ಬೈಕಲ್ಲಿ ಒಂದೆರಡು ರೌಂಡ್ಸು

ಈ ಗಾಡಿ ಓಡಿಸುವ ಜನರ ಮನಸ್ಸಿನಲ್ಲಿ ಜಗತ್ತಿನಲ್ಲಿ ನನ್ನನ್ನು ಬಿಟ್ಟರೆ ಸರಿಯಾಗಿ ಗಾಡಿ ಓಡಿಸುವವರು ಇಲ್ಲ ಎಂಬ ನಂಬಿಕೆಯೊಂದು ಇರುತ್ತದೆ. ಚಿಕ್ಕವನಿದ್ದಾಗ ನಾನು ಕೂತಿದ್ದ ಗಾಡಿಯೊಂದು ರಾಂಗ್ ಸೈಡಿನಲ್ಲಿಯೇ ಹೋಗಿ ಮಿನಿ ಬಸ್ಸೊಂದಕ್ಕೆ ಕುಟ್ಟಿದ ನಂತರ, ನಮ್ಮ ಗಾಡಿಯ ಚಾಲಕ ಕೆಳಗಿಳಿದು ಬಸ್ಸಿನ ಡ್ರೈವರ್ಗೆ "ಇಷ್ಟು ದೊಡ್ಡ ರೋಡ್ ಇದ್ರು ರಾಂಗ್ ಸೈಡಲ್ಲಿ ಯಾಕೆ ಬರ್ತಿಯೋ ಬೇವರ್ಸಿ" ಎಂದು ಕೇಳಿದ್ದರು!

ಮಲೆನಾಡಿನ ರಸ್ತೆಗಳೇ ಹಾಗೆ, ಮೊದಲೇ ಅಗಲ ಕಡಿಮೆ. ಅದರಲ್ಲಿ ರಸ್ತೆಯ ಗುಂಡಿಗಳನ್ನು ತಪ್ಪಿಸುವ ಸಲುವಾಗಿ ತಮ್ಮದೇ ನಿಯಮಗಳನ್ನು ಚಾಲಕರು ಪಾಲಿಸುತ್ತಾರೆ. ಇನ್ನೂ ಹಲವಾರು ಮಲೆನಾಡಿನ ಗಾಡಿ ಚಾಲಕರಿಗೆ ಎದುರಿನಿಂದ ಇತರ ವಾಹನಗಳು ಬರಬಹುದು ಎಂಬ ಯೋಚನೆಯೇ ಇದ್ದಂತೆ ಕಾಣುವುದಿಲ್ಲ. ಊರಿನ ಕಂತೆ ಪುರಾಣಗಳನ್ನೆಲ್ಲ ಮಾತಾಡಿಕೊಂಡು, ಕೆಲವರು ಅಷ್ಟು ದೊಡ್ಡ ಆಸನವಿದ್ದರೂ, ಬಾಗಿಲಿಲ್ಲದ ವಾಹನಗಳಲ್ಲಿ ಸ್ವಲ್ಪ ಹೊರಗೆ ವಾಲಿಕೊಂಡು ಕೂರುವ ಅಭ್ಯಾಸದೊಂದಿಗೆ ಗಾಡಿ ಚಲಾಯಿಸುತ್ತಾರೆ. ಇಷ್ಟೆಲ್ಲಾ ಜಗತ್ತು ಮರೆತು ಗಾಡಿ ಓಡಿಸಿದರು ಸಹ, ಮಲೆನಾಡಿನ ಹೆಚ್ಚಿನ ಜನರು ಕಳಪೆ ರಸ್ತೆಯ ಕಾರಣಕ್ಕೋ ಏನೋ ಹೆಚ್ಚು ವೇಗವಾಗಿ ಓಡಿಸುವುದು ಕಡಿಮೆ. ಆದರೆ ಹೊಂಡ ಗುಂಡಿಗಳಿಲ್ಲದ ರಸ್ತೆಗಳಲ್ಲಿ ಅವರ ವಾಹನ ಚಲಾಯಿಸುವ ರೀತಿಯೇ ಬೇರೆ. 

