ದಿನನಿತ್ಯದ ಜೀವನದಲ್ಲಿ ಬೆರೆತಿರುವ ಸುಳ್ಳುಗಳು

೧. ಮುಂದೊಂದು ದಿನ ನಾನು ಸಂತೋಷವಾಗಿರುತ್ತೇನೆ 

ಈ ಯೋಚನೆ ಬಹಳಷ್ಟು ಜನರ ಮನಸ್ಸಿನಲ್ಲಿ ಇದೆ. ನಾವು ಯಾವಾಗಲೂ ಮುಂದಿನ ದಿನಗಳ ಸಂತೋಷದ ಯೋಚನೆಯಲ್ಲಿ ಇಂದಿನ ದಿನದ ಅಪೂರ್ವ ಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ನಮ್ಮ ನಿಯಂತ್ರಣದಲ್ಲಿ ಇರುವುದು ಕೇವಲ ಈಗಿನ ಕ್ಷಣವೇ ಹೊರತು ಮುಂದಿನ ದಿನಗಳಲ್ಲ. ಭವಿಷ್ಯದ ಬಗ್ಗೆ ಕಾಳಜಿಯಿರಲಿ, ಆದರೆ ಭವಿಷ್ಯಕ್ಕಾಗಿಯೇ ದಿನನಿತ್ಯ ಚಿಂತಿಸುವುದು ಬೇಡ. ಇಂದು ಮಾಡಬೇಕಾದ ಕೆಲಸಗಳಲ್ಲಿ ಮನಸ್ಸನ್ನು ಕೊಟ್ಟು, ಬೇರೆಯವರೊಂದಿಗೆ ಸಂತಸದ ವಿಷಯಗಳನ್ನು ಹಂಚಿಕೊಳ್ಳೋಣ. 

೨. ನಮ್ಮ ಸಂಬOಧಿಕರು ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಾರೆ 



ಇದು ಕೆಲವು ಸಂದರ್ಭಗಳಲ್ಲಿ ನಿಜ ಆಗಿರಬಹುದು, ಆದರೆ ನಮ್ಮ ಜೀವನದಲ್ಲಿ ನಾವು ಯಾರಿಗೆ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿರುತ್ತೇವೆಯೋ ಅವರು ಸಹಾಯ ಮಾಡಬಹುದು ಅಥವಾ ಯಾರೋ ಅಪರಿಚಿತ ವ್ಯಕ್ತಿಗಳು ಸಹ ನಮಗೆ ಸಹಾಯಹಸ್ತ ನೀಡುತ್ತಾರೆ. ಹೀಗಾಗಿ ಸಂಬಂಧಗಳ ಮೇಲೆ ಸಹಾಯ ನಿರೀಕ್ಷಿಸುವುದು ನಮ್ಮ ಮೂರ್ಖತನ. ಹಾಗೆಯೇ ನಾವು ಯಾರಿಗೆ ಸಹಾಯ ಮಾಡಿರುತ್ತೇವೆಯೋ ಅವರಿಂದ ಸಹಾಯ ನಿರೀಕ್ಷಿಸಬಾರದು. 
 

೩. ನಮ್ಮ ಜೀವನದ ತೊಂದರೆಗಳಿಗೆ ಬೇರೆಯವರು ಕಾರಣ 


ನಮ್ಮ ಜೀವನದಲ್ಲಾಗುವ ಪ್ರತಿಯೊಂದು ತಪ್ಪಿಗೆ ಬೇರೆಯವರ ಪಾತ್ರ ಇದ್ದೇ ಇರುತ್ತದೆ ಎನ್ನುವುದು ಎಷ್ಟು ನಿಜವೋ ಅಂತೆಯೇ ನಮ್ಮ ಪಾತ್ರವೂ ಇದ್ದೇ ಇರುತ್ತದೆ. ನಮ್ಮ ಜೀವನವನ್ನು ನಿಯಂತ್ರಿಸುವ ಹಾಗು ಸಮರ್ಥವಾಗಿ ನಡೆಸುವ ವ್ಯಕ್ತಿತ್ವನ್ನು ನಾವೆಲ್ಲರೂ ಬೆಳೆಸಿಕೊಂಡಾಗ ಮಾತ್ರ ಇತರರ ಮೇಲೆ ದೂರುವುದನ್ನು ನಿಯಂತ್ರಣ ಮಾಡಬಹುದು. 

೪. ನಾವು ಆರೋಗ್ಯವಾಗಿದ್ದೇವೆ 


ಅರೋಗ್ಯ ಎಂದರೆ ಕೇವಲ ಕಾಯಿಲೆಯಿಂದ ಬಳಲದೇ ಇರುವುದು ಮಾತ್ರವಲ್ಲ . ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಮಾನಸಿಕ ಆರೋಗ್ಯಕ್ಕಾಗಿ ದಿನನಿತ್ಯ ಯೋಗ , ಧ್ಯಾನ , ಪ್ರಾಣಾಯಾಮ ಮೊದಲಾದವುಗಳನ್ನು ಮಾಡಲೇ ಬೇಕು. ಉತ್ತಮ ಆಲೋಚನೆ ಹಾಗು ಧನಾತ್ಮಕ ಚಿಂತನೆಯನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ಇದರ ಉಪಯೋಗಗಳು ಅನೇಕ. 

೫. ಬೇರೆಯವರ ಕಷ್ಟಗಳು ನನಗೆ ಬೇಕಾಗಿಲ್ಲ 


ಹೀಗೆಂದು ಯೋಚಿಸುವವರು ಜೀವನದ ಅನೇಕ ದುಃಖದ ಸನ್ನಿವೇಶಗಳನ್ನು ತಪ್ಪಿಸಿಕೊಳ್ಳಬಹುದು.  ಆದರೆ , ನಾವು ಕಷ್ಟದಲ್ಲಿ ಇರುವಾಗ ಬೇರೆಯವರೊಂದಿಗೆ ಹಂಚಿಕೊಳ್ಳುವ ಮಾನಸಿಕ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತೇವೆ. ಏಕೆಂದರೆ ಇತರರೂ ನಮ್ಮಂತೆಯೇ ಎಂದು ಯೋಚಿಸುವುದು ನಮ್ಮ ಸಹಜ ಸ್ವಭಾವ. ಬೇರೆಯವರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಇಲ್ಲದೇ ಹೋದರೂ ಅವರ ಮಾತುಗಳನ್ನು ಸಮಾಧಾನವಾಗಿ ಕೇಳುವ ತಾಳ್ಮೆ ನಮ್ಮಲ್ಲಿರಬೇಕು. 

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹೇಳಲು ಬಹಳಷ್ಟು ಇದೆ. ಸಮಯ ಸಿಕ್ಕಾಗ , ಬರೆಯಲು ಮನಸ್ಸಾದಾಗ ಬರೆಯುತ್ತೇನೆ. 

ಕಾಮೆಂಟ್‌ಗಳು

- Follow us on

- Google Search