವೆಯೇ ಎಂದು ಹುಡುಕಿದರು. ಕಗ್ಗತ್ತಲ ಕಾಡಿನಲ್ಲಿ ಹುದುಗಿಟ್ಟ ಕ್ಯಾಮೆರಾಗಳನ್ನು ಹುಡುಕುವುದು ಇನ್ನೂ ಹೆಚ್ಚಿನ ತೊಂದರೆಯನ್ನೇ ಉಂಟುಮಾಡುತ್ತದೆ ಎಂದು ಅರಿವಾಗಿದ್ದೆ ತಡ ಪುಡಿಯಾದ ಕ್ಯಾಮೆರಾ ಹಾಗು ಹೊಡೆದ  ಪ್ರಾಣಿಯೊಂದಿಗೆ ಕಾರ್ ಬಳಿ ಬಂದು ಹತ್ತಿದರು. 

ಏನು ಮಾಡಬೇಕೆಂದು ದಿಕ್ಕೇ ತೋಚದೆ ಮತ್ತೊಂದು ಪೆಗ್ ಏರಿಸಿದರು. ಕಾರನ್ನು ನೇರವಾಗಿ ತುಂಬಿ ಹರಿಯುತ್ತಿದ್ದ ನದಿ ಕಡೆಗೆ ಓಡಿಸಿದರು. ಸತ್ತ ಪ್ರಾಣಿಯನ್ನು ತುಂಡು ತುಂಡಾಗಿ ಕತ್ತರಿಸಿ ಹೊಳೆಗೆ ಎಸೆದರು. ಕ್ಯಾಮೆರಾದ ಉಳಿದ ಅವಶೇಷಗಳನ್ನು ಹರಿಯುವ ನದಿಗೆ ಎಸೆದರು. ಮಳೆ ಬಂದಿದ್ದರಿಂದಲೋ ಏನೋ ನದಿ ತುಂಬಿ ಹರಿಯುತ್ತಿತ್ತು. ಒಂದೆರಡು ಗಂಟೆ ಕಾರಿನಲ್ಲೇ ಕೂತು ಯೋಚಿಸಿ, ಬೆಳಗ್ಗಿನ ಜಾವ ಲಾಯರ್ ಆಗಿದ್ದ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದರು. ಗೆಳೆಯ ಅರ್ಜೆಂಟ್ ಆಗಿ ಒಂದು ಲಕ್ಷ ಕೊಟ್ಟು ಹಾಳಾದ ಕ್ಯಾಮೆರಾ ಬದಲು ಹೊಸ ಕ್ಯಾಮೆರಾ ಕೊಡಿಸುವಂತೆ ಸಲಹೆ ಕೊಟ್ಟು ಸ್ವಲ್ಪ ದಿನಗಳ ಕಾಲ ಊರು ಬಿಟ್ಟು ಬೇರೆಲ್ಲಾದರೂ ಹೋಗುವಂತೆ ಸೂಚಿಸಿದ. ಮುಂದೇನಾಗುತ್ತದೋ ಎಂಬ ಚಿಂತೆಯೊಂದಿಗೆ ಕಾರನ್ನು ದೂರದ ಊರಿನೆಡೆಗೆ ತಿರುಗಿಸಿದರು. 

ಕುಡಿದ ನಶೆ ಇಳಿದಾಗ ಅವರಿಗೆ ಅರ್ಥವಾಯಿತು, ಯಾರ ಸಹಾಯವೂ ಇಲ್ಲದೆ ಶಿಕಾರಿ ಮಾಡುವವರನ್ನು ಹೇಗೆ ಒಂದು ಕ್ಯಾಮೆರಾ ಮಟ್ಟಹಾಕುತ್ತಿದೆ ಎಂಬುದು. ಲಕ್ಷಾಂತರ ಹಣ ಸುರಿದರೆ ಅಧಿಕಾರಿಗಳ ಸಹಾಯದಿಂದ ಕ್ಯಾಮೆರಾ ಮಳೆಯಿಂದ ಹಾಗು ಕಾಡು ಪ್ರಾಣಿಗಳಿಂದ ಹಾಳಾಯಿತು ಎಂದು ಬಚಾವ್ ಆಗಬಹುದು. ಆದರೆ ಕ್ಲೌಡ್ ಸ್ಟೋರೇಜ್ ಅಲ್ಲಿರುವ ಫೋಟೋಗಳನ್ನು ಅಳಿಸಿ ಹಾಕಲು ಯಾರನ್ನು ಕೇಳಬೇಕು ಎನ್ನುವ ಚಿಂತೆಯೊಂದಿಗೆ ವೇಗವಾಗಿ ಹೈವೇ ಅಲ್ಲಿ ಕಾರನ್ನು ಓಡಿಸಿದರು. 

-- ವಿಶೇಷ ಸೂಚನೆ : ಕಥೆ ಹಾಗು ಇಲ್ಲಿನ ಪಾತ್ರಗಳು ಕೇವಲ ಕಾಲ್ಪನಿಕ, ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ

-- ಧನ್ಯವಾದಗಳು 

ಕಾಮೆಂಟ್‌ಗಳು

- Follow us on

- Google Search