ನಾನು ಬೈಕ್ ಓಡಿಸುವುದು ಕಲಿತು ಮೂರ್ನಾಲ್ಕು ವರ್ಷಗಳಾಗಿವೆ. ಜಾಸ್ತಿ ದೂರದ ಯಾವ ಊರಿಗೂ ಬೈಕಲ್ಲಿ ಹೋಗಿಲ್ಲ. ನಾನು ಹೆಚ್ಚು ಓಡಿಸಿರುವ ಬೈಕೆಂದರೆ ಹೋಂಡಾ ಶೈನ್. ಆ ಬೈಕಿನಲ್ಲಿ ಬಹಳ ಇಷ್ಟವೆಂದರೆ ಅದರ ಸದ್ದು. ಕೇಳೋಕೆ ಏನೋ ಒಂತರ ಖುಷಿ ಆಗುತ್ತೆ ನನಗೆ. ಬಹಳಷ್ಟು ತಿಂಗಳುಗಳ ನಂತರ ಬೈಕಿನ ಮೇಲೆ ಕೂತಾಗ ಫಸ್ಟ್ ಗೇರಿಗೆ ಹಾಕಿ, ಕ್ಲಚ್ ಬಿಡುವಾಗ ಬೈಕ್ ಆಫ್ ಆದಾಗಲಂತೂ ಮೊದಲ ಬಾರಿ ಬೈಕ್ ಓಡಿಸಲು ಕಲಿಯುವಾಗ ನಡೆದ ಘಟನೆಗಳೆಲ್ಲ ನೆನಪಿಗೆ ಬರುತ್ತವೆ. 

ಇದೊಂದು ಘಟನೆ ಹೇಳಲೇ ಬೇಕು. ರಜೆಗೆ ದೊಡ್ಡಮ್ಮನ ಮನೆಗೆ ಹೋಗಿದ್ದೆ. ಸೈಕಲ್ ಹೊಡೆಯುವುದು ಬರುತ್ತಿತ್ತೇ ಹೊರತು ಬೈಕ್ ಓಡಿಸಲು ಪ್ರಯತ್ನ ಕೂಡ ಮಾಡಿರಲಿಲ್ಲ. ಅಣ್ಣ ಹೇಳಿದ, ಬೈಕ್ ಓಡ್ಸು ತಗೊ ಅಂತ. ನನಗೆ ಬರಲ್ಲ ಅಂದೆ. ಹಾಗೇನಿಲ್ಲ ಬಹಳ ಆರಾಮಾಗಿ ಕಲಿಯಬಹುದು, ಸ್ಟಾರ್ಟ್ ಮಾಡಿ ಗೇರಿಗೆ ಹಾಕಿ ಆಕ್ಸಿಲರೇಟರ್ ಕೊಟ್ಟು ಕ್ಲಚ್ ಬಿಟ್ರೆ ಆಯ್ತು ಎಂದು ಹೇಳಿದನು ಅಣ್ಣ. ನಾನು ಹಿಂದೆ ಕೂತ್ಕೋತೀನಿ ಟ್ರೈ ಮಾಡು ಓಡ್ಸಕ್ಕೆ ಒಂದ್ಸಲ ಅಂದ. 

