ಇಂಜಿನಿಯರಿಂಗ್ ಕಾಲೇಜುಗಳ ಕಥೆ - ವ್ಯಥೆ


ನಾನು ಸಾಮಾನ್ಯವಾಗಿ ಗಮನಿಸಿದಂತೆ ಯಾರೋ ಇಂಜಿನಿಯರಿಂಗ್ ಓದುತ್ತಾ ಇದ್ದಾರೆ ಅಂದರೆ ಅವರ ಮೇಲೆ ವಿವಿಧ ರೀತಿಯ ವಿಚಿತ್ರ ಭಾವನೆಗಳು ಮೂಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್ ಸೇರುವವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಬೇರೆ ವಿಷಯಗಳಿಗೆ ಹೋಲಿಸಿದರೆ ಇಂಜಿನಿಯರಿಂಗ್ ಮಾಡಬೇಕೆಂದು ಇರುವವರ ಸಂಖ್ಯೆ ಹೆಚ್ಚು. 


ಯಾವುದೇ ಗುರಿಯಿಲ್ಲದೆ, ಸುಮ್ಮನೆ ಇಂಜಿನಿಯರಿಂಗ್ ಸೇರುವ ಬೇಕಾದಷ್ಟು ವಿದ್ಯಾರ್ಥಿಗಳನ್ನು ನಾವು ನೋಡಬಹುದು. ಯಾಕೆ ಹೀಗೆ ಅಂತ ಯೋಚನೆ ಮಾಡಿದ್ರೆ ನನಗೆ ಅನ್ನಿಸುವುದು ಹೀಗೆ. ನಾವು ಯಾವಾಗಲು ಸಮಾಜದಲ್ಲಿ ಎಲ್ಲರಂತೆ ಹೊಂದಿಕೊಳ್ಳುವ ಪ್ರಯತ್ನ ನಮಗೆ ಗೊತ್ತಿಲ್ಲದಂತೆ ಮಾಡುತ್ತಿರುತ್ತೇವೆ. ಇಂಜಿನಿಯರಿಂಗ್ ಮಾಡುತ್ತೇವೆ ಎಂದಾಗ ನಮ್ಮ ಪೋಷಕರೇ ಆಗಲಿ ಅಥವಾ ನಮ್ಮ ಪರಿಚಿತರಾಗಲಿ ನಮ್ಮನ್ನು ವಿರೋಧಿಸುವುದು ಬಹಳ ಕಡಿಮೆ. ಇದು ವಿದ್ಯಾರ್ಥಿಗಳು ಹೆಚ್ಚಾಗಿ ಇಂಜಿನಿಯರಿಂಗ್ ಸೇರಲು ಪ್ರಮುಖ ಕಾರಣ. 



ಇಂದು ಯೋಚನೆ ಮಾಡಲೇಬೇಕಾದ ಪ್ರಮುಖ ವಿಷಯವೆಂದರೆ ಹಾದಿ ಬೀದಿಗಳಲ್ಲಿ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿರುವ ಇಂಜಿನಿಯರಿಂಗ್ ಕಾಲೇಜುಗಳು. ಶಿಕ್ಷಣದಲ್ಲಿ ಯಾವುದೇ ಗುಣಮಟ್ಟವನ್ನು ಕಾಪಾಡದೇ ಕೇವಲ ಹೆಸರಿಗೆ ಮಾತ್ರ ಪದವಿ ನೀಡಿ , ಚೆನ್ನಾಗಿ ಹಣ ಪಡೆದು , ಕಾಲೇಜುಗಳಿಂದ ಹೊರದಬ್ಬುವುದು. ಇಂಜಿನಿಯರಿಂಗ್ ಕಾಲೇಜುಗಳಿಗೆ  ದುಡ್ಡು ಮಾಡುವುದು ಬಿಟ್ಟರೆ ಬೇರೆ ಯಾವ ಒಳ್ಳೆಯ ಉದ್ದೇಶವೂ ಇಲ್ಲ. ಕೇವಲ ಬಾಯಿಮಾತಿಗೆ ಮಾತ್ರ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಇವರನ್ನು ನಂಬಿ ಕಾಲೇಜಿಗೆ ಸೇರಿದ ಸಾಕಷ್ಟು ವಿದ್ಯಾರ್ಥಿಗಳು ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಯೋಗ್ಯತೆಯೂ ಇಲ್ಲ. ಕನಿಷ್ಠ ಪಕ್ಷ ವಿದ್ಯಾರ್ಥಿಗಳ ತೊಂದರೆಗಳನ್ನು ಕೇಳುವ ತಾಳ್ಮೆ ಕೂಡ ಇಲ್ಲದ ಮಹಾನ್ ಅಹಂಕಾರಿಗಳು ಇವರು. 



ಪ್ರತಿಯೊಂದು ಕಾಲೇಜಿನಲ್ಲಿಯೂ ಇರುವ ಅಧ್ಯಾಪಕರು ತಮ್ಮ ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದಿಲ್ಲ. ಅಪರೂಪಾಯಕ್ಕೆ ಅಂತಹ ಅಧ್ಯಾಪಕರು ಕಾಣಸಿಗುತ್ತಾರೆ. ಉಳಿದವರೆಲ್ಲ ಯಾರೋ ಮಾಡಿರುವ ಹಳೆಯ ನೋಟ್ಸ್ ಅಥವಾ ಪುಸ್ತಕಗಳನ್ನು ಬಂದು ಓದುವ ಮಹಾನುಭಾವರು. ಇಂಜಿನಿಯರಿಂಗ್ ಈ ರೀತಿಯ ಕಳಪೆ ಮಟ್ಟಕ್ಕೆ ಬಂದು ಸೇರುವಲ್ಲಿ ಈ ಅಧ್ಯಾಪಕರ ಅಜ್ಞಾನ ಪ್ರಮುಖ ಕಾರಣವಾಗಿದೆ. 

