ಸಂಸ್ಕೃತವಿವಿಬೇಡ ಅಭಿಯಾನ

ಕಳೆದ ವಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದ ಬಗ್ಗೆ ಚರ್ಚೆಗಳು ಆದವು. ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರಾರು ಎಕರೆ ಕಾಡಿನ ಜಾಗ ಮತ್ತು ನೂರಾರು ಕೋಟಿಗಳ ಅನುದಾನವನ್ನು ಸರ್ಕಾರ ನೀಡಲು ಮುಂದಾಗಿರುವುದಕ್ಕೆ ಚರ್ಚೆ ಶುರುವಾಗಿದ್ದು. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮತ್ತು ಸಾಕಷ್ಟು ಕನ್ನಡಿಗರು #ಸಂಸ್ಕೃತವಿವಿಬೇಡ ಎನ್ನುವ ಅಭಿಯಾನ ಹಮ್ಮಿಕೊಂಡರು. ಇದಕ್ಕೆ ಸಾಕಷ್ಟು ಸೂಕ್ತ ಕಾರಣಗಳನ್ನು ಸಹ ನೀಡಿದರು. ಅವುಗಳಲ್ಲಿ ಪ್ರಮುಖ ಕಾರಣಗಳು ಎಂದರೆ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅಷ್ಟು ದೊಡ್ಡ ಮಟ್ಟದ ಅನುದಾನವನ್ನು ನೀಡಲು ಮುಂದಾಗಿರುವ ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಒಂದೆರಡು ಕೋಟಿಗಳ ಅನುದಾನವನ್ನು ಸಮಯಕ್ಕೆ ಸರಿಯಾಗಿ ನೀಡಲು ಹಲವಾರು ಕೊರತೆಯ ಕಾರಣಗಳನ್ನು ಕೊಡುತ್ತಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಿಗೆ ಅಧ್ಯಯನ ಮತ್ತು ಸಂಶೋಧನೆಗೆ ಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದಾಗಿ ಅಲ್ಲಿನ ಪ್ರಾಧ್ಯಾಪಕರೆ ತಮ್ಮ ತೊಂದರೆಯನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಇತರೆ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ, ಕೊಡವ ಮುಂತಾದ ಭಾಷೆಗಳಿಗೆ ಸರಿಯಾದ ಅನುದಾನ ಸಿಗದೆ ಆ ಭಾಷೆಯಲ್ಲಿ ನಡೆಯಬೇಕಾದ ಕೆಲಸಗಳು ಹಿಂದುಳಿದಿವೆ. ಸಹಾಯಕ ಪ್ರಾಧ್ಯಾಪಕರಿಗೆ ಸೂಕ್ತ ಸಂಬಳ ನೀಡುವ ಬದಲು ಹೆಚ್ಚಿನವರನ್ನು ಕೆಲಸದಿಂದ ವಜಾಗೊಳಿಸಿ, ಉಳಿದವರಿಗೆ ಕೆಲಸದ ಅವಧಿ ಮತ್ತು ಸಂಬಳವನ್ನು ಹೆಚ್ಚಿಸಲಾಗಿದೆ. ಮಾಡಬೇಕಾದ ಕೆಲಸಗಳೇ ಇಷ್ಟೊಂದು ಅನುದಾನದ ಕೊರತೆ ಎದುರಿಸುತ್ತಿರುವಾಗ ಅದು ಆನೆಗಳು ಓಡಾಡುವ ಪ್ರದೇಶದಲ್ಲಿ ನೂರಾರು ಎಕರೆ ಜಾಗದೊಂದಿಗೆ ನೂರಾರು ಕೋಟಿಗಳ ಅನುದಾನ ನೀಡಿರುವುದನ್ನು ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸಾಕಷ್ಟು ಪ್ರಜೆಗಳ ಅಸಮಾಧಾನ ಮತ್ತು ವಿರೋಧಕ್ಕೆ ದಾರಿಮಾಡಿಕೊಟ್ಟಿದೆ.

