ಜಾತ್ಯಾತೀತ ಅಥವಾ ಸೆಕ್ಯುಲರ್ ತತ್ವಗಳು

ಭಾರತದ ಸಂವಿಧಾನ ನಮ್ಮ ದೇಶವನ್ನು ಜಾತ್ಯಾತೀತ ರಾಷ್ಟ್ರ ಎಂದು ಹೇಳಿದೆ. ಏನು ಹಾಗೆಂದರೆ ? ಸುಲಭವಾಗಿ ಹೇಳಬೇಕೆಂದರೆ ಜಾತಿ, ಧರ್ಮ, ನಂಬಿಕೆಗಳ ಆಧಾರದ ಮೇಲೆ ಪ್ರಜೆಗಳಿಗೆ ಭೇದ ಭಾವ ಮಾಡದಿರುವುದು. ಎಲ್ಲ ಜಾತಿ ಧರ್ಮ ಪಂಗಡಗಳಿಗೆ ಸೇರಿದ ಭಾರತದ ಪ್ರಜೆಗಳನ್ನು ಸಮಾನವಾಗಿ ಕಾಣುವ ಕಾನೂನು ಮತ್ತು ಈಗಾಗಲೇ ಸಮಾಜದಲ್ಲಿ ಇರುವ ಅಸಮಾನತೆಯನ್ನು ಹೋಗಲಾಡಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರುವುದು ಜಾತ್ಯತೀತ ತತ್ವಗಳಿಂದ ಪ್ರೇರಣೆಗೊಂಡಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೆಕ್ಯುಲರ್ ಎಂಬ ಪದ ಕೇಳಿದಾಕ್ಷಣ ಹಲವರಿಗೆ ಇರುಸು ಮುರುಸು ಉಂಟಾಗುತ್ತದೆ. ಸೆಕ್ಯುಲರ್ ಎಂದು ಹೇಳಿಕೊಂಡು ಓಡಾಡುವ ಜನರಿಂದ ನಮ್ಮ ಧರ್ಮವೇ ನಾಶವಾಗಿ ಹೋಗುತ್ತದೆ ಎನ್ನುವ ವಿಚಿತ್ರ ಕಲ್ಪನೆ ಹಲವಾರು ಜನರಲ್ಲಿ ಇದೆ. ಯಾಕೆ ಹೀಗೆ ಎಂದು ಯೋಚಿಸಿದರೆ ಜಾತ್ಯಾತೀತ ಎನ್ನುವ ಪದ ಕೂಡ ಹಲವಾರು ಅರ್ಥಗಳಲ್ಲಿ ಸಮಾಜದಲ್ಲಿ ಆಚರಣೆಗೆ ಬಂದಿದೆ. 

ಒಂದು ಬಗೆಯ ಜಾತ್ಯಾತೀತತೆ ಎಂದರೆ ಎಲ್ಲರ ಆಚರಣೆ ಮತ್ತು ಸಂಪ್ರದಾಯಗಳನ್ನು ಗೌರವಿಸುವುದು ಮತ್ತು ಇತರರಿಗೆ ತೊಂದರೆಯಾಗದಂತೆ ಬಾಳುವುದು. ಇನ್ನೊಂದು ಸ್ವಲ್ಪ ಜನ ಸೆಕ್ಯುಲರ್ ಎಂದರೆ ಈಗ ಧರ್ಮದ ಮೂಲಕ ಬಲವಂತವಾಗಿ ಹೇರಿರುವ ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸಿ, ಏಕರೂಪವಾಗಿ ಹೊಸತೊಂದು ಜೀವನ ಶೈಲಿಯನ್ನು ರೂಪಿಸಿಕೊಳ್ಳುವುದು. ಹೀಗಾಗಿ ಸೆಕ್ಯುಲರ್ ಎಂಬ ಪದ ಕೇಳಿದಾಗ ಧಾರ್ಮಿಕ ಮೂಲಭೂತವಾದಿಗಳಿಗೆ ಚಳಿ ಹುಟ್ಟಿಸುತ್ತದೆ. ಎಲ್ಲ ಧರ್ಮದ ಮೂಲಭೂತವಾದಿಗಳು ಧರ್ಮರಕ್ಷಣೆಯ ಸೋಗಿನಲ್ಲಿ ಅಲ್ಲಿನ ದುರ್ಬಲ ಜನರನ್ನು ಶೋಷಣೆಗೆ ಗುರಿಯಾಗಿಸುವ ಮನಸ್ಥಿತಿ ಹೊಂದಿದ್ದಾರೆ. ಯಾವಾಗ ಜನರು ನಮ್ಮಂತೆಯೇ ಇತರರು ಕೂಡ ಬೇರೆ ಧರ್ಮ, ಆಚರಣೆಗಳನ್ನು ಅನುಸರಿಸುತ್ತಾ ಬಂದಿರಬಹುದು ಆದರೆ ಅವರು ಕೂಡ ನಮ್ಮಂತೆಯೇ ಮನುಷ್ಯರು ಎಂಬ ಸಹಜ ತಿಳುವಳಿಕೆ ಮೂಡುತ್ತದೋ ಅಂದಿನಿಂದ ಅವರ ಚಿಂತನೆಗಳ ಲಹರಿ ಬದಲಾಗುತ್ತದೆ. 