ಇಷ್ಟೇನಾ ಅನ್ಕೊಂಡು ಕೂತೆ, ಹೇಳಿದಾಗೆ ಮಾಡಿ ಆಕ್ಸಿಲರೇಟರ್ ಕೊಟ್ಟು ಕ್ಲಚ್ ಬಿಟ್ಟಿದ್ದೇ ತಡ, ಕುದುರೆಯಂತೆ ಮುಂದಿನ ಚಕ್ರ ಎದ್ದು ಬೈಕು ಹೋಗಿದ್ದೊಂದೆ ಗೊತ್ತು. ಕೆಲವೇ ಸೆಕೆಂಡುಗಳಲ್ಲಿ ಮನೆಯ ಗೇಟು ವೇಗವಾಗಿ ಹತ್ತಿರ ಹತ್ತಿರ ಬರುತ್ತಿದ್ದ ದೃಶ್ಯ ಕಾಣುತ್ತಿತ್ತು. ಅಣ್ಣ ಹಿಂದೆ ಕೂತೋನು ಕ್ಲಚ್ ಹಿಡಿದು ಬ್ರೇಕ್ ಹಾಕು ಅನ್ನುವಷ್ಟರಲ್ಲಿ ಅಂಗಳದಲ್ಲಿ ಇದ್ದ ಉರುಳುಕಲ್ಲನ್ನು ದಾಟಿ ಗೇಟಿಗೆ ಬಹಳ ಹತ್ತಿರ ಬಂದಾಗಿತ್ತು. ಏನೋ ಪುಣ್ಯಕ್ಕೆ ಕ್ಲಚ್ ಹಿಡಿದು ಬ್ರೇಕ್ ಹಾಕಿದ್ದರ ಫಲವಾಗಿ ಬೈಕು ನಿಂತಿತ್ತು. ಬೈಕಲ್ಲಿ ಕೂತಿದ್ದ ನಾವಿಬ್ಬರು ಯಾವುದೇ ಗಾಯಗಳಿಲ್ಲದೆ ಬಚಾವಾಗಿದ್ದೆವು. ಬೈಕ್ ನಿಂತ ನಂತರವೇ ನನ್ನ ಕಿವಿಗೆ ನಮ್ಮ ದೊಡ್ಡಮ್ಮ ಇವೆಲ್ಲಾ ದೃಶ್ಯಗಳನ್ನು ಕಂಡು ಜೋರಾಗಿ ಹೋ ಎಂದು ಕೂಗಿತ್ತಿದ್ದ ಧ್ವನಿ ಕಿವಿಗೆ ಬಿದ್ದಿದ್ದು. ನಮ್ಮ ಅಣ್ಣ ಅಂತು ಒಂದೆರಡು ಕ್ಷಣ ಕಂಗಾಲಾಗಿ ಹೋಗಿದ್ದ, ಅವನ ಬಾಯಲ್ಲಿ ಮಾತುಗಳೇ ಹೊರಡುತ್ತಿರಲಿಲ್ಲ. 

ಬೈಕಿನಲ್ಲಿ ಹಿಂದೆ ಕೂತು ನನಗೆ ಸಾಕಷ್ಟು ಅನುಭವ ಇತ್ತಾದರೂ ನಿಜ ಜೀವನದಲ್ಲಿ ಬೈಕಿನ ಮುಂದಿನ ಚಕ್ರ ಎದ್ದು ಹಾರುವಂತೆ ಕ್ಲಚ್ ಬಿಡಬಹುದು ಎಂಬ ಯಾವ ಕಲ್ಪನೆಯು ಇರಲಿಲ್ಲ. ಇಷ್ಟೆಲ್ಲಾ ಆದರು ಸಹ ಬೈಕಿನ ಬ್ಯಾಲೆನ್ಸ್ ಅಥವಾ ಸಮತೋಲನ ಕಂಡು ಆಶ್ಚರ್ಯವಾಗಿತ್ತು ನನಗೆ. ಅದಾದ ನಂತರ ಬೈಕ್ ಬಿಡುವುದನ್ನು ಕಲಿತ ಮೇಲೆ ಅಂತಹ ಇನ್ನೊಂದು ಘಟನೆಯೆಂದರೆ ಅಪ್ಪನೊಂದಿಗೆ ಬೈಕಲ್ಲಿ ಹೋಗುತ್ತಿದ್ದಾಗ ನಡೆದಿದ್ದು. ಹೀಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ಬದಿಯಲ್ಲಿ ದನದ ಹಿಂಡು ಮತ್ತು ಇನ್ನೊಂದು ಬದಿಯಲ್ಲಿ ಕೆಂಪು ಬಣ್ಣದ ಸರ್ಕಾರೀ ಬಸ್ಸು ಬಂದಾಗ ಬದಿಯಲ್ಲಿ ನಿಲ್ಲಿಸಿ ಬೈಕ್ ಆಫ್ ಮಾಡಿಬಿಟ್ಟಿದ್ದೆ. ಅಲ್ಲಿಂದ ಮುಂದೆ ಅಪ್ಪ ಬೈಕ್ ಓಡಿಸಿದ್ದರು. ಇದಾದ ನಂತರ ಕಳೆದ ವಾರ ಮನೆಯ ಹತ್ತಿರ ಕೆಸರು ರಸ್ತೆಯಲ್ಲಿ ಸ್ಕಿಡ್ ಆಗಿ ಬೈಕಿನ ಕನ್ನಡಿ ಒಡೆದು ಹೋಗಿದೆ. ಜಾರುತ್ತೆಂಬ ವಿಚಾರ ಮೊದಲೇ ಗೊತ್ತಿದ್ದರಿಂದಲೋ ಏನೋ ನಿಧಾನಕ್ಕೆ ಹೋಗುತ್ತಿದ್ದಾಗ ಹೀಗಾಯ್ತು. ಬೈಕು ಜಾರುವುದು ಮಾತ್ರ ಕ್ಷಣಾರ್ಧದಲ್ಲಿ ನಡೆಯುವ ಘಟನೆ, ಮುಂದೆ ಸ್ವಲ್ಪ ಉತ್ತಮ ಹಿಡಿತ ಸಿಗುವ ರಸ್ತೆ ಚಕ್ರಕ್ಕೆ ಸಿಕ್ಕಿದರೆ ಮಾತ್ರ ಜಾರಿದಾಗ ಹೇಗೋ ಬ್ಯಾಲೆನ್ಸ್ ಮಾಡಬಹುದು, ಇಲ್ಲದೆ ಹೋದರೆ ತಿರುವಿನಲ್ಲಿ  ಸರಕ್ಕನೆ ಜಾರಿ ಒಂದು ಬದಿಗೆ ವಾಲಿ ಬಿಡುತ್ತವೆ. ಇದೆ ಕಾರಣಕ್ಕೆ ಜಾರುವ ರಸ್ತೆಗಳಲ್ಲಿ ಬೈಕಿನ ಸಹವಾಸ ಕಷ್ಟ.

