ಮಾನಸಿಕ ನೆಮ್ಮದಿ

ಅದೆಷ್ಟು ಜನ ನಮ್ಮ ಜೀವನದ ಭಾಗವಾಗಿದ್ದಾರೆ. ಎಲ್ಲಾ ತರಹದ ಭಿನ್ನ ಅಭಿಪ್ರಾಯ ಹಾಗು ಆಲೋಚನೆ ಹೊಂದಿರುವ ಎಲ್ಲರೂ ನಮ್ಮ ಜೀವನದ ಭಾಗವಾಗಿದ್ದಾರೆ. ಸಂಪೂರ್ಣವಾಗಿ ಅವರಿಂದ ನಮ್ಮ ಜೀವನವನ್ನು ಬೇರ್ಪಡಿಸಲು ಸಾಧ್ಯವಿಲ್ಲ, ಬೇರ್ಪಡಿಸಿಕೊಂಡರು ಸಹ ಅದು ಕೇವಲ ನಮ್ಮ ಸಮಾಧಾನಕ್ಕಾಗಿ ಅಷ್ಟೇ. ಎಲ್ಲರನ್ನು ಬದಲಾಯಿಸಲು ಸಹ ಸಾಧ್ಯವಿಲ್ಲ. ಎಲ್ಲರಿಗೂ ಎಲ್ಲವನ್ನು ಅರ್ಥ ಮಾಡಿಸಲು ಸಾಧ್ಯವಿಲ್ಲ. ಹೆಚ್ಚಿನ ಜನರು ಗುಂಪಲ್ಲಿ ಗೋವಿಂದ ಆಗುವ ಜೀವನವನ್ನೇ ಹುಟ್ಟಿನಿಂದ ಅಭ್ಯಾಸ ಮಾಡಿಕೊಂಡಿದ್ದಾರೆ. ಸ್ವಂತ ಆಲೋಚನೆ, ಅಧ್ಯಯನ ಅಥವಾ ಜ್ಞಾನದ ಹಸಿವು ಇವರಿಗೆ ಇಲ್ಲ. ಮ್ಯೂಚುಯಲ್ ರೆಸ್ಪೆಕ್ಟ್ ಮತ್ತೆ ಬಕೆಟ್ ಹಿಡಿಯೋದಕ್ಕೆ ಬಹಳ ವ್ಯತ್ಯಾಸವಿದೆ. ಒಟ್ಟಿನಲ್ಲಿ ಇಂತವರಿಂದ ನಮ್ಮ ಮನಸ್ಸಿನ ನೆಮ್ಮದಿ ಹಾಳು ಅಷ್ಟೇ. 

ಇತ್ತೀಚಿನ ವರ್ಷಗಳಲ್ಲಿ ಒಂದು ವಿಷಯ ನನ್ನ ಗಮನಕ್ಕೆ ಬಂತು. ನಮ್ಮ ಜೊತೆಯಲ್ಲಿ ಇರುವವರು ನಮ್ಮ ಮೇಲೆ ಸಾಕಷ್ಟು ಊಹೆ ಮಾಡಿರುತ್ತಾರೆ. ಇದರಿಂದಾಗಿ ನಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ನಿರೀಕ್ಷೆಗಳ ಹೊರತಾಗಿ ನೀವೇನೇ ಮಾಡಲು ಹೊರಟರು ಅವರ ನಡವಳಿಕೆಯಲ್ಲಿ ಆಗುವ ಬದಲಾವಣೆಗಳನ್ನು ನೀವೇ ಕಾಣಬಹುದು. ಇದು ನಮಗೆ ತುಂಬಾ ಹತ್ತಿರ ಆಗಿರುವವರಿಗೆ ಅನ್ವಯಿಸುತ್ತದೆ. ಅವರ ನಿರೀಕ್ಷೆಗಳು ಸರಿಯೋ ತಪ್ಪೋ ಅದು ಬೇರೆ ಪ್ರಶ್ನೆ, ನಮ್ಮ ನಿರೀಕ್ಷೆಯಂತೆ ಬೇರೊಬ್ಬರು ತಮ್ಮ ಜೀವನ ನಿರ್ವಹಿಸಬೇಕೆಂಬುದು ಮೂರ್ಖತನವೇ ಸರಿ. ಅದೆಲ್ಲ ಏನೇ ಆಗಿರಲಿ, ನಮ್ಮ ಜೀವನದ ಬಗ್ಗೆ ನಮಗೆ ಸ್ಪಷ್ಟವಾದ ಗುರಿ ಅಥವಾ ನಂಬಿಕೆ ಇಲ್ಲದೆ ಹೋದರೆ ಇಂತಹವರನ್ನು ಎದುರಿಸುವುದರಲ್ಲಿಯೇ ಕಾಲ ಕಳೆದು ಹೋಗುತ್ತದೆ.