ಧರ್ಮದ ಹೆಸರಿನಲ್ಲಿ ಯಾರು ಕೂಡ ಶೋಷಣೆಗೆ ಮುಂದಾಗಬಾರದು, ಅದು ಯಾವುದೇ ಧರ್ಮ ಆಗಿರಲಿ. ಹೀಗಾಗಿ ಪ್ರತಿಯೊಂದು ಧರ್ಮದಲ್ಲಿನ ಕೆಟ್ಟ ಆಚರಣೆಗಳನ್ನು ಸರಿಪಡಿಸಿಕೊಂಡು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಶಾಂತಿಯುತ ಜೀವನವನ್ನು ಸಾಗಿಸುವ ಅವಕಾಶ ಮಾಡಿಕೊಡಬೇಕಾಗಿದೆ. ಧರ್ಮದ ಹೆಸರಿನಲ್ಲಿ ದ್ವೇಷ ಹಬ್ಬಿಸುವ ಜನರ ಮೇಲೆ ಕಠಿಣ ಕಾನೂನುಗಳನ್ನು ಜಾರಿಗೆ ತಂದು ಮಟ್ಟ ಹಾಕಬೇಕಾದ ರಾಜಕಾರಣಿಗಳು ದಿನ ಕಳೆದಂತೆ ಅಂತಹ ಸಮಾಜಘಾತುಕರನ್ನೇ ಉಪಯೋಗಿಸಿಕೊಂಡು ಮತಯಾಚನೆ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ಬೆಳೆಯಲು ಬಿಟ್ಟರೆ ದಿನ ಕಳೆದಂತೆ ಕೋಮುವಾದ ಹೆಚ್ಚಾಗಿ, ಸಮಾಜದಲ್ಲಿ ಶಾಂತಿಯೇ ಇಲ್ಲವಾಗುತ್ತದೆ. "ದಯೆ ಧರ್ಮದ ಮೂಲ" ಎಂಬುದನ್ನು ಮರೆತಂತಿದೆ.  

