ಕರ್ತವ್ಯ


ರವಿ ಹುಟ್ಟಿದ್ದು ಬಡತನದ ಕುಟುಂಬದಲ್ಲಿ , ಬೆಳೆದಿದ್ದು ಕೆಳ ಮಧ್ಯಮ ವರ್ಗದ ವಾತಾವರಣದಲ್ಲಿ. ಇದಕ್ಕೆ ಕಾರಣ ರವಿಯ ತಂದೆ ತಾನು ಬೆಳೆದ ಊರನ್ನು ಬಿಟ್ಟು ಸ್ವಲ್ಪ ದೂರದ ಊರಿನಲ್ಲಿ ಕೆಲಸಕ್ಕೆ ಸೇರಿದ್ದು. ಇದಕ್ಕೆ ಮನೆಯವರ ವಿರೋಧವಿದ್ದರೂ ಅದನ್ನೆಲ್ಲಾ ಲೆಕ್ಕಿಸದೆ ಮನೆ ಬಿಟ್ಟು ಬೇರೆ ಊರಿನಲ್ಲಿ ಕಡಿಮೆ ಸಂಬಳಕ್ಕೆ ರವಿಯ ತಂದೆ ಕೆಲಸಕ್ಕೆ ಸೇರಿದರು. 

ಮನೆಯವರಿಗೆ ಇದರಿಂದಾಗಿ ಸ್ವಲ್ಪ ಇರುಸು ಮುರುಸು ಯೋಚನೆಗಳು ಆರಂಭವಾದವು. ಕೇವಲ ದುಡ್ಡಿಗಾಗಿ ಹೋದನೆ ? ಇಲ್ಲಿಯೇ ಇದ್ದು ತಮ್ಮ ಜೀವನವನ್ನು ಬೇರೆಯವರು ಸಾಗಿಸುತಿಲ್ಲವೇ ? ನಮ್ಮ ಊರಿನಲ್ಲಿ ಇಲ್ಲದೇ ಇರುವಂಥದ್ದು ಅಲ್ಲೇನಿದೆ ? ಹೀಗೆಲ್ಲ ಅನೇಕ ಪ್ರಶ್ನೆಗಳ ಸುರಿಮಳೆಗಳು ಊರಿನ ಜನರಲ್ಲಿ ಮೂಡಿದವು. 

ಆದರೆ ಊರನ್ನು ಬಿಡಲು ಪ್ರಮುಖ ಕಾರಣ ದುಡ್ಡಿನ ಆಸೆಯೂ ಅಲ್ಲ ಅಥವಾ ತಮ್ಮ ಊರಿನ ಮೇಲಿನ ತಿರಸ್ಕಾರವೂ ಅಲ್ಲ. ಊರು ಬಿಟ್ಟು ಹೊರಗೆ ಕೆಲಸಕ್ಕೆ ಸೇರುವುದು ತಮ್ಮ ವಿದ್ಯಾಭ್ಯಾಸದ ಪ್ರತಿಫಲವಾಗಿ ದೊರೆಯುವ ಹೊಸ ಉದ್ಯೋಗಕ್ಕಾಗಿ. ಹಲವಾರು ವರ್ಷಗಳ ಕಾಲ ಓದಿ ಬರೆದು ಕಲಿತ ವಿದ್ಯೆಯನ್ನು ತನ್ನ ಜೀವನದ ಒಳಿತಿಗಾಗಲಿ ಉಪಯೋಗಿಸಿಕೊಳ್ಳುವುದು ಪ್ರತಿಯೊಬ್ಬ ಯುವಕನ ಕನಸು. 

ಕೆಲಸಕ್ಕೆ ಸೇರಿದ ಸ್ವಲ್ಪ ವರ್ಷಗಳ ನಂತರ ಮನೆಯವರ ಇಚ್ಛೆಯಂತೆ ಮದುವೆಯಾಗಿ ಒಂದುವರೆ ವರ್ಷದ ನಂತರ ಜನಿಸಿದ ಮಗುವಿಗೆ ಇತ್ತ ಹೆಸರೇ ರವಿ. ರವಿ ಇತರ ಮಕ್ಕಳಂತೆ ಶಾಲೆ ಹೋಗಿ ಓದಿ , ಬರೆದು , ಆಟವಾಡಿ , ಕುಣಿದು ಕುಪ್ಪಳಿಸಿ ಏಳನೇ ತರಗತಿ ಮುಗಿಸಿದ. 