ಇತ್ತೀಚಿಗೆ ಕರ್ನಾಟಕ ಸರ್ಕಾರ ಪದವಿ ಹಂತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವಂತೆ ನಿಯಮವೊಂದನ್ನು ರೂಪಿಸಿತ್ತು. ಇದನ್ನು ವಿರೋಧಿಸಿ RSSಗೆ ಸೇರಿದ ಹಲವು ಸಂಸ್ಕೃತ ಸಂಸ್ಥೆಗಳು ಕರ್ನಾಟಕ ಹೈ ಕೋರ್ಟ್ ಮೆಟ್ಟಿಲೇರಿದ್ದವು. ಕನ್ನಡ ಕಡ್ಡಾಯದ ವಿರುದ್ಧ ಕೋರ್ಟಿಗೆ ಹೋಗಿದ್ದ ಸಂಸ್ಕೃತ ಸಂಸ್ಥೆಗಳ ಪರವಾಗಿ ತೀರ್ಪು ಕೂಡ ಬಂತು. ಹೀಗಾಗಿ ಪದವಿ ಹಂತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಆದೇಶವನ್ನು ಕರ್ನಾಟಕ ಸರ್ಕಾರ ಇತ್ತೀಚಿಗೆ ಹಿಂಪಡೆದಿದೆ. ಬೇರೆ ರಾಜ್ಯಗಳಲ್ಲಿ ಇಂತಹ ಕಿತಾಪತಿ ಮಾಡದೆ ಕೇವಲ ಕರ್ನಾಟಕದಲ್ಲಿ ಮಾತ್ರ ಈ ಸಂಸ್ಥೆಗಳು ಕೋರ್ಟಿಗೆ ಹೋಗಿರುವುದು ಮುಂದಿನ ದಿನಗಳಲ್ಲಿ ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡ ಕಲಿಕೆಗೆ ಸಂಬಂಧಿಸಿದ ಕೇಸುಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. 
ಕನ್ನಡ ಪರ ಸಂಘಟನೆಗಳು ಆರಂಭಿಸಿದ ಈ ಅಭಿಯಾನಕ್ಕೆ ಅಂತರ್ಜಾಲದಲ್ಲಿ ಹಲವಾರು ಇತರೆ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿವೆ. ಇದರಿಂದಾಗಿ ಇದು ಕೇವಲ ಬಿಜೆಪಿ ಸರ್ಕಾರವನ್ನು ವಿರೋಧಿಸುವ ಅಭಿಯಾನದಂತೆ ಕೆಲವು ಬಿಜೆಪಿ ಬೆಂಬಲಿಗರಿಗೆ ಕಂಡುಬಂದರೂ ಇದು ಮಾತೃಭಾಷೆ ಕನ್ನಡಕ್ಕೆ ಸಿಗಬೇಕಾದ ಅನುದಾನ ಸರ್ಕಾರದಿಂದ ದೊರೆಯದೆ ಇರುವ ಕಾರಣಕ್ಕೆ ಅಭಿಯಾನ ಬೆಂಬಲ ಪಡೆದುಕೊಂಡಿದೆ. ಆದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಜಟಾಪಟಿ ಮುಂದುವರೆದಿದೆ. 
ಇದರಲ್ಲಿ ಕೇಳಿಬರುತ್ತಿರುವ ಒಂದು ಮಾತೆಂದರೆ "ಸಂಸ್ಕೃತ ಭಾರತದ ಎಲ್ಲ ಭಾಷೆಗಳಿಗೆ ತಾಯಿ" ಎಂಬುದು. ಇದು ನೂರಕ್ಕೆ ನೂರರಷ್ಟು ಸುಳ್ಳು. ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಬೇರೆ ಬೇರೆ ನುಡಿಗುಂಪುಗಳಿಗೆ ಸೇರಿರುವ ಭಾಷೆಗಳು. ಕನ್ನಡ ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆ. ಸಂಸ್ಕೃತ ಇಂಡೋ ಯುರೋಪಿಯನ್ ಭಾಷಾವರ್ಗಕ್ಕೆ ಸೇರಿದ ಭಾಷೆ. ಹೀಗಾಗಿ ಕನ್ನಡ ಸಂಸ್ಕೃತದಿಂದ ಬಂದಿದೆ ಎನ್ನುವುದು ತಪ್ಪು ಮತ್ತು ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ವೈಜ್ಞಾನಿಕ ಸಾಕ್ಷಿ ಆಧಾರಗಳು ಇಲ್ಲ. ಆದರೆ, ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಹೆಚ್ಚಾಗಿ ಕಾಣಬಹುದು. ಇದಕ್ಕೆ ಪ್ರಮುಖ ಕಾರಣ, ಹಿಂದೆ ಸಂಸ್ಕೃತದ ಕಲಿಕೆಯನ್ನು ಹೆಚ್ಚಾಗಿ ಒಂದು ವರ್ಗಕ್ಕೆ ಸೀಮಿತಗೊಳಿಸಿದ್ದರು. ಸಾಹಿತ್ಯವನ್ನು ರಚಿಸುವವರು ಸಂಸ್ಕೃತವನ್ನು ಕಲಿತವರು ಅಥವಾ ಸಂಸ್ಕೃತದಿಂದ ಪ್ರಭಾವಿತರಾಗಿದ್ದವರು. ಇದರಿಂದಾಗಿ ಬಹಳ ಹಿಂದಿನ ಕಾಲದಿಂದ ಸಾಹಿತ್ಯದಲ್ಲಿ  ಮತ್ತು ಮಾಧ್ಯಮದಲ್ಲಿ ಕನ್ನಡದಲ್ಲಿ ಸುಲಭವಾಗಿ ಅರ್ಥವಾಗುವ ಪದಗಳು ಇದ್ದರೂ ಸಹ ಸಂಸ್ಕೃತ ಪದಗಳನ್ನು ಬಳಸುವ ಅಭ್ಯಾಸದಿಂದ ಸಂಸ್ಕೃತದ ಸಾಕಷ್ಟು ಪದಗಳು ಕನ್ನಡದಲ್ಲಿ ಕಾಣಸಿಗುತ್ತವೆ. 