Photo by Studio Art Smile from Pexels

ಕುವೆಂಪು ಹೇಳಿದಂತೆ "ಪ್ರತಿಯೊಬ್ಬ ಮನುಷ್ಯ ಹುಟ್ಟುತ್ತಲೇ ವಿಶ್ವಮಾನವ" ಎನ್ನುವ ಮಾತು ನೆನಪಿಗೆ ಬರುತ್ತಿದೆ. ಮಗುವಿನ ಹುಟ್ಟು ಅದರ ಕೈಯಲ್ಲಿ ಇರುವುದಿಲ್ಲ, ಹುಟ್ಟಿದ ನಂತರ ತಾನು ಬೆಳೆದ ವಾತಾವರಣದ ಮೇಲೆ ಹಲವಾರು ಪೂರ್ವಾಗ್ರಹ ಪೀಡಿತ ಚಿಂತನೆಗಳು ಮಕ್ಕಳ ಮನಸ್ಸಿನಲ್ಲಿ ಹೊಕ್ಕಿರುತ್ತವೆ. ಯಾವಾಗ ಆ ವಾತಾವರಣದಿಂದ ಹೊರಬಂದು ಇತರರೊಂದಿಗೆ ಕೂಡಿ ಬೆಳೆದು ಜೀವನ ಸಾಗಿಸಲು ಶುರು ಮಾಡುವರೊ ಆ ಸಮಯದಲ್ಲಿ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತ ಹೋಗುತ್ತದೆ. ಹೀಗಾಗಿ ಸಮಾಜ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಂತದಲ್ಲಿ ಮಕ್ಕಳ ಮೇಲೆ ಬಹಳ ಪ್ರಭಾವ ಬೀರುವ ಅಂಶಗಳೆಂದರೆ ಧಾರ್ಮಿಕ ಮೂಲಭೂತವಾದಿಗಳ ವಿಚಾರಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ತೆರೆದುಕೊಳ್ಳುವುದು. ಇದು ನಮ್ಮಲ್ಲಿಯೇ ಹಾಸು ಹೊಕ್ಕಾಗಿರುವ ಮೂಢನಂಬಿಕೆಗಳಿರಬಹುದು ಅಥವಾ ಗೊಡ್ಡು ಸಂಪ್ರದಾಯಗಳಿರಬಹುದು. ಇವುಗಳನ್ನು ನಮ್ಮ ಕುಟುಂಬದ ಎಲ್ಲರೂ ಆಚರಣೆಗೆ ತಂದಿರುವಾಗ, ಅದರ ವಿರುದ್ಧವಾಗಿ ಭಾವನೆಗಳು ಮೂಡುವುದು ಕಷ್ಟವೆಂದೆ ಹೇಳಬದುದು. 

ಮಕ್ಕಳ ನಡೆ ನುಡಿ ಪೋಷಕರ ಮತ್ತು ಗೆಳೆಯರ ನಡೆ ನುಡಿಗಳಿಂದ ಪ್ರೇರಿತವಾಗಿರುತ್ತದೆ. ಸ್ವಾತಂತ್ರ್ಯ, ಸಮಾನತೆ ಇಂತಹ ತತ್ವಗಳನ್ನು ಪಠ್ಯ ಪುಸ್ತಕಗಳಲ್ಲಿ ಓದಿದ್ದರು ಸಹ ವಿಷಯವನ್ನು ಸಂಪೂರ್ಣವಾಗಿ ಗ್ರಹಿಸುವ ಸಾಮರ್ಥ್ಯ ಅವರಲ್ಲಿ ಇರುವುದಿಲ್ಲ. ಸಾಮರ್ಥ್ಯ ಇದ್ದರೂ ಸಹ ಪೋಷಕರನ್ನು ಎದುರು ಹಾಕಿಕೊಳ್ಳುವ ಸಾಹಸಕ್ಕೆ ಮಕ್ಕಳು ಹೋಗುವುದಿಲ್ಲ. ಮಕ್ಕಳ ಹೆಚ್ಚಿನ ಭಾವನೆಗಳು ಇತರರ ಮೇಲಿನ ಭಯದಿಂದಲೇ ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳಿಗೆ ಯಾವುದು ಯಾಕೆ ಸರಿ, ಯಾಕೆ ತಪ್ಪು ಎಂದು ಅರ್ಥ ಮಾಡಿಸುವುದು ಬಹಳ ಕಷ್ಟ. ಈ ಹಂತದಲ್ಲಿ ನಾವು ಮಕ್ಕಳ ಎಳೆಯ ಮನಸ್ಸಿಗೆ ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು, ಗೊಡ್ಡು ಸಂಪ್ರದಾಯಗಳನ್ನು, ಮೂಢ ನಂಬಿಕೆಗಳನ್ನು ತುಂಬಿದರೆ ಅವರು ಅವುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನೇ ಬೆಳೆಸಿಕೊಂಡಿರುವುದಿಲ್ಲ. ಇದು ದೀರ್ಘ ಕಾಲದಲ್ಲಿ ಸಮಾಜದ ಬೆಳವಣಿಗೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. 