ನಂತರ ಹಾಗೆಯೇ ಹೈಸ್ಕೂಲ್ ಸೇರಿದ. ರವಿಗೆ ಹಿಂದೆಂದೂ ಕಾಣದ ಜೀವನೋತ್ಸಾಹ ಆಮೇಲೆ ಮೊದಲು ಶುರು ಆಯಿತು. ಸುಂದರವಾದ ಹುಡುಗಿಯರೆಲ್ಲರೂ ಅವನನ್ನೇ ನೋಡಿದಂತೆಯೂ , ರವಿಯ ಕಿರಣಗಳಿಗೆ ಮಂಜು ಕರಗುವಂತೆ ಹುಡಿಗಿಯರ ಮನಸ್ಸು ಕರಗುತ್ತದೆ ಎನ್ನುವ ಭ್ರಮೆಯೂ ಆರಂಭದ ದಿನಗಳಲ್ಲಿ ಮೂಡಿತ್ತು. ಆದರೆ ಸ್ವಲ್ಪ ದಿನಗಳಲ್ಲಿ ಹದಿಹರೆಯದ ದಿನಗಳಲ್ಲಿ ಎಲ್ಲರಿಗೂ ಹೀಗೆ ಅನ್ನಿಸುತ್ತೆ ಎನ್ನುವ ಜ್ಞಾನೋದಯವೂ ಆಯಿತು. 

ನಂತರ ರವಿಯ ಮನಸ್ಸು ಜೀವನದಲ್ಲಿ ಏನಾದರೂ ಮಹತ್ತರವಾದುದ್ದನ್ನು ಸಾಧಿಸಬೇಕೆಂದು ಹಾತೊರೆಯಿತು. ಆದರೆ , ಎಲ್ಲರಂತೆ ಬಾಳುವುದನ್ನು ಬಿಟ್ಟರೆ ಬೇರೆ ಏನೋ ಮಾಡಲು ಬೇಕಾದ ಅವಕಾಶಗಳು ಅವನಿಗೆ ದೊರೆಯಲಿಲ್ಲ. ಈ ಯೋಚನೆ ಅವನಿಗೆ ಆಗಾಗ ಬರುತಿತ್ತೆಯೇ ಹೊರತು ದಿನವಿಡೀ ಕಾಡುತ್ತಿರಲಿಲ್ಲ. 
ಆದರೆ, ಸಾಧಕರ ಜೀವನವನ್ನು ನೋಡಿದಾಗ , ಮಹತ್ತರವಾದುದನ್ನು ಕೇಳಿದಾಗ , ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಸಾಧಕರ ಬಗ್ಗೆ ಓದಿದಾಗ ತಾನೂ ಕೂಡ ಏನಾದರೂ ಸಾಧನೆ ಮಾಡಲೇಬೇಕೆಂದು ಅವನ ಮನಸ್ಸು ಹಾತೊರೆಯುತ್ತಿತ್ತು. 

ಮನೆಯ ಪರಿಸ್ಥಿತಿಯನ್ನು ಗಮನಿಸಿದರೆ ಜೀವನ ಸಾಗಿಸಲು ಅವಶ್ಯಕವಾದಷ್ಟೇ ಅವರ ಕುಟುಂಬದ ಸಂಪಾದನೆಯಿತ್ತು. ಇದರೊಂದಿಗೆ ಅನಿರೀಕ್ಷಿತವಾಗಿ ಬರುತ್ತಿದ್ದ ಸಮಾರಂಭಗಳಿಗೆ ಹೋಗಿ ಬರುವ ಖರ್ಚು ಸಹ ಬಹಳಷ್ಟು ಆಗುತ್ತಿತ್ತು. ಇದರಿಂದಾಗಿ ಅವನಿಗೆ ಬೇರೆಯವರ ಸಹಾಯದ ಅವಶ್ಯಕತೆ ಬಹಳಷ್ಟು ಇತ್ತು. 
ಆದರೆ ರವಿ ಯಾರೊಂದಿಗೂ ಸಹಾಯಕ್ಕಾಗಿ ಸ್ನೇಹ ಸಂಪಾದಿಸುತ್ತಿರಲಿಲ್ಲ. 

