ಕೊರೊನ ಎರಡನೇ ಅಲೆ.

 


ಕೊರೊನ ೨೦೧೯ ರಲ್ಲಿ ಚೀನಾ ದೇಶದಲ್ಲಿ ಹರಡಲು ಆರಂಭವಾದ ಸುದ್ಧಿಯನ್ನು  ಓದಿದಾಗ ನಮ್ಮ ದೇಶದಲ್ಲಿ  ಆರಂಭವಾದರೆ ಇದರ  ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ ಎನ್ನುವ ಭಯ ಮನಸ್ಸಿನಲ್ಲಿ ಮೂಡಿತ್ತು.  ನಾವೆಲ್ಲ ಅಂದುಕೊಂಡ ಎಲ್ಲಾ ಊಹೆಗಳನ್ನು ಮೀರಿ ಕೊರೊನ ನಮ್ಮ ದೇಶದಲ್ಲಿ ಸಾವು  ನೋವುಗಳನ್ನು ಕಾಣಬೇಕಾಯಿತು. ಮೊದಲ ಅಲೆಯ ಸಂದರ್ಭದಲ್ಲಿ ವಯಸ್ಸಾದವರು ಸಾವಿಗೆ ತುತ್ತಾಗಿದ್ದರು. ಕೊರೊನ ಮೊದಲನೇ  ಅಲೆಯ ಪರಿಣಾಮಗಳು ಇಳಿಮುಖ ಕಾಣುತ್ತಿದ್ದಂತೆ ಎಲ್ಲರೂ ಸ್ವಲ್ಪ ನೆಮ್ಮದಿಯಿಂದ ಇದ್ದರು. 

ಈ ಸಂದರ್ಭಗಳಲ್ಲಿ ತಜ್ಞರು ಸರ್ಕಾರ ಮತ್ತು ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಇದಕ್ಕೆ ಯಾರೂ ಸಹ ಕಿವಿಕೊಡಲೇ ಇಲ್ಲ. ತಮ್ಮ ಪಾಡಿಗೆ ತಾವು ರಾಜಕೀಯ ಪ್ರಚಾರ, ಧಾರ್ಮಿಕ ಆಚರಣೆಗಳು, ಮದುವೆ ಸಮಾರಂಭಗಳು, ಪ್ರವಾಸ ಮುಂತಾದ ಜನಸೇರುವ ಕಾರ್ಯಗಳು ಆರಂಭವಾದವು. ಕೊರೊನ ಗೆದ್ದ ಖುಷಿಯಲ್ಲಿ ತಮ್ಮ ಸಾಹಸವನ್ನು ವಿಶ್ವಕ್ಕೆ ವರ್ಣಿಸಿದರು. ಮೆಲ್ಲನೆ ಶುರುವಾದ ಎರಡನೇ ಅಲೆ ತನ್ನ ವಿರಾಟ್ ರೂಪವನ್ನು ಆರಂಭದ ದಿನಗಳಲ್ಲೇ ತೋರಿಸಿತು. 
ಕೆಲವೇ ದಿನಗಳಲ್ಲಿ ಆಕ್ಸಿಜನ್ ಕೊರತೆ ಎದುರಾಯಿತು. ಜನರು ಲಸಿಕೆಯ ಬಗ್ಗೆ ಪ್ರಶ್ನಿಸತೊಡಗಿದರು. ಸಾಲು ಸಾಲು ಹೆಣಗಳು ಚಿತಾಗಾರದಲ್ಲಿ ಸರತಿ ಸಾಲಿನಲ್ಲಿ ನಿಂತವು. 