ನಮ್ಮ ಬದುಕಿನಲ್ಲಿ ಇನ್ನೊಂದಷ್ಟು ಜನರಿದ್ದಾರೆ. ನಮಗೆ ಅವರ ಬಗ್ಗೆ ಅರಿವೇ ಬಂದಿರುವುದಿಲ್ಲ. ಇಂಥವರೆಲ್ಲ ನನ್ನ ಸ್ನೇಹಿತರಾಗಲು ಸಾಧ್ಯವೇ ಇಲ್ಲ ಎಂಬುದಾಗಿ ಯಾವಾಗಲೋ ತೀರ್ಮಾನ ಮಾಡಿರುತ್ತೇವೆ. ಆದರೂ ನಮಗೆ ಸದಾ ಒಳ್ಳೆಯದನ್ನೇ ಬಯಸುವ ಸಹೃದಯ ಹೊಂದಿರುವ ಒಳ್ಳೆಯವರು. ನಮ್ಮ ನಿರ್ಧಾರಗಳನ್ನು ಪ್ರಶ್ನಿಸಿ, ತಮ್ಮ ನಿರೀಕ್ಷೆಗಳನ್ನು ವಿವರಿಸಿ ತಲೆ ಕೆಡಿಸುವವರು ಒಂದೆಡೆಯಾದರೆ ಆಗಿದ್ದು ಆಯಿತು ಮುಂದಿನ ದಿನಗಳಲ್ಲಿ ಶುಭವಾಗಲಿ ಎಂದು ಹಾರೈಸಿ ತಮ್ಮ ಕೈಲಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡುವವರು ಇನ್ನೊಂದೆಡೆ. 

ಜೀವನವೆಂದಾಗ ಈ ಎರಡು ಬಗೆಯ ಜನರು ನಮಗೆ ಬೇಕೇ ಬೇಕು. ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು ಬಿಡುವುದು ನಮ್ಮ ನಿರ್ಧಾರ. ಮಾನಸಿಕ ನೆಮ್ಮದಿ ನಮ್ಮ ಸಾಧನೆಯಲ್ಲಿ ಅಪಾರ ಪರಿಣಾಮ ಬೀರುತ್ತದೆ. ಜೀವನದ ಯಾವುದೇ ಹಂತದಲ್ಲಾದರೂ ಸರಿ, ಶಾಂತಿಯಿಂದ ಮನಸ್ಸನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಸಾಕಷ್ಟು ಅಭ್ಯಾಸದ ಅಗತ್ಯವಿದೆ. ಜಗತ್ತಿನ ಆಗು ಹೋಗುಗಳಿಗೆಲ್ಲ ತಲೆ ಕೆಡಿಸಿಕೊಂಡು ನಮ್ಮ ಸಮಯ ವ್ಯರ್ಥ ಮಾಡಿಕೊಂಡರೆ ನಮ್ಮ ಮನಸ್ಸಿನ ಮೇಲೆ ಅಪಾರ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಎಲ್ಲವು ಹಿತ ಮಿತದಲ್ಲಿರಲಿ. 

ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ. ತಾಳ್ಮೆಯೇ ನಮ್ಮ ಅಸ್ತ್ರವಾಗಿರಬೇಕೇ ಹೊರತು ಚಿಂತೆಯಲ್ಲ. ಯಾರನ್ನೋ ಮೆಚ್ಚಿಸಿ ಏನು ಸಹ ಆಗಬೇಕಿಲ್ಲ. ನಿಮ್ಮನ್ನು ಪ್ರೀತಿಸುವವರು ಎಂದಿಗೂ ನಿಮ್ಮೊಂದಿಗಿರುತ್ತಾರೆ, ಉಳಿದವರು ಕಾಲ ಕಳೆದಂತೆ ಕಳೆದುಹೋಗುತ್ತಾರೆ. 

ಕಾಮೆಂಟ್‌ಗಳು

- Follow us on

- Google Search