ರವಿ ಹೈಸ್ಕೂಲ್ ಮುಗಿಸುತ್ತಿದಂತೆ ಈ ಸಾಧನೆಯ ಹುಚ್ಚು ಹೆಚ್ಚಾಯಿತು. ಎಲ್ಲರಂತೆ ಅವನೂ ದೂರದ ಸರ್ಕಾರೀ ಕಾಲೇಜಿಗೆ ಸೇರಿ ವಿಜ್ಞಾನ ವಿಷಯ ಓದಿದ. ನಂತರ ಇಂಜಿನಿಯರಿಂಗ್ ಮಾಡಲು ಬ್ಯಾಂಕ್ ಅಲ್ಲಿ ಸಾಲ ಪಡೆದು ಬೆಂಗಳೂರಿನ ಕಾಲೇಜು ಸೇರಿದ. 

ಇಂಜಿನಿಯರಿಂಗ್ ಕಾಲೇಜುಗಳು ಪುಟ್ಟ ಜಗತ್ತಿನಂತೆ. ವಿವಿಧ ರಾಜ್ಯಗಳ , ವಿವಿಧ ಭಾಷೆಗಳನ್ನಾಡುವ ಜನರು ಒಂದೆಡೆಯಾದರೆ ,  ನೀರು ಹರಿದಂತೆ ಸರಾಗವಾಗಿ ಇಂಗ್ಲಿಷ್ ಮಾತಾಡುವ ಜನರು ಮತ್ತೊಂದೆಡೆ. ಇವರನ್ನೆಲ್ಲ ನೋಡಿ ರವಿ ದಂಗಾಗಿ ಹೋದ. ಪ್ರಾರಂಭದ ದಿನಗಳಲ್ಲಿ ಕೋರ್ಸ್ ಬಿಟ್ಟು ಉರಿಗ ಓದಿ ಹೋಗುವ ಬಯಕೆಯಾದರೂ ನಾಲ್ಕು ವರ್ಷದ ಕಾಲೇಜಿನ ಹಣವನ್ನು ಕಟ್ಟಬೇಕೆಂಬ  ನಿಯಮದಿಂದಾಗಿ  ಅಲ್ಲಿಯೇ ಉಳಿದ. 

ಸ್ವಲ್ಪ ದಿನಗಳ ನಂತರ ತನ್ನಂತೆಯೇ ಕಷ್ಟದಲ್ಲಿರುವ ಹಲವಾರು ವಿದ್ಯಾರ್ಥಿಗಳು ಅವನಿಗೆ ಪರಿಚಯವಾದರು. ನಂತರ ಜೀವನ ಸ್ವಲ್ಪ ಶಾಂತವಾಯಿತು. ಓದಿನಲ್ಲಿ ಅಷ್ಟೇನು ಮುಂದಿರದಿದ್ದರೂ , ಪರೀಕ್ಷೆ ಪಾಸ್ ಮಾಡುವ ಜಾಣ್ಮೆ ರವಿಗೆ ಇತ್ತು. ಪ್ರೆಸೆಂಟೇಷನ್ ಕೊಡುವ ದಿನಗಳನ್ನು ಬಿಟ್ಟರೆ ಬೇರೆಲ್ಲ ದಿನಗಳು ಸಹಜವಾಗಿಯೇ ಕಳೆಯುತ್ತಿದ್ದವು. ಹೀಗೆಯೇ ಮೂರೂ ವರ್ಷಗಳು ಕಳೆದವು. 

ಕೊನೆಯ ವರ್ಷದಲ್ಲಿ ರವಿಗೆ ಕೆಲಸವೂ ಸಿಕ್ಕಿತು. ಉತ್ತಮ ಸಂಬಳವೂ ದೊರೆಯುತ್ತಿತ್ತು. ಹೀಗೆಯೇ ಕೆಲಸದಲ್ಲಿ ದಿನಗಳು ಉರುಳಿದವು. ಮೊದಮೊದಲು ಹಿತವಾಗಿದ್ದ ಮ್ಯಾನೇಜರ್ ಮಾತುಗಳು ನಂತರ ಕಟುವಾಗುತ್ತ ಪರಿವರ್ತನೆಗೊಂಡವು. ಮನೆಯಲ್ಲಿ ಎಲ್ಲರೂ ಸಂತೋಷವಾಗಿಯೇ ಇದ್ದರು. 
ಕೆಲಸದ  ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. 