ಮತ್ತೊಂದು ಪ್ರಮುಖ ಮಾತೆಂದರೆ "ನೀವೇಕೆ ಉರ್ದು ವಿಶ್ವವಿದ್ಯಾಲಯ ವಿರೋಧ ಮಾಡುವುದಿಲ್ಲ" ಎನ್ನುವ ಕೊಂಕು ಮಾತುಗಳು. ಒಂದು ವಿಷಯವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು, ಉರ್ದು ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಹೊಂದಿದವರ ಸಂಖ್ಯೆ ೨೦೧೧ರ ಗಣತಿ ಪ್ರಕಾರ ಕರ್ನಾಟಕದಲ್ಲಿ ೭೦ ಲಕ್ಷಕ್ಕೂ ಹೆಚ್ಚಿದೆ. ಸಂಸ್ಕೃತವನ್ನು ಮಾತೃಭಾಷೆಯಾಗಿ ಹೊಂದಿದವರ ಸಂಖ್ಯೆ ಸುಮಾರು ಐದಾರು ಸಾವಿರ ಇರಬಹುದು. ಈಗಾಗಲೇ ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳು ನಮ್ಮಲ್ಲಿ ಇವೆ. ಇರುವ ವಿಶ್ವವಿದ್ಯಾಲಯಗಳೆ ಸಂಸ್ಕೃತ ಕಲಿಯಲು ಬಯಸುವವರಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಸಾಕಷ್ಟು ಸೀಟುಗಳನ್ನು ಹೊಂದಿವೆ. ಅಲ್ಲಿ ಓದಿ ಕಲಿತ ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಉದ್ಯೋಗಾವಕಾಶಗಳು ಏನಿವೆ ಎಂಬುದನ್ನು ಸಹ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. 
   
ಕರ್ನಾಟಕದಲ್ಲಿ ಇರುವ ಮತ್ತೂರು ಸಂಸ್ಕೃತ ಮಾತನಾಡುವ ಜನರು ಇರುವ ಊರು ಎಂದು ಪ್ರಚಾರ ಪಡೆದಿದೆ, ಆದರೆ ಅಲ್ಲಿ ಕೇವಲ ಕೆಲವು ಜನರು ಸಂಸ್ಕೃತ ಕಲಿತವರು ನಾವು ಎಂಬ ಕಾರಣಕ್ಕೆ ಇತರರನ್ನು ತಮ್ಮ ಮನೆ ದೇವಸ್ಥಾನಗಳ ಬಳಿ ಬಿಡದೆ ಇರುವುದು ಸಮಾಜ ಸುಧಾರಣೆಗೆ ಅಡ್ಡಗೋಡೆಯಾಗಿದೆ. ಆ ವಿಡಿಯೋ ನೋಡಿದಾಗ ನನಗೂ ಕೂಡ ಬಹಳ ಬೇಸರವಾಯಿತು. ಜಾತಿಯೇ ಇಲ್ಲ ಎಂದು ವಾದ ಮಾಡುವ ಜನರ ಕಣ್ಣು ತೆರೆಸುವ ವಿಡಿಯೋ ಅದು. 
