ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ದೊರೆಯುತ್ತದೆಯೇ ?



ಇಂದಿನ ಕಾಲದಲ್ಲಿ ಶಿಕ್ಷಣ ಪದ ಕೇಳಿದ ತಕ್ಷಣ ನೆನಪಾಗುವುದು ಶಾಲೆ , ಕಾಲೇಜು , ವಿಶ್ವವಿದ್ಯಾಲಯಗಳು. ಆದರೆ ಕಲಿಕೆ ಅಥವಾ ಜ್ಞಾನ ಸಂಪಾದನೆ  ಶಿಕ್ಷಣದ ಮೂಲ ಉದ್ದೇಶ. ಜ್ಞಾನ ಸಂಪಾದನೆಯ ಮೂಲ ಉದ್ದೇಶವನ್ನು ಸಾಕಾರಗೊಳಿಸಲು ಇರುವ ವ್ಯವಸ್ಥೆಗಳಲ್ಲಿ ಶಾಲೆ ಕಾಲೇಜು ಸೇರುತ್ತವೆ. ಶಾಲೆ ಕಾಲೇಜುಗಳ ನಾಲ್ಕು ಗೋಡೆಗಳ ನಡುವೆ ಕಲಿಯುವ ವಿಷಯಗಳು ಜೀವನಕ್ಕೆ ಎಷ್ಟು ಮುಖ್ಯ ಆಗಿರುತ್ತವೋ ಅದೇ ರೀತಿ ದಿನನಿತ್ಯ ಜೀವನದ ಅನುಭವಗಳು ಕೂಡ ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 

ಆದರೆ ಇಂದು ಶಿಕ್ಷಣ ಒಂದು ಉದ್ಯಮವಾಗಿ ಮಾರ್ಪಾಡಾಗಿದೆ. ಬಂಡವಾಳಶಾಹಿಗಳ ಉದ್ಯಮಕ್ಕೆ ಅಗತ್ಯವಾಗಿರುವ ಕೆಲಸಗಾರರನ್ನು ಮಾತ್ರ ಇಂದಿನ ಶಿಕ್ಷಣ ರೂಪಿಸುತ್ತಿದೆ. ವ್ಯಕ್ತಿತ್ವ ವಿಕಾಸನವೇ ಶಿಕ್ಷಣದ ಮೂಲ ಉದ್ಧೇಶ ಆಗಿರಬೇಕು. 


ಶಿಕ್ಷಣ ವ್ಯವಸ್ಥೆ ಈ ರೀತಿಯಾಗಿ ಮಾರ್ಪಾಡಾಗಲು ಕೇವಲ ಅದನ್ನು ನಡೆಸುತ್ತಿರುವವರು ಮಾತ್ರವಲ್ಲ , ನಮ್ಮ ಪೋಷಕರ ಮನಸ್ಥಿತಿ ಕೂಡಾ ಹೌದು. ಏನೂ ಅರಿಯದ ಮುಗ್ಧ ಮಕ್ಕಳ ಎಳೆಯ ಮನಸ್ಸಿನ ಮೇಲೆ ಇಂದಿನ ಶಿಕ್ಷಣ ಪದ್ಧತಿ ಬೀರುತ್ತಿರುವ ಪರಿಣಾಮ ಭೀಕರವಾಗಿದೆ. ಮಕ್ಕಳು ಸಹಜವಾಗಿ ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಹಂತ ಹಂತವಾಗಿ ಬೆಳೆಸಿಕೊಳ್ಳುತ್ತಾರೆ. ಆದರೆ , ಇಂದು ಮಕ್ಕಳ ಇಷ್ಟವೇ ಇಲ್ಲದಿದ್ದರೂ ಎಲ್ಲರ ಮಕ್ಕಳಂತೆ ಪೋಷಕರ ಒತ್ತಾಯದ ಮೇರೆಗೆ ಶಾಲೆಗೆ ಹೋಗುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. 


ಮಕ್ಕಳನ್ನು ಸಹಜವಾಗಿ ಪ್ರಕೃತಿಯ ಮಡಿಲಲ್ಲಿ ಬಿಟ್ಟಾಗ ಕುತೂಹಲದಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತವೆ. ಮುಂದೆ ಇದರಲ್ಲೇ ಹೆಚ್ಚು ಆಸಕ್ತಿಯೂ ಬಂದಾಗ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಬೇಕು . ಈ ರೀತಿ ಮಾಡಿದಾಗ ತನ್ನ ಸಂಪೂರ್ಣ ಮಾನಸಿಕ ಶಕ್ತಿಯೊಂದಿಗೆ ಮಕ್ಕಳು ಕಲಿಯಲು ಆರಂಭಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಅತಿ ಮುಂದಿವರಿದಿರುವ  ದೇಶವಾದ ಸ್ವೀಡನ್ ಅಲ್ಲಿ ವಿದ್ಯಾರ್ಥಿಗಳಿಗೆ ಹತ್ತು ಹದಿನೈದು ನಿಮಿಷದ ಹೋಂ ವರ್ಕ್ ಕೊಡಲಾಗುತ್ತದೆ. ಬೇರೆ ಸಮಯಗಳಲ್ಲಿ ಇತರ ಮಕ್ಕಳೊಂದಿಗೆ ಆಟ , ಸಂಗೀತ , ಸಾಹಿತ್ಯ , ನೃತ್ಯ , ಕಲೆ , ಚಿತ್ರಕಲೆ , ಕರಕುಶಲ ವಸ್ತುಗಳ ತಯಾರಿಕೆ ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತದೆ. 



ಇದರಿಂದಾಗಿ ಮಕ್ಕಳಿಗೆ ತಮಗೆ ಸಹಜವಾಗಿ ಇಷ್ಟವಿರುವ ವಿಷಯಗಳು ತಿಳಿಯುತ್ತವೆ , ನಂತರದ ಹಂತಗಳಲ್ಲಿ ತಮಗೆ ಇಷ್ಟವಿರುವ ವಿಷಯಗಳನ್ನೇ ಅವರು ತೆಗೆದುಕೊಂಡು ಅಭ್ಯಾಸ ಮಾಡುತ್ತಾರೆ. ಇದರಿಂದಾಗಿ ಕಾಲೇಜಿನಿಂದ ಹೊರಬೀಳುವ ವಿದ್ಯಾರ್ಥಿಗಳ ಸಂಖ್ಯೆ ಇಲ್ಲವಾಗಿದೆ ಎಂದು ಅಲ್ಲಿನ ಶಿಕ್ಷಣ ತಜ್ಞರು  ವಿವರಿಸುತ್ತಾರೆ. 



ಕಾಮೆಂಟ್‌ಗಳು

- Follow us on

- Google Search