ಇದರಿಂದಾಗಿಯೇ ಪದವಿ ಪಡೆದವರು ಬೆಕ್ಕು ಅಡ್ಡ ಬಂದರೆ ಸ್ವಲ್ಪ ಸಮಯ ನಿಂತು ಹೋಗುವುದು, ಶುಕ್ರವಾರದ ದಿನ ಬಹಳ ಆತುರವಿದ್ದರು ಹಣ ನೀಡದೆ ಇರುವುದು, ಹುಟ್ಟಿದ ದಿನ ಹೇರ್ಕಟ್ ಮಾಡಿಸದೆ ಇರುವುದು, ಕಂಡ ಕಂಡವರ ಕಾಲಿಗೆ ಬೀಳುವುದು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬಹಳ ದೊಡ್ಡದಾಗುತ್ತದೆ. ಇವತ್ತು ವಿಜ್ಞಾನದ ಯುಗದಲ್ಲಿ ನಾವಿದ್ದೇವೆ. ದಿನದ ಇಪ್ಪತ್ನಾಲ್ಕು ಗಂಟೆ ನಮ್ಮ ಜೀವನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಕೊಡುಗೆ ನೀಡುತ್ತಿದೆ. ನಮಗೆ ಬೇಕಾದ ವಿಷಯಗಳ ಬಗ್ಗೆ ತಿಳಿದುಕೊಂಡು ಅರಿವನ್ನು ಹೆಚ್ಚಿಸಿಕೊಳ್ಳುವ ದೊಡ್ಡ ಅವಕಾಶ ಈ ಕಾಲದಲ್ಲಿ ನಮಗೆ ವರವಾಗಿ ದೊರೆತಿದೆ. ಇಷ್ಟೊಂದು ಮುಂದುವರೆದ ಕಾಲದಲ್ಲಿಯೂ ಸಹ ಯಾವುದೋ ಕಾಲದ ಅರ್ಥವಿಲ್ಲದ ಆಚರಣೆಗಳನ್ನು ನಾವು ಮುಂದುವರೆಸುತ್ತಾ ಹೋದರೆ ಮುಂದಿನ ಜನಾಂಗ ನಮ್ಮನ್ನು ನೋಡಿ ನಗಬಹುದು. 

ಕೇವಲ ಯಾವುದೇ ಧರ್ಮವನ್ನು ನಂಬುವುದರಿಂದ ಉತ್ತಮ ಜೀವನ ದೊರೆಯುವುದಿಲ್ಲ. ಅಪ್ಪ ಮಾಡಿದ ಆಸ್ತಿ ಅಥವಾ ಪರಿಚಿತರ ಸಹಾಯ ಇಲ್ಲವೆಂದರೆ ತನ್ನ ಕಠಿಣ ಶ್ರಮದ ಮೂಲಕವೇ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದು. ಈ ಹಂತದಲ್ಲಿ ಮಾನಸಿಕ ನೆಮ್ಮದಿಗಾಗಿ ಹಲವು ದಾರಿಗಳನ್ನು ಜನರು ಕಂಡುಕೊಳ್ಳುತ್ತಾರೆ. ನಮ್ಮ ಹತ್ತಿರದವರ ಜೀವನ ಶೈಲಿ ನಮ್ಮ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಅವರು ಹೇಗೆ ಬದುಕುತ್ತಾರೋ ಅವರಂತೆಯೇ ಬದುಕುವ ಕಟ್ಟುನಿಟ್ಟಿಗೆ ನಮಗೆ ಅರಿವಿಲ್ಲದಂತೆ ಒಗ್ಗಿ ಹೋಗುತ್ತೇವೆ. ಇದು ಹಳ್ಳಿಯ ಜನರಿಗೆ ಹೇಳಿ ಮಾಡಿಸಿದ ಮಾತು. ಎಲ್ಲರೂ ಏನೋ ಮಾಡುತ್ತಿದ್ದರೆ, ನಾವು ಸಹ ಅದನ್ನೇ ಮಾಡಬೇಕೆನ್ನುವ ಮನಸ್ಥಿತಿ. ಇವೆಲ್ಲವೂ ಎಲ್ಲರೊಳಗೆ ಒಂದಾಗುವ ಹಂಬಲವೋ ಅಥವಾ ಅಂಧಾನುಕರಣೆಯ ಉಡುಗೊರೆಯೊ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. 
     
