ಈ ವಾರದಲ್ಲಿ ನಾನು ಓದಿದ ಪುಸ್ತಕಗಳು : ೧. ಗೃಹಭಂಗ ೨. ನೆರೆಹೊರೆಯ ಗೆಳೆಯರು

೧. ಗೃಹಭಂಗ - ಎಸ್ . ಎಲ್ . ಬೈರಪ್ಪ 

ಬೈರಪ್ಪನವರ ಕಾದಂಬರಿಗಳು ಜೀವನದ ಆಗು ಹೋಗುಗಳ ಕುರಿತು ತಮ್ಮದೇ ದೃಷ್ಟಿಕೋನವನ್ನು ಪರಿಚಯಿಸುತ್ತವೆ. ಬದುಕನ್ನು ಕೇವಲ ಬದುಕನ್ನಾಗಿ ನೋಡುವುದಷ್ಟೇ ಈ ಕಾದಂಬರಿಯ ವಿಶಿಷ್ಟತೆ. ಕಾದಂಬರಿಯ ಪ್ರಮುಖ ಪಾತ್ರಗಳಾದ ಚೆನ್ನಿಗರಾಯ, ನಂಜಮ್ಮ, ವಿಶ್ವ , ಗಂಗಮ್ಮ ಮನಸ್ಸಲ್ಲಿ ಇಂದಿಗೂ ಮೆಲಕುಹಾಕುತ್ತಿದ್ದೇನೆ . 



ಜೀವನೋಪಾಯಕ್ಕಾಗಿ ಓರ್ವ ಹೆಣ್ಣು ಆಯ್ಕೆ ಮಾಡಿಕೊಳ್ಳುವ ದಾರಿಗಳು ಹಾಗು ನಾವು ಮೊದಲೇ ಅಂದುಕೊಂಡಂತೆ ಎಲ್ಲವೂ ಜೀವನದಲ್ಲಿ ನಡೆಯುವುದಿಲ್ಲ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ನಮ್ಮ ಮನಸ್ಸಿನ ಸಮಾಧಾನಕ್ಕಾಗಿ ಬದುಕಿನಲ್ಲಾಗುವ ಘಟನೆಗಳಿಗಾಗಿ ಕಾರಣ ಹಾಗು ವಿವರಣೆ ಬಯಸುತ್ತೇವೆಯೇ ಹೊರತು ಜೀವನ ಇವೆಲ್ಲವನ್ನೂ ಮೀರಿದೆ ಎಂಬುದು ತಿಳಿಯುತ್ತದೆ. 

ಜನರ ಅಜ್ಞಾನದೊಂದಿಗೆ ಮಾರಕ ಪಿಡುಗುಗಳು ಊರಿಗೆ ಕಾಲಿಟ್ಟಾಗ ಹೇಗೆ ಎಷ್ಟೋ ಜನರ ಬದುಕು ಹೇಳ ಹೆಸರಿಲ್ಲದಂತೆ ನಿರ್ನಾಮವಾಗುತ್ತದೆ ಎಂಬುದನ್ನು ಸಹ ಅದ್ಭುತವಾಗಿ ವಿವರಿಸಲಾಗಿದೆ. ಕಾದಂಬರಿಯಲ್ಲಿ ಪ್ಲೇಗ್ ಬಂದಾಗ ಹೇಗೆಲ್ಲ ಜೀವನ ನಡೆಸುತ್ತಿದ್ದರು, ಮಳೆಯೇ ಇಲ್ಲದೆ ಬರ ಬಂದಾಗ ಏನೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಕಾದಂಬರಿ ವಿವರಿಸುತ್ತದೆ. 

ಚೆನ್ನಿಗರಾಯನ ಪಾತ್ರವೆಂತು ಜೀವನದಲ್ಲಿ ಜವಾಬ್ದಾರಿಯೇ ಇಲ್ಲದ , ಕೇವಲ ಊಟವೊಂದನ್ನೇ ತನ್ನ ದಿನದ ಕರ್ತವ್ಯವಾಗಿ ಸ್ವೀಕರಿಸಿರುವ ವಿಷಯವಾಗಿದೆ. ಸ್ವಂತ ಬುದ್ಧಿ ಇಲ್ಲದವನನ್ನು ತನ್ನ ಬಾಳಸಂಗಾತಿಯಾಗಿ ಸ್ವೀಕರಿಸಿದರೆ ಏನಾಗುತ್ತದೆ ಎಂಬುದು ಬಹಳ ಚೆನ್ನಾಗಿ ಮೂಡಿ ಬಂದಿದೆ. 