ಇದು ನಮ್ಮ ಕನ್ನಡ ಭಾಷೆಯ ಸೌಂದರ್ಯ. ಸಂಸ್ಕೃತ ಭಾಷೆಯಂತೆ ಮಡಿವಂತಿಕೆ ಮಾಡದೆ ತನ್ನೊಡಲಿಗೆ ಸಂಸ್ಕೃತವನ್ನು ಹಾಕಿಕೊಂಡು ಬೆಳೆಸಿ ಇಂದು ಕನ್ನಡದ್ದೇ ಪದಗಳಾಗಿ ಬಳಕೆಯಲ್ಲಿವೆ. ಸಂಸ್ಕೃತ ಭಾಷೆ ಅವನತಿಯ ಅಂಚಿಗೆ ತಲುಪಲು ಸಂಸ್ಕೃತದ ಕಲಿಕೆಯನ್ನು ಒಂದು ವರ್ಗದ ಜನರಿಗೆ ಸೀಮಿತಗೊಳಿಸಿದ್ದು ಸಹ ಪ್ರಮುಖ ಕಾರಣ. ಸಂಸ್ಕೃತ ದೇವಭಾಷೆ ಎನ್ನುವ ಕಾರಣಕ್ಕೆ ಜಾತಿಯ ಆಧಾರದ ಮೇಲೆ ಸಂಸ್ಕೃತದಿಂದ ಬಹುಜನರು ದೂರವುಳಿದರು. ಇದರಿಂದಾಗಿ ಸಂಸ್ಕೃತವನ್ನು ಇತರ ಭಾಷೆಗಳಿಗೆ ತುಂಬುವ ಕೆಲಸವನ್ನು ಆಗಿನ ಕಾಲದ ಪಂಡಿತರು ಸಾಹಿತಿಗಳು ಮುಂತಾದವರು ಮಾಡಿದರು. ಆದರೆ ನಮ್ಮ ಮಾತೃಭಾಷೆಯಾದ ಕನ್ನಡ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಿದೆ. ಎಷ್ಟೇ ಭಾಷೆಗಳನ್ನು ಕಲಿತರು ಸಹ ಕನ್ನಡ ಭಾಷೆ ಎಂದಾಗ ಕನ್ನಡಿಗರ ಹೃದಯ ಅರಳುತ್ತದೆ, ಕೇಳಿದವರಿಗೆ ಕಿವಿ ತಂಪಾಗುತ್ತದೆ.
ದಿನನಿತ್ಯದ ಜೀವನದಲ್ಲಿ, ವ್ಯಾಪಾರ ವಹಿವಾಟು ಮುಂತಾದ ಕ್ಷೇತ್ರಗಳಲ್ಲಿ ಕನ್ನಡಿಗರು ಕನ್ನಡ ಭಾಷೆಯ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಸುಮಾರು ೨೫೦೦ ವರ್ಷಗಳ ಇತಿಹಾಸ ನಮ್ಮ ಕನ್ನಡ ಭಾಷೆಗೆ ಇದೆ. ಸಂಸ್ಕೃತದಲ್ಲಿರುವ ಪದಗಳನ್ನು ತುರುಕಿ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎನ್ನುವ ಹಂತಕ್ಕೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತಲುಪಿದ್ದಾರೆ. ನಿಮಗೆ ಅನುಮಾನವಿದ್ದರೆ ಒಮ್ಮೆ ಅಂತರ್ಜಾಲದಲ್ಲಿ ಲಭ್ಯವಿರುವ ಕನ್ನಡ ಮಾಧ್ಯಮದ ಗಣಿತ ಮತ್ತು ವಿಜ್ಞಾನ ಪಠ್ಯ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮಗೆ ತಿಳಿದಿರುವ ಪಾಠ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಎಷ್ಟು ಬಾರಿ ಓದಿದರೂ ಅರ್ಥವೆ ಆಗದಂತಹ ಕ್ಲಿಷ್ಟ ಸಂಸ್ಕೃತ ಪದಗಳನ್ನು ಪಠ್ಯ ಪುಸ್ತಕಗಳಲ್ಲಿ ತುಂಬಿ ಕನ್ನಡದಲ್ಲಿ ಕಲಿಕೆಯನ್ನು ಕಷ್ಟಕರವಾಗಿ ಮಾಡಲಾಗಿದೆ. ಹೀಗಾಗಿ ಕನ್ನಡದಲ್ಲಿ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬರೆದು ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ಒಂದೆಡೆ ಹಿಂದಿ, ಇನ್ನೊಂದೆಡೆ ಸಂಸ್ಕೃತ, ಮತ್ತೊಂದು ಕಡೆ ಜೀವನ ನಿರ್ವಹಣೆಗಾಗಿ ಇಂಗ್ಲೀಶ್ ಹೀಗೆ ಮೂರು ಭಾಷೆಗಳು ಒಂದಿಲ್ಲೊಂದು ರೀತಿಯಲ್ಲಿ ಕನ್ನಡ ಮಾತ್ರ ಅರ್ಥವಾಗುವ ಕನ್ನಡಿಗರಿಗೆ ತೊಡಕಾಗಿವೆ. 