ನಮ್ಮಂಥ ಯುವಕರಿಗೆ ಏನು  ಆಗೋದಿಲ್ಲ ಎಂಬ ಭ್ರಮೆಯಲ್ಲಿದ್ದ ಸಾವಿರಾರು  ಯುವಕರು ಕೊರೊನ ಎರಡನೇ  ಅಲೆಗೆ ಬಲಿಯಾದರು. ಮೊದಲನೇ ಅಲೆಯಲ್ಲಿ  ನನಗೆ ಪರಿಚಯವಿದ್ದವರು ಕೊರೊನದಿಂದ ಮೃತಪಟ್ಟಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ನನ್ನ ಕಾಲೇಜಿನ ೫ ಪ್ರಾಧ್ಯಾಪಕರು, ಅವರ ಮನೆಯ ೪ ಜನ ಹಾಗು ನನ್ನ ಗೆಳೆಯನಾಗಿದ್ದ ೨೨ ವರ್ಷದ ಯುವಕ ಕೊರೊನ  ಇಂದ ಮೃತಪಟ್ಟಿದ್ದಾರೆ. ನಮ್ಮ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ೪೫ ವರ್ಷದ ವ್ಯಕ್ತಿ ಮೊನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಮ್ಮವರನ್ನು ಕಳೆದುಕೊಂಡಾಗ ಮಾತ್ರ ಯಾವುದೇ ಕಾಯಿಲೆಯ ಭೀಕರ ಸ್ವರೂಪ ನಮಗೆ ಅರ್ಥವಾಗಲು ಸಾಧ್ಯ. ಅಲ್ಲಿಯವರೆಗೆ ಯಾರು ಎಷ್ಟೇ ಬಾಯಿ ಬಡಿದುಕೊಂಡರೂ ನಮ್ಮ ಉಡಾಫೆಯ ಆಲೋಚನೆಗಳು ನಿಲ್ಲುವುದಿಲ್ಲ. ಕೊರೊನದಿಂದ ಸಾಕಷ್ಟು ಕುಟುಂಬಗಳು ಅತಂತ್ರವಾಗಿವೆ. ಎಷ್ಟೋ ವಿದ್ಯಾರ್ಥಿಗಳ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಇವೆಲ್ಲದರ ನಡುವೆ ಮನೆಯಲ್ಲೇ ಇರಿ ಎನ್ನುವ ನಿರ್ಬಂಧದ ನಂತರ ದಿನನಿತ್ಯದ ಮೂರೂ ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. 

ಇವೆಲ್ಲ ಒಂದೆಡೆಯಾದರೆ, ತಮ್ಮ ಜೀವನವನ್ನೇ ಪಣಕ್ಕಿಟ್ಟು ವೈದ್ಯರು ಶ್ರಮಿಸುತ್ತಿದ್ದಾರೆ. ಆಕ್ಸಿಜನ್ ಒದಗಿಸಲು ಹಲವಾರು ವ್ಯಕ್ತಿಗಳು ಹರಸಾಹಸ ಪಡುತ್ತಿದ್ದಾರೆ. ಕಾನೂನನ್ನು ಕಾಪಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ. ಸರಿಯಾದ ಮಾರ್ಗಸೂಚಿಯಿಲ್ಲದೆ ಜನರನ್ನು ದನದಂತೆ ಹೊಡೆಯುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ. 

ಜನರನ್ನು ಯಾವಾಗಲೂ ಯಾಮಾರಿಸುವ ಖದೀಮರ ಗುಂಪುಗಳು ನಕಲಿ ಔಷಧಿಗಳನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡುತ್ತಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ದೇಶದ ವ್ಯವಸ್ಥೆಯನ್ನು ಪರೀಕ್ಷೆಗೆ ಒಳಪಡಿಸಿದಂತಿದೆ ಈಗಿನ ಸಂದರ್ಭ. ಯಾರನ್ನು ದೂರಬೇಕು, ಯಾರು ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಚಿಂತೆ ಕೆಲವರಿಗೆ ಇದ್ದರೆ, ಇವತ್ತಿನ ಊಟಕ್ಕೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಹಲವರಿದ್ದಾರೆ.  

ಅಧಿಕಾರದ ಅತಿಯಾದ ಕೇಂದ್ರೀಕರಣ ಹೇಗೆ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗುತ್ತದೆ ಎಂಬುದಕ್ಕೆ ಕೊರೊನ ಸಂದರ್ಭ ಉತ್ತಮ ಉದಾಹರಣೆಯಾಗಿದೆ. ಆದಷ್ಟು ಬೇಗ ಈ ಕೆಟ್ಟ ದಿನಗಳು  ಕೊನೆಯಾಗಿ ನೆಮ್ಮದಿಯ ಜೀವನ ಪ್ರತಿಯೊಬ್ಬರಿಗೂ ಸಿಗಲಿ ಎಂಬ ಹಾರೈಕೆಯೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.  

ಮಾಸ್ಕ್  ಧರಿಸಿ , ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಅಗತ್ಯವಿದ್ದರೆ ಮಾತ್ರ ಓಡಾಡಿ ,  ಅವಕಾಶ ಸಿಕ್ಕಿದರೆ ಲಸಿಕೆ ಪಡೆಯಿರಿ, ಸೋಂಕಿನ ಲಕ್ಷಣ ಇದ್ದರೆ ಟೆಸ್ಟ್ ಮಾಡಿಸಿಕೊಳ್ಳಿ, ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿ. 

ಕಾಮೆಂಟ್‌ಗಳು

- Follow us on

- Google Search