ಎಳನೀರು

ಬೇಸಿಗೆಯ ಬಿಸಿ ದಿನ ಕಳೆದಂತೆ ಏರುತ್ತಿದೆ. ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ನಾನು ಹೆಚ್ಚಾಗಿ ಸಿಹಿ ಪಾನೀಯಗಳನ್ನು ಕುಡಿಯಲು ಇಷ್ಟ ಪಡುವುದಿಲ್ಲ. ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಪಾನಕಗಳನ್ನು ಕುಡಿಯಲು ಅಷ್ಟು ಇಷ್ಟ ಆಗುವುದಿಲ್ಲ. ಇದನ್ನು ಬಿಟ್ಟರೆ ಬೇರೆ ಆಯ್ಕೆ ಎಂದರೆ ಎಳನೀರು ಹಾಗು ಕಬ್ಬಿನ  ಹಾಲು. ನೈಸರ್ಗಿಕವಾಗಿ ಬೆಳೆಯುವ ಎಳನೀರನ್ನು ಕುಡಿದು ಅದರ ಗಂಜಿ ತಿನ್ನುವ ಮಜವೇ ಬೇರೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಸಾಮಾನ್ಯವಾಗಿ ಹುಷಾರಿಲ್ಲದ ಸಂದರ್ಭಗಳಲ್ಲಿ ದೇಹಕೆ ಅಗತ್ಯ ಶಕ್ತಿ ನೀಡಲು ಸಹ ಇದನ್ನು ಕುಡಿಯುತ್ತಾರೆ. ಜೇನು ಕಚ್ಚಿದ ಸಂದರ್ಭಗಳಲ್ಲೂ ಸಹ ಬೊಂಡ(ಎಳನೀರು) ಸೇವನೆ ಮಾಡುತ್ತಾರೆ. 

ಎಳನೀರು 

ನಾನು ಬೆಂಗಳೂರಿಗೆ ಬಂದು ಆರು ವರ್ಷಗಳಾಗಿದ್ದರೂ ಒಮ್ಮೆಯೂ ಎಳನೀರು ಕುಡಿದಿರಲಿಲ್ಲ. ಒಂದು ಭಾನುವಾರ ಇದ್ದಕ್ಕಿದಂತೆ ನನಗೆ ಎಳನೀರು ಕುಡಿಯಬೇಕು ಅನ್ನಿಸಿತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಜೇಬಿನಲ್ಲಿ ನೂರು ರೂಪಾಯಿ ಇಟ್ಟುಕೊಂಡು ಎಳನೀರು ಮಾರುತ್ತಿದ್ದ ತಳ್ಳುವ ಗಾಡಿಯ ಸ್ಥಳಕ್ಕೆ ತಲುಪಿದೆ. ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದವರು ಒಬ್ಬ ಮಧ್ಯ ವಯಿಸ್ಸನ  ಹೆಂಗಸು. ನಾನು ಎಳನೀರು ಕೇಳಿದ ನಂತರ ಹರಿತವಾದ ಕತ್ತಿಯಿಂದ ಎಳನೀರನ್ನು ಕೊಚ್ಚಿ ತೆಗೆದು ಮಧ್ಯದಲ್ಲಿ ರಂಧ್ರ ಮಾಡಿ ಕೊಟ್ಟರು. 

ಕಬ್ಬಿನ ಹಾಲು 

ಇಲ್ಲಿಯವರೆಗೂ ಎಲ್ಲವೂ ಅಂದುಕೊಂಡಂತೆ ನಡೆಯಿತು. ನಾನು ಅದನ್ನು ಕುಡಿದು ಮುಗಿಸಿದೆ. ಖಾಲಿಯಾದ ಎಳನೀರನ್ನು ಒಂದು ಜಾಗದಲ್ಲಿ ರಾಶಿ ಹಾಕಿದ್ದರು. ಅದನ್ನು ಅಲ್ಲಿಯೇ ಹಾಕಿದೆ. ಹಾಕಿ ತಿರುಗಿ ನೋಡಿದಾಗ ಅಂಗಡಿಯ ಮಹಿಳೆ ಇನ್ನೊಂದು ಎಳನೀರನ್ನು ಕೆತ್ತಿ ಕೊಟ್ಟರು. ನಾನು ಸ್ವಲ್ಪ ಕಸಿವಿಸಿಗೊಂಡೆ. ಏಕೆಂದರೆ  ಆಗಷ್ಟೇ ಒಂದನ್ನು ಕುಡಿದಿದ್ದೆ ಮತ್ತು ನಾನು ಕೇಳಿದ್ದು ಒಂದೇ ಎಳನೀರು. 