ಬೇರೆ ಭಾಷೆಗಳಿಂದಲೂ ನಮ್ಮ ಭಾಷೆಗೆ ಪದಗಳನ್ನು ಎರವಲು ತೆಗೆದುಕೊಳ್ಳುವುದು ತಪ್ಪಲ್ಲ, ಆದರೆ ಆ ಪದಗಳನ್ನು ಬಳಸಿದಾಗ ಸುಲಭವಾಗಿ ಅರ್ಥವಾಗುವಂತೆ ಇರಬೇಕು. ಭಾಷೆಯ ಮುಖ್ಯ ಉದ್ದೇಶವೇ ಮಾಹಿತಿಯ ಕೊಡುಕೊಳ್ಳುವಿಕೆ, ಹೀಗಿರುವಾಗ ನಾನು ಅರ್ಥವಾಗದ ಪದಗಳನ್ನು ಬಳಸಿದರೆ ಕಾಲ ಕ್ರಮೇಣ ಜನರು ತಮಗೆ ತಿಳಿದಿರುವ ಇನ್ನೊಂದು ಭಾಷೆಯ ಅರ್ಥವಾಗುವ ಪದಗಳನ್ನು ಬಳಸಲು ಆರಂಭಿಸುತ್ತಾರೆ. ಇದೆ ಪ್ರಮುಖ ಕಾರಣ, ಇತ್ತೀಚಿಗೆ ನಾವು ಇತರರೊಂದಿಗೆ ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ಬೇರೆ ಭಾಷೆಯ ಸಾಕಷ್ಟು ಪದಗಳು ನಮಗೆ ತಿಳಿಯದಂತೆ ಮಾತಿನಲ್ಲಿ ಬಂದುಬಿಡುತ್ತವೆ. ಅವುಗಳಿಗೆ ನಮ್ಮ ಭಾಷೆಯಲ್ಲಿ ಪದಗಳು ಇಲ್ಲ ಅಥವಾ ಹೊಸ ಪದಗಳನ್ನು ಕಟ್ಟಲು ಸಾಧ್ಯವಿಲ್ಲ ಎಂದಲ್ಲ, ಮಾತನಾಡುವ ಸಂದರ್ಭದಲ್ಲಿ ಇತರರಿಗೆ ಅರ್ಥ ಮಾಡಿಸುವ ಉದ್ದೇಶ ನಮ್ಮದಾಗಿರುತ್ತದೆ. ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ವೈಜ್ಞಾನಿಕವಾಗಿ ಮತ್ತು ತರ್ಕಬದ್ಧವಾಗಿ ತಿಳಿದುಕೊಂಡಿರುವವರು ಕನ್ನಡ ಭಾಷೆ ಒಂದು ಸ್ವತಂತ್ರ ನುಡಿ ಎಂಬ ಸತ್ಯವನ್ನು ಖಂಡಿತ ಅರ್ಥ ಮಾಡಿಕೊಂಡಿರುತ್ತಾರೆ. ಈ ವಿಚಾರವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಕೆಲಸವನ್ನು ಕನ್ನಡಿಗರು ಮಾಡಬೇಕು. ಕನ್ನಡಿಗರಲ್ಲಿ ತಮ್ಮ ಭಾಷೆಯ ಬಗ್ಗೆ ಮತ್ತು ಕರ್ನಾಟಕದ ಇತಿಹಾಸದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜಾಗೃತಿ ಮೂಡುತ್ತಿರುವುದು ಬಹಳ ಸಂತಸದ ಸಂಗತಿ, ಆದರೆ ಇದು ಯಾರ ಮೇಲೂ ದ್ವೇಷ ಹಬ್ಬಿಸುವ ಕೆಲಸವಾಗಿ ಬೆಳೆಯಬಾರದು. 