ಇದೆಲ್ಲ ಕಾದಂಬರಿಯ ಪ್ರಮುಖ ವಿಷಯಗಳು. ಆದರೆ , ಪ್ರತಿ ಬಾರಿ ಓದಿದಾಗಲೂ ಹೊಸತೊಂದು ದೃಶ್ಯ ಕಣ್ಣಿಗೆ ಬೀಳುತ್ತದೆ. "ಹನ್ನೆರಡು ಅಡಿ ಆಳದ ಬಾವಿಗೆ ಮೂರು ಅಡಿ ಹಗ್ಗ ಬಿಟ್ರೆ ಎಟಕುತ್ತ ?", ಇದುನ್ನ ಊರಿನ ಹೆಂಗಸೊಬ್ಬಳು ಪಂಚಾಯತಿಗೆ ಕರೆದಾಗ ಕೇಳುವ ಪ್ರಶ್ನೆ. ಇಂತಹ ನೂರಾರು ವಿಷಯಗಳನ್ನು ಮನಮುಟ್ಟುವಂತೆ , ಬದುಕನ್ನು ಕೇವಲ ಬದುಕನ್ನಾಗಿ ನೋಡುವಂತೆ ಬರೆದು ನಮಗೆ ಅರ್ಪಿಸಿರುವ ಬೈರಪ್ಪನವರಿಗೆ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತೇನೆ. 

೨. ನೆರೆಹೊರೆಯ ಗೆಳೆಯರು - ಕೆ .ಪಿ . ಪೂರ್ಣಚಂದ್ರ ತೇಜಸ್ವಿ

ಪುಸ್ತಕ ಓದಬೇಕು ಅಂತ ಅನ್ನಿಸಿದಾಗಲೆಲ್ಲ ನನ್ನ ಮೊದಲ ಆಯ್ಕೆ ತೇಜಸ್ವಿ. ಅವರ ಪುಸ್ತಕಗಳನ್ನು ಓದಿದ ಮೇಲೆ ಇಂತಹ ಅದ್ಭುತ ಪುಸ್ತಕ ಓದಿದೆನಲ್ಲ ಎಂಬ ಹೆಮ್ಮೆ, ಇಷ್ಟು ಸರಳವಾಗಿ ತಿಳಿಹಾಸ್ಯದೊಂದಿಗೆ ಬರೆಯಲು ಹೇಗೆ ಸಾಧ್ಯ ಎಂಬ ಕುತೂಹಲ ಒಂದೆಡೆ. 



ಮಿಲೆನಿಯಮ್ ಸರಣಿಯ ಐದನೇ ಪುಸ್ತಕ 'ನೆರೆಹೊರೆಯ ಗೆಳೆಯರು'. ಈ ಪುಸ್ತಕದಲ್ಲಿ ನಮ್ಮ ಮಲೆನಾಡ ಮನೆಗಳ ಸುತ್ತಮುತ್ತ ಕಂಡುಬರುವ ಜೀವಿಗಳಾದ ಇರುವೆ, ಕಪ್ಪೆ, ಆಮೆ , ಅಳಿಲುಗಳು , ಏಡಿಗಳು , ಇಲಿಗಳು ಇವುಗಳ ಬಗ್ಗೆ ಬರೆಯಲಾಗಿದೆ. ನಾವು ದಿನನಿತ್ಯ ನೋಡುವ ಜೀವಗಳಾದರೂ ಇದೇ  ಜಾತಿಗೆ ಸೇರಿದ ಅದೆಷ್ಟೋ ಜೀವಿಗಳು ಹೇಗೆ ಗಾತ್ರ ಮತ್ತು ತಮ್ಮ ಜೀವನಶೈಲಿಯಲ್ಲಿ ಪರಿಸರಕ್ಕೆ ಅನುಗುಣವಾಗಿ ವೈವಿಧ್ಯತೆ ಮೆರೆಯುತ್ತವೆ ಎಂಬುದನ್ನು ವಿವರಿಸಲಾಗಿದೆ.    

ಪ್ರಾಣಿಗಳ ಬೇಟೆ ಉದ್ಯಮವಾಗಿ ಬೆಳೆದಾಗ ಹೇಗೆ ಜಗತ್ತಿನಿಂದ ಪ್ರಾಣಿಗಳು ಕಣ್ಮರೆಯಾಗುತ್ತವೆ ಎಂಬ ಒಳನೋಟವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಲಿಗಳು ಎಷ್ಟು ಪ್ರಭಾವಶಾಲಿ ಜೀವಿಗಳು ಎಂಬುದನ್ನು ಸಹ ವಿವರಿಸಲಾಗಿದೆ. 

ಪುಸ್ತಕದ ಕೊನೆಯಲ್ಲಿ ಜೆರಾಲ್ಡ್ ಡುರೆಲ್ ಬರೆದಿರುವ ಹಾರುವ ಇಲಿಗಳ ಕುರಿತಾದ ಒಂದು ಸಂಶೋಧನಾ ಲೇಖನವನ್ನು ತೇಜಸ್ವಿಯವರು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ. 


ಕಾಮೆಂಟ್‌ಗಳು

- Follow us on

- Google Search