ಪ್ರತಿಯೊಬ್ಬರಿಗೂ ತಮ್ಮದೇ ಆದ ಜೀವನ ಧರ್ಮವನ್ನು ರೂಪಿಸಿಕೊಳ್ಳುವ ಅವಶ್ಯಕತೆ ಇದೆ. ಈ ಅವಕಾಶವನ್ನು ದೊಡ್ಡ ದೊಡ್ಡ ನಗರಗಳು ಹಲವಾರು ಜನರಿಗೆ ನೀಡಿವೆ. ಇತರರಿಗೆ ನೋವು ಆಗದಂತೆ ಬದುಕಿ ಬಾಳುವ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಂಪಾದನೆಗೆ ಒತ್ತು ನೀಡಿ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ನಮಗೆ ಇದೆ. ಮನಸ್ಸಿಗೆ ಎಲ್ಲರಂತೆಯೇ ನಾನು ಕೂಡ ಹೇಗೋ ಜೀವನ ತಳ್ಳುತ್ತೇನೆ ಎನ್ನುವ ಭ್ರಮೆ ಬಿಟ್ಟು ಇರುವ ಒಂದು ಜೀವನದಲ್ಲಿ ಏನಾದರೂ ಸಾಧಿಸಿ, ಇತರರಿಗೂ ಪ್ರೇರಣೆಯಾಗಿ ತೋರಿಸುತ್ತೇನೆ ಎನ್ನುವ ಛಲ ಮೂಡಬೇಕು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ಸರ್ಕಾರಗಳು ಇರುವುದು ಪ್ರಜೆಗಳ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಕವಾಗುವ ಯೋಜನೆಗಳನ್ನು ಜಾರಿಗೆ ತರಲು. ಯಾವಾಗ ನಮ್ಮ ದಿನನಿತ್ಯ ನಾವು ಎದುರಿಸುವ ಸಮಸ್ಯೆಗಳ ಪರಿಹಾರ ಚುನಾವಣೆಯ ಗುರಿಯಾಗದೆ ಅಧಿಕಾರಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಹೊಡೆಯುವ ರಾಜಕಾರಣಿಗಳು ಜನಬೆಂಬಲ ಪಡೆಯುವರೋ ಆಗ ಸಮಾಜ ತಪ್ಪು ದಾರಿ ಹಿಡಿದಿದೆ ಎಂದೇ ಅರ್ಥ.    