#ಸಂಸ್ಕೃತವಿವಿಬೇಡ  ಅಭಿಯಾನ ಸಂಸ್ಕೃತ ಭಾಷೆಯ ವಿರುದ್ಧ ಅಲ್ಲ. ಇದು ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸಿಗಬೇಕಾದ ಅನುದಾನ ಮತ್ತು ಮನ್ನಣೆ ಸಿಗದೆ ಇರುವ ಅನ್ಯಾಯದ ವಿರುದ್ಧ. ಕನ್ನಡವನ್ನು ಶಿಕ್ಷಣ ಮತ್ತು ಆಡಳಿತದಿಂದ ದೂರವಿಡುವ ಯಾವುದೇ ಯೋಜನೆಗಳನ್ನು ಕಡ್ಡಾಯವಾಗಿ ಕನ್ನಡಿಗರು ವಿರೋಧಿಸಬೇಕು. ಕನ್ನಡ ನಮ್ಮ ಮಾತೃಭಾಷೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು. ಸ್ವಲ್ಪ ವರ್ಷಗಳ ಹಿಂದೆ ಹಿಂದಿ ಭಾಷೆ ಇದ್ದರೆ ಏನು ತೊಂದರೆ ಎಂದುಕೊಳ್ಳುತ್ತಿದ್ದ ಕನ್ನಡಿಗರು ಇಂದು ವಿವಿಧ ಪರೀಕ್ಷೆಗಳಲ್ಲಿ ಮತ್ತು ಸರ್ಕಾರದ ಸೇವೆಗಳಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ತಮ್ಮ ಜೀವನ ಕಟ್ಟಿಕೊಳ್ಳಲು ಉಪಯೋಗವಾಗುವ ಇಂಗ್ಲೀಶ್ ಭಾಷೆ ಕಲಿಯುವ ಅಗತ್ಯ ಇಂದಿನ ಜಗತ್ತಿಗೆ ಇದೆ. ಇದರೊಂದಿಗೆ ತಮ್ಮ ಸ್ವಂತ ಆಸಕ್ತಿಯಿಂದ ಬೇರೆ ಯಾವುದೇ ಭಾಷೆ ಕಲಿಯುವುದಾದರೂ ಕಲಿಯಲಿ. ಆದರೆ, ನಮ್ಮ ರಾಜ್ಯದಲ್ಲಿಯೇ ಕನ್ನಡದ ಅಭಿವೃದ್ಧಿಗೆ ಆಗಬೇಕಾದ ಕೆಲಸಗಳು ನಡೆಯದೆ ಇತರೆ ಭಾಷೆಗಳನ್ನು ಬೆಳೆಸಲು ನೂರಾರು ಕೋಟಿ ಖರ್ಚು ಮಾಡಿದರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ. 
ದಿನದಿಂದ ದಿನಕ್ಕೆ ಕನ್ನಡ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಿಂದ ವಿವಿಧ ಕಾರಣಗಳನ್ನು ಹೇಳಿ ದೂರ ಮಾಡಲಾಗುತ್ತಿದೆ. ಇದು ಯಾವುದೋ ಒಂದು ಪಕ್ಷದ ಮೇಲೆ ಹೊರಿಸುವಂತಹ ತಪ್ಪಲ್ಲ, ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ತರುವ ಬದಲು ಹೆಸರಿಗೆ ಮಾತ್ರ ಕನ್ನಡಪರ ಎನ್ನುವಂತೆ ರಾಜಕೀಯ ಪಕ್ಷಗಳು ಕನ್ನಡಿಗರಿಗೆ ಮೋಸ ಮಾಡುತ್ತಿವೆ. ಹಿಂದೆ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸಲು ಸರ್ಕಾರ ಮುಂದಾದಾಗ ಡಾ.ರಾಜಕುಮಾರ್ ಮುಂತಾದ ಹಿರಿಯರ ನೇತೃತ್ವದಲ್ಲಿ ಕನ್ನಡಿಗರೆಲ್ಲರೂ ಒಂದಾಗಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಿಂದಿ ಹೇರಿಕೆಯ ವಿರುದ್ಧದ ಹೋರಾಟ ೨೦೧೪ರ ನಂತರ ಶುರುವಾಗಿದ್ದಲ್ಲ, ಇದಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ತಮಿಳುನಾಡಿನಲ್ಲಿ ಅಲ್ಲಿನ ಜನರು ತಮಿಳು ಭಾಷೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರದ ನಿಯಮಗಳನ್ನು ರೂಪಿಸುತ್ತಿದ್ದಾರೆ. ದ್ವಿಭಾಷಾ ನೀತಿಯನ್ನು ಪಾಲಿಸುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ, ಪಂಗಡ ಎಲ್ಲವನ್ನೂ ಮೀರಿದ ನಮ್ಮ ನಾಡಿನ ಆಸ್ತಿ ಕನ್ನಡ ಭಾಷೆ. ಯಾವ ಭಾಷೆಗಳಿಗೂ ಸಾಹಿತ್ಯ, ಸಂಸ್ಕೃತಿ ಮುಂತಾದ ವಿಚಾರಗಳಲ್ಲಿ ಕಡಿಮೆಯಿಲ್ಲ. ಇಲ್ಲದ ಸುಳ್ಳು ಸುದ್ದಿಗಳಿಗೆ ಮಾರುಹೋಗಿ ನಮ್ಮ ಭಾಷೆಗೆ ಅನ್ಯಾಯ ಮಾಡಲು ಅನುವು ಮಾಡಿಕೊಡುವುದು ಸರಿಯಲ್ಲ.