ಎಳನೀರಿನಲ್ಲಿರುವ ಪೋಷಕಾಂಶಗಳು 

ನಾನು ಅವರಿಗೆ ನಾನು ಕೇಳಿದ್ದು ಒಂದೇ ಎಳನೀರು ಅಂತ ಅರ್ಥ ಮಾಡಿಸಲು ಹೇಳಿದೆ. ಅವರು ಅದಕ್ಕೆ ಮುಗುಳ್ನಕ್ಕು ಇದಕ್ಕೆ ದುಡ್ಡು ಬೇಡ ಎಂದು ಹೇಳಿ  ಮತ್ತೊಂದನ್ನು ನೀಡಿದರು. ನನಗೆ ಬೇರೆ ಉಪಾಯ ಕಾಣದೆ ಅದನ್ನು ಕುಡಿದೆ. ಆದರೂ ನನ್ನ ಮನಸ್ಸಿನಲ್ಲಿ ಏನೇನೋ ಯೋಚನೆಗಳು ಓಡಾಡುತ್ತಿದ್ದವು. ಏನಾದರೂ ಆಗಲಿ ಹೇಗೂ ನೂರು ರೂಪಾಯಿ ಇದೆ ಇವರಿಗೆ ಭಾಷೆ ಸರಿ ಬರಲ್ಲ ಅನ್ನಿಸುತ್ತೆ ಎಂದುಕೊಂಡು ಕುಡಿದೆ.  ನಂತರ ಜೇಬಿನಲ್ಲಿದ್ದ ನೂರು ರೂಪಾಯಿ  ಕೊಟ್ಟೆ. ಎರಡು ಎಳನೀರಿಗೆ ಸೇರಿ ನಲವತ್ತು ರೂಪಾಯಿ ಅಂದುಕೊಂಡು ಅರವತ್ತು ರೂಪಾಯಿ ಚೇಂಜ್ ಕೊಡಬೇಕಿತ್ತು ಅವರು. 

ಮೇಲ್ಭಾಗ ಕತ್ತರಿಸಿ ರಂಧ್ರ ಕೊರೆದ ಎಳನೀರು 

ಆದರೆ ಅವರು ನನ್ನ ಹತ್ತಿರ ಚಿಲ್ಲರೆ ಇಲ್ಲ. ನಾಳೆ ಇಪ್ಪತ್ತು ರೂಪಾಯಿ ಕೊಡು ಪರವಾಗಿಲ್ಲ ಎಂದು ಹೇಳಿ ನೂರು ರೂಪಾಯಿ ವಾಪಸ್ಸು ನೀಡಿದರು. ನನಗೆ ಆಶ್ಚರ್ಯ ಆಯಿತು. ಬೆಂಗಳೂರಿನಲ್ಲಿ ಒಂದು ರೂಪಾಯಿಗೂ ಜಗಳವೇ ಆಡುವ ಈ ಸಂದರ್ಭದಲ್ಲಿ ಒಂದು ಎಳನೀರಿನ ಜೊತೆ ಇನ್ನೊಂದನ್ನು ಉಚಿತವಾಗಿ ಕೊಟ್ಟು, ಚಿಲ್ಲರೆ ಇಲ್ಲವೆಂದಾಗ ನಾಳೆ ಕೊಡು ಪರವಾಗಿಲ್ಲ ಎಂದು ಹೇಳಿದ ಆ ಮಹಿಳೆಯ ಮನಸ್ಸು ಎಷ್ಟೊಂದು ದೊಡ್ಡದು ಅನ್ನಿಸಿತು. 

ಮಾರನೇ ದಿನ ನಾನೆ ಹೋಗಿ ಇಪ್ಪತ್ತು ರೂಪಾಯಿ ಕೊಟ್ಟೆ. ಅವರು ಯಾಕೆ ಹೀಗೆ ಮಾಡಿದರು ಎಂಬುದು ನನಗೆ ಇಷ್ಟು ದಿನವಾದರೂ ಅರ್ಥವಾಗಿಲ್ಲ. ಜೀವನದಲ್ಲಿ ಆಗುವ ಪ್ರತಿಯೊಂದಕ್ಕೂ ಅರ್ಥ ಹುಡುಕುವುದು ನಮ್ಮ ಚಟ ಅಷ್ಟೇ. ಆಮೇಲೆ ಸ್ವಲ್ಪ ದಿನಗಳಲ್ಲಿ ಕೋರೋನ ಸಂಖ್ಯೆ ಜಾಸ್ತಿ ಆಗುತ್ತಾ ಬಂದಂತೆ ನಾನು ಬೆಂಗಳೂರು ಬಿಟ್ಟು ಮನೆಯಿಂದಲೇ ಕೆಲಸ ಮಾಡಲು ಅಲ್ಲಿಗೆ ಹೋದೆ. ಅದಾದ ನಂತರ ಅವರನ್ನು ನೋಡಿಲ್ಲ. ಇವತ್ತು ಎಳನೀರು ಕುಡಿಯುತ್ತಿದ್ದಾಗ ಆ ಘಟನೆ ನೆನಪಾಯಿತು. 

ಕಾಮೆಂಟ್‌ಗಳು

- Follow us on

- Google Search