ಮಲೆನಾಡಿನ ಊರುಗಳಿಗೆ ದೊಡ್ಡ ವಾಹನ ಅಥವಾ ಕಾರಿನಲ್ಲಿ ಪ್ರವಾಸ ಬರುವವರಿಗೆ ಒಂದು ವಿನಂತಿ, ಅಗಲವಿಲ್ಲದ ರಸ್ತೆಗಳಲ್ಲಿ ವಾಹನಗಳನ್ನು ಆದಷ್ಟು ನಿಧಾನವಾಗಿ ಚಲಾಯಿಸುವಂತೆ ಚಾಲಕರಿಗೆ ಹೇಳಿ. ಇತ್ತೀಚೆಗೆ ಪ್ರವಾಸಿಗರ ವಾಹನಗಳೊಂದಿಗೆ ಅಪಘಾತಗಳು ಹೆಚ್ಚಾಗಿ ಪ್ರಾಣ ಕಳೆದುಕೊಂಡ ಬೈಕಿನ ಚಾಲಕರು ಸಹ ಸಾಕಷ್ಟು ಜನರಿದ್ದಾರೆ. ಅಪಘಾತವಾದಾಗ ವ್ಯಕ್ತಿಯನ್ನು ಹಾಗೆಯೇ ಬಿಟ್ಟು ವಾಹನ ಓಡಿಸಿಕೊಂಡು ಹೋದ ಘಟನೆಯೊಂದು ಕೆಲವು ತಿಂಗಳುಗಳ ಹಿಂದೆ ನಡೆದಿದೆ. ಕನಿಷ್ಠ ಪಕ್ಷ ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸುವ ಮಾನವೀಯತೆಯು ಸಹ ಇಲ್ಲವಾದರೆ ಏನು ಹೇಳಲು ಸಾಧ್ಯ? ಯಾರೋ ಸಹಾಯ ಮಾಡುತ್ತಾರೆ ಇರಲಿ ಎಂದು ಸುಮ್ಮನಾಗುವುದಕ್ಕಿಂತ ಸಮಯಕ್ಕೆ ಸರಿಯಾಗಿ ನಮ್ಮಿಂದಾಗುವ ಸಹಾಯದ ಕೆಲಸ ಮಾಡುವ ಅಭ್ಯಾಸ ಒಳ್ಳೆಯದು. ಇದಕ್ಕೆ ಕಾನೂನು ಕೂಡ ನಮ್ಮ ನೆರವಿಗಿದೆ.  

ಕಾಮೆಂಟ್‌ಗಳು

- Follow us on

- Google Search