"ರಾಜ ನುಡಿಯೆಂದೊಂದು ರಾಷ್ಟ್ರ ನುಡಿಯೊಂದೊಂದು
ದೇವ ನುಡಿಯೆಂದೊಂದು ಹತ್ತಿ ಜಗ್ಗಿ
ನಿರಿ ನಿಟಿಲು ನಿಟಿಲೆಂದು ಮುದಿ ಮೂಳೆ ಮುರಿಯುತಿದೆ.
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ''
-- ಕುವೆಂಪು 

ಇನ್ನೂ ಕನ್ನಡ ಭಾಷೆಯಲ್ಲಿ ಪತ್ರಿಕೆಗಳನ್ನು ನಡೆಸಿ ಹಣ ಸಂಪಾದಿಸಿ ಜೀವನ ನಡೆಸುವ ಪತ್ರಕರ್ತರು ಆಧಾರವಿಲ್ಲದ ಸುಳ್ಳು ಸುದ್ಧಿಗಳನ್ನು ತಲೆಯ ಮೇಲೆ ಹೊಡೆದಂತೆ ತಮ್ಮ ತಮ್ಮ ಪತ್ರಿಕೆಗಳಲ್ಲಿ ಬರೆದು ಪ್ರಕಟಿಸುತ್ತಿದ್ದಾರೆ. ಸರಿಯಾದ ತಿಳುವಳಿಕೆಯಿಲ್ಲದ ಸಾಮಾನ್ಯ ನಾಗರಿಕರು ಅವುಗಳನ್ನು ಓದಿ ಸತ್ಯವೆಂದೆ ನಂಬಿಬಿಡುತ್ತಾರೆ. ಇದರಿಂದ ಪತ್ರಿಕೋದ್ಯಮ ಎನ್ನುವುದು ಜನರ ಕಷ್ಟಗಳಿಗೆ ಸ್ಪಂದಿಸದೆ ಕೇವಲ ಯಾರದೋ ಅರ್ಥವಿಲ್ಲದ ಸುಳ್ಳು ಸುದ್ಧಿಗಳ ಪ್ರಚಾರ ಕೆಲಸದಲ್ಲಿ ಮುಳುಗಿ ಹೋಗಿದೆ. ಇದು ದೀರ್ಘ ಕಾಲದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರ ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ಅಗತ್ಯ ಸೇವೆಗಳು ದೊರೆಯುವುದು ಬಹಳ ಮುಖ್ಯ, ಇಲ್ಲವಾದರೆ ಆ ಭಾಷೆ ಮಾತ್ರ ತಿಳಿದವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಂಡಂತಾಗುತ್ತದೆ. ಬೇರೆ ಭಾಷೆಗಳನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಕುವೆಂಪು ಅವರ ಹೆಸರನ್ನು ಸಹ ಬಳಸಿಕೊಳ್ಳುತ್ತಿರುವುದು ವಿಚಿತ್ರ ಅನ್ನಿಸುತ್ತಿದೆ. 

ಕನ್ನಡಿಗರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಈ ಕೆಲಸಗಳನ್ನು ಮಾಡಲೇಬೇಕು,
೧. ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ.