ಬಡತನ, ನಿರುದ್ಯೋಗ, ವೈದ್ಯಕೀಯ ಸೌಲಭ್ಯಗಳು, ಉಚಿತ ಮತ್ತು ಗುಣಮಟ್ಟದ ಶಿಕ್ಷಣ, ಜೀವನ ಕಟ್ಟಿಕೊಳ್ಳಲು ಮಾರುಕಟ್ಟೆಯ ಮೇಲಿನ ನಿಯಂತ್ರಣ ಕೇವಲ ಶ್ರೀಮಂತರ ಪಾಲಾಗದಂತೆ ನೋಡಿಕೊಳ್ಳುವುದು, ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಸರ್ಕಾರಗಳ ಜವಾಬ್ದಾರಿ. ಇವುಗಳನ್ನು ಉಚಿತವಾಗಿ ಯಾರು ಸಹ ಅಪೇಕ್ಷೆ ಮಾಡುತ್ತಿಲ್ಲ, ಪ್ರತಿಯೊಬ್ಬ ಪ್ರಜೆ ಪಾವತಿಸುವ ತೆರಿಗೆಯಿಂದ ಸಂಬಳ ಪಡೆಯುವ ನೌಕರರು ಅವರು. ಪ್ರಜೆ ದಿನನಿತ್ಯ ತೆರಿಗೆ ಪಾವತಿಸುವಾಗ ಯಾವುದೇ ಪಕ್ಷದ ಸರ್ಕಾರವನ್ನು ಪ್ರಶ್ನಿಸುವ ಮತ್ತು ತನಗೆ ಅನ್ಯಾಯವಾದಾಗ ಧ್ವನಿಯೆತ್ತುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. "ಪ್ರಜೆಗಳು ಮತ್ತು ಮಾಧ್ಯಮಗಳು ವಿರೋಧ ಪಕ್ಷಗಳ ಪರವಾಗಿ ನಿಂತು ಕೆಲಸ ಮಾಡಬೇಕು" ಎಂದು ಪೂರ್ಣಚಂದ್ರ ತೇಜಸ್ವಿಯವರು ಒಂದೆಡೆ ಹೇಳಿದ್ದಾರೆ. ಇದು ಖಂಡಿತವಾಗಿಯೂ ಆಗಲೇಬೇಕು. ಧರ್ಮದ ಹೆಸರಿನಲ್ಲಿ ಇತರರ ಮೇಲೆ ದ್ವೇಷ ಹರಡುವ ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಜನರು ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಮುಖವಾಡಗಳನ್ನು ಹಾಕಿಕೊಂಡು ಇದ್ದಾರೆ. ಅವರ ನಿಜವಾದ ಗುರಿ, ಒಂದು ವರ್ಗವನ್ನು ಶೋಷಣೆಗೆ ಒಳಪಡಿಸಿ, ಅಧಿಕಾರ ಪಡೆದು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದೇ ಹೊರತು ಅವರಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.   

ಎಲ್ಲ ಧರ್ಮಗಳಲ್ಲಿಯೂ ಕೆಟ್ಟವರು ಇದ್ದಾರೆ, ಅವರನ್ನು ನಿಯಂತ್ರಿಸಲು ಮತ್ತು ಶಿಕ್ಷಿಸಲು ಪೊಲೀಸು, ಕಾನೂನು ವ್ಯವಸ್ಥೆಯನ್ನು ಬಲಪಡಿಸಬೇಕು. ಅದನ್ನು ಬಿಟ್ಟು ಆ ವಿಷಯವನ್ನೇ ಉಪಯೋಗಿಸಿಕೊಂಡು ಮತಯಾಚನೆ ಮಾಡುವುದು ಸಮಾಜದ ಸೌಂದರ್ಯಕ್ಕೆ ಮಾರಕ. ಅದು ಜನರಲ್ಲಿ ದ್ವೇಷವನ್ನು ಬಿತ್ತುವ ಕೆಲಸವಾಗುತ್ತದೆ. ಎಲ್ಲರನ್ನೂ ಪ್ರೀತಿ ಗೌರವದಿಂದ ನಡೆಸಿಕೊಂಡರೆ ಇತರರಿಗೂ ನಂಬಿಕೆ ಮೂಡಿ ಸಮಾಜ ಬದಲಾವಣೆಯ ದಾರಿಯಲ್ಲಿ ಸಾಗುತ್ತದೆ. ಇತರರಿಗೆ ತೊಂದರೆಯಾಗದಂತೆ ಶಾಂತಿಯುತ ಜೀವನವನ್ನು ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಭಾರತದ ಸಂವಿಧಾನ ನೀಡಿದೆ. ಧರ್ಮ, ಜಾತಿಗಳ ನಡುವಿನ ಕಿತ್ತಾಟ ಮತ್ತು ಅಸಮಾನತೆ ತೊಲಗಿ ಉತ್ತಮ ವಿಚಾರಗಳು ಆಚರಣೆಗೆ ಬಂದು ಎಲ್ಲರೂ ಸುಖ ಸಂತೋಷದಿಂದ ಬದುಕಿದರೆ ನಮ್ಮ ದೇಶ ಬಹಳ ಮುಂದೆ ಸಾಗುತ್ತದೆ.  

"ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ"
-- ಕುವೆಂಪು. 

ಕಾಮೆಂಟ್‌ಗಳು

- Follow us on

- Google Search