ರವಿಯ ಮನಸ್ಸು ಅಲ್ಲೋಲ ಕಲ್ಲೋಲಗಳ ಗೂಡಾಯಿತು. ಯಾವ ಸಾಧನೆಯ ಕನಸು ಕಂಡು ಈ ದಾರಿ ಹಿಡಿದಿದ್ದನೋ  ಆ ಕನಸೇ ಕಾಡತೊಡಗಿತು. ನಿಜವಾಗಿಯೂ ನನ್ನ ಜೀವನದ ಗುರಿಯನ್ನು ತಲುಪಿದ್ದೇನೆಯೇ ? ತಲುಪಿಲ್ಲ ಎಂದರೆ ಹೇಗೆ ಮುಂದುವರಿಯಬೇಕು ಅಥವಾ ತಲುಪಿದ್ದಾರೆ ನನ್ನ ಗುರಿಗೆ ಏನಾದರೂ ಅರ್ಥವಿದೆಯೇ  ಎಂಬೆಲ್ಲ ಯಕ್ಷ ಪ್ರಶ್ನೆಗಳು ಮೂಡಲಾರಂಭಿಸಿದವು. 

ಇದರ ನಡುವೆ ಕೆಲಸ ಬಿಟ್ಟು UPSC ಪರೀಕ್ಷೆ ಬರೆಯೋಣವೇ ಎಂದು ಅನಿಸಿತು. ಆದರೆ , ಇಷ್ಟೆಲ್ಲಾ ಓದಿ ಯಾವುದೋ ದಡ್ಡ ಹಾಗು ಕಪಟ ರಾಜಕಾರಣಿಗಳ ಆದೇಶ ಪಾಲಿಸುವುದು ಮೂರ್ಖತನ ಎನ್ನಿಸಿತು. ಹೊಸ ಕಂಪನಿ ಸ್ಥಾಪಿಸಲು ಅನುಭವ ಸಾಲದು , ಏನು ಮಾಡದೇ ಹೋದರೆ ಜೀವನ ಸಾಗದು. ಇಂತಹ ಹತ್ತು ಹಲವಾರು ಯೋಚನೆಗಳು ಮನಸ್ಸನ್ನು ಕ್ಷುದ್ರಗೊಳಿಸಿದ್ದವು. 

ಆದರೆ ಏನೇ ಮಾಡಬೇಕಾದರೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಬ್ಯಾಂಕ್ ನೀಡಿರುವ ಸಾಲವನ್ನು ತೀರಿಸುವವರೆಗೂ  ಹಾಗು ತಾನು ಬೆಂಗಳೂರಿನಲ್ಲಿ ಒಂದೆರಡು ವರ್ಷ ಕೆಲಸವಿಲ್ಲದೇ ಬಾಳಲು  ಅಗತ್ಯವಾದಷ್ಟು ಹಣವನ್ನು ಸಂಪಾದಿಸುವುದು ರವಿಗೆ ಈಗಿನ ಪ್ರಥಮ ಆದ್ಯತೆ ಎಂದು ಅರಿವಾಯಿತು. 


ಇಷ್ಟ ಕಷ್ಟಗಳ ಹೊರತಾಗಿಯೂ ಮಾಡಲೇಬೇಕಾದ ಕರ್ತವ್ಯಗಳು ನೂರಾರು ಇರುತ್ತವೆ. ಎಲ್ಲವನ್ನು ಯೋಚಿಸುತ್ತಾ ಕೂರುವ ಬದಲು ಇರುವ ಕೆಲಸದಲ್ಲೇ ತನಗೆ ಬೇಕಾದನ್ನು ಸಾಧಿಸಿ ಮುಂದಿನ ಯೋಚನೆ ಮಾಡುವುದು ಒಳ್ಳೆಯ ವಿಚಾರವಾಗಿ ಕಂಡ ನಂತರ ರವಿಯ ಮನಸ್ಸು ಶಾಂತವಾಯಿತು. ತಾನು ಮಾಡುತ್ತಿದ್ದ ಕೆಲಸಕ್ಕೆ ಸ್ವಲ್ಪ ಅರ್ಥ ಅಥವಾ ಉದ್ದೇಶ ಸಿಕ್ಕಿತು.  


ಕಾಮೆಂಟ್‌ಗಳು

- Follow us on

- Google Search