೨. ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಸುಲಭಗೊಳಿಸುವುದು.
೩. ಕನ್ನಡ ಮಾಧ್ಯಮದಲ್ಲಿ ಕಲಿಯುವುದಕ್ಕೆ ಸರ್ಕಾರದಿಂದ ಪ್ರೋತ್ಸಾಹ ನೀಡುವ ಯೋಜನೆಗಳು.
೪. ಎಲ್ಲ ಬಗೆಯ ಆಡಳಿತದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವುದು.
೫. ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉದ್ಯೋಗಾವಕಾಶಗಳು. 
೬. ಕನ್ನಡವನ್ನು ಶಿಕ್ಷಣದ ವಿವಿಧ ಹಂತಗಳಲ್ಲಿ ಕಲಿಸುವಂತೆ ಯೋಜನೆ ರೂಪಿಸುವುದು. 

ಈ ಕನ್ನಡಪರ ನಿಲುವುಗಳು ನಮ್ಮ ರಾಜ್ಯದಲ್ಲಿ ಆಡಳಿತ ನಡೆಸುವ ಪ್ರತಿ ರಾಜಕಾರಣಿಗೆ ಇರಬೇಕು. ಯಾವುದೇ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಿಂದ ದೂರವಾಗಿಸಿದರೆ ಕಾಲಕ್ರಮೇಣ ಆ ಭಾಷೆಯ ಬೆಳವಣಿಗೆ ಕಡಿಮೆಯಾಗುತ್ತದೆ. ನಮ್ಮ ಕನ್ನಡ ವಿಶ್ವವಿದ್ಯಾಲಯಗಳಿಗೆ ಮತ್ತು ಸರ್ಕಾರಿ ಶಾಲಾ ಕಾಲೇಜುಗಳಿಗೆ ನ್ಯಾಯವಾಗಿ ದೊರೆಯಬೇಕಾದ ಅನುದಾನ ದೊರೆತರೆ ಇತರೆ ಭಾಷೆಗಳ ಅಭಿವೃದ್ಧಿ ಸಾಧ್ಯ. ಮಾತೃಭಾಷೆಯನ್ನೇ ಕಡೆಗಣನೆ ಮಾಡಿದರೆ ಅದು ನಾಡಿನ ಜನರಿಗೆ ಮಾಡುವ ಅನ್ಯಾಯವಾಗುತ್ತದೆ. ಹೆಸರಿನಲ್ಲಿ ಅಥವಾ ಭಾಷೆಯಲ್ಲಿ ಇನ್ನೊಂದು ಭಾಷೆಯ ಪದಗಳು ಇವೆ ಎಂಬ ಮಾತ್ರಕ್ಕೆ ಇನ್ನೊಂದು ಭಾಷೆ ನಮ್ಮ ಭಾಷೆಗಿಂತ ಮೇಲು ಎಂದು ಹೇಳಲು ಸಾಧ್ಯವಿಲ್ಲ. ಕನ್ನಡದಲ್ಲಿಯೂ ಪೂಜೆ ಮಾಡುವುದನ್ನು ಹಿರೆಮಗಳೂರು ಕಣ್ಣನ್ ಕನ್ನಡಿಗರಿಗೆ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ಬೆಳೆಸದೆ ಬೇರೆ ರಾಜ್ಯಗಳಲ್ಲಿ ಕನ್ನಡ ಬೆಳೆಸುವ ಕೆಲಸಗಳನ್ನು ಆರಂಭಿಸಲು ಸಾಧ್ಯವಿಲ್ಲ. ಕನ್ನಡ ಉಳಿಸುವುದು ಮತ್ತು ಬೆಳೆಸುವುದು ನಮ್ಮ ಸರ್ಕಾರದ ಕರ್ತವ್ಯ, ಇದರೊಂದಿಗೆ ಕರ್ನಾಟಕದ ಇತರೆ ಭಾಷೆಗಳಿಗೂ ಸಿಗಬೇಕಾದ ಅನುದಾನ ಸಿಗಲಿ ಮತ್ತು ಪ್ರತಿಯೊಬ್ಬರ ಮಾತೃಭಾಷೆಯು ಬೆಳೆದು ನಮ್ಮ ದೇಶದಲ್ಲಿ ನಿಜವಾದ ಅರ್ಥದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲಿ. 

***

ಕಾಮೆಂಟ್‌ಗಳು

- Follow us on

- Google Search