ಅಧ್ಯಾಪಕರಲ್ಲಿ ಬಹಳಷ್ಟು ಜನ ತಮಗೆ ಎಲ್ಲವೂ ತಿಳಿದಿರುವ ಮೌಢ್ಯವನ್ನು ಹೊಂದಿದ್ದಾರೆ. ಇನ್ನು ಸ್ವಲ್ಪ ಅಧ್ಯಾಪಕರು ವಿದ್ಯಾರ್ಥಿಗಳ ಮೂಲಕ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೇಗೆಂದರೆ, ಅಸೈನ್ಮೆಂಟ್ ಆಗಿ ಒಂದು ರಿಸರ್ಚ್ ಪೇಪರ್ ಪಬ್ಲಿಶ್ ಮಾಡಲೇಬೇಕು ಎಂದು ಪಟ್ಟು ಹಿಡಿಯುತ್ತಾರೆ. ಕೆಲಸವೆಲ್ಲ ವಿದ್ಯಾರ್ಥಿಗಳ ಕೈಯಲ್ಲಿ ಮಾಡಿಸಿ ಕೊನೆಗೆ ತಮ್ಮ ಹೆಸರನ್ನು ಮೊದಲು ಹಾಕುವಂತೆ ಆಜ್ಞಾಪಿಸುತ್ತಾರೆ. ಏನು ಕೆಲಸ ಮಾಡದೇ ಬೇರೆಯವರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದು ಇವರ ಹುಟ್ಟು ಗುಣ. 



ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು ೧೫ ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ತೇರ್ಗಡೆಯಾಗಿ ಪದವಿ ಪಡೆಯುತ್ತಾರೆ. ಆದರೆ, ಒಂದು ವರ್ಷಕ್ಕೆ ನಮ್ಮ ದೇಶದಲ್ಲಿ ಹೊಸದಾಗಿ ಲಭ್ಯವಿರುವ ಉದ್ಯೋಗಾವಕಾಶಗಳು ಕೇವಲ ಒಂದೂವರೆ ಲಕ್ಷ ಅಷ್ಟೇ. ಇವರೊಂದಿಗೆ ಕೆಲಸ ಸಿಗದೇ ಇರುವವರು, ಕಂಪನಿ ಬಿಟ್ಟವರು ಇವರನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡರೆ ಕೋಟಿಗಟ್ಟಲೆ ಜನರಾಗುತ್ತಾರೆ. 



ಇದರಿಂದಾಗಿ , ಪ್ರತಿಯೊಂದು ಉದ್ಯೋಗಾವಕಾಶಕ್ಕೂ ಸಾವಿರಾರು ಜನ ಅರ್ಹ ಅಭ್ಯರ್ಥಿಗಳು ಇದ್ದಂತಾಗುತ್ತದೆ. ಉತ್ತಮ ಓದಿನ ಜ್ಞಾನದೊಂದಿಗೆ ಕೆಲ್ಸಕ್ಕೆ ಅತಿ ಅವಶ್ಯಕವಾದ ಕೌಶಲ್ಯ / ಸ್ಕಿಲ್ ಇದ್ದರೂ ಒಂದು ಕೆಲಸಕ್ಕೆ ನಿಮ್ಮಷ್ಟೇ ತಿಳಿದಿರುವ ಇತರ ವಿದ್ಯಾರ್ಥಿಗಳೊಂದಿಗೆ ಅಥವಾ ಜನರೊಂದಿಗೆ ನೀವು ಸೆಣಸಾಡಬೇಕಾಗುತ್ತದೆ. 



ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೂ ನಿಮಗೆ ಕೆಲ್ಸದಲ್ಲಿ ಆಸಕ್ತಿ ಬರದಿದ್ದರೆ ನೀವು ಕೆಲಸ ಪಡೆದುಕೊಳ್ಳಲು ಪಟ್ಟ ಶ್ರಮ ಸ್ವಲ್ಪ ಮಟ್ಟಿಗೆ ವ್ಯರ್ಥವಾಗುತ್ತದೆ. ನೀವು ಹೊಸ ಹೊಸ ವಿಷಯಗಳನ್ನು ಹಾಗು ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸುವ ಜಾಣ್ಮೆಯಿದ್ದಲ್ಲಿ ಮಾತ್ರ ನೀವು ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡಲು ಸಾಧ್ಯ

ನಿಮಗೆ ಇಂಜಿನಿಯರಿಂಗ್ ಮುಗಿದ ನಂತರ ಮಾಡುವ ಕೆಲಸದ ಬಗ್ಗೆ ನಿಜವಾದ ಆಸಕ್ತಿ ಇಲ್ಲದಿದ್ದರೆ ದಯವಿಟ್ಟು ಬ್ಯಾಂಕ್ ಗಳಲ್ಲಿ  ಲಕ್ಷಗಟ್ಟಲೆ  ಸಾಲ ಮಾಡಿ ಇಂಜಿನಿಯರಿಂಗ್ ಓದಬೇಡಿ. ಅದರ ಬದಲಿಗೆ ನಿಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸರಿಯಾದ ಕಾಲೇಜನ್ನು ಆಯ್ಕೆ ಮಾಡಿಕೊಂಡು ಸೇರಿಕೊಳ್ಳಿ. 

ಕಾಮೆಂಟ್‌ಗಳು

- Follow us on

- Google Search