ದೇಶಭಕ್ತಿ

ದೇಶಭಕ್ತಿ, ರಾಷ್ಟ್ರಪ್ರೇಮ ಈ ಪದಗಳು ಆಗಾಗ ನಮ್ಮ ಗಮನಕ್ಕೆ ಬರುತ್ತವೆ. ನಿಜವಾದ ದೇಶಭಕ್ತರು ಯಾವಾಗಲೂ ದೇಶದ ಒಳಿತನ್ನೇ ಬಯಸುತ್ತಾರೆ. ದೇಶದ ಒಳಿತೆಂದರೆ ಏನು? ನನ್ನ ಪ್ರಕಾರ ದೇಶದ ಒಳಿತೆಂದರೆ ಅಲ್ಲಿ ಜೀವನ ನಡೆಸುವ ಪ್ರತಿಯೊಬ್ಬ ಪ್ರಜೆಗೆ ಜೀವನ ನಿರ್ವಹಿಸಲು ಒಳಿತನ್ನು ಮಾಡುವುದು. ಅದು ಕಾನೂನಿನ ಮೂಲಕ ಆಗಿರಬಹುದು, ಹೊಸ ಹೊಸ ಯೋಜನೆಗಳ ಮೂಲಕ ಆಗಿರಬಹುದು ಅಥವಾ ಜನರಿಗೆ ಸರ್ಕಾರದ ಮೂಲಕ ಅತ್ಯುತ್ತಮ ಸೇವೆಯನ್ನು ಒದಗಿಸುವುದರ ಮೂಲಕ ಆಗಿರಬಹುದು. ನಮ್ಮ ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ತತ್ವಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಾಗ ದೇಶದ ಏಕತೆಗೆ ಒಂದು ಅರ್ಥ ಬರುತ್ತದೆ. 


ಬ್ರಿಟಿಷರು ಭಾರತವನ್ನು ಆಳಲು ಕಷ್ಟವಾದಾಗ Divide and Rule ತಂತ್ರ ಅನುಸರಿಸಿದರು. ನಮಗೆ ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ನಮ್ಮ ದೇಶದಲ್ಲಿ ಬಡತನ ಹಾಗು ಅಜ್ಞಾನಕ್ಕೆ ಕೊರತೆಯೇ ಇಲ್ಲ. ಇಂದಿಗೂ ಜನರಿಗೆ ಯಾವ ವಿಚಾರದಲ್ಲಿ ಒಗ್ಗಟ್ಟಾಗಿ ನಿಂತು ಹೋರಾಡಬೇಕು, ಯಾವ ವಿಚಾರಗಳನ್ನು ನಾವು ಬೆಂಬಲಿಸಬೇಕು ಅಥವಾ ನಮ್ಮ ಅಭಿವೃದ್ಧಿಗೆ ಏನು ಮಾಡಬೇಕು ಎನ್ನುವ ಸ್ಪಷ್ಟ ಆಲೋಚನೆಗಳೇ ಇಲ್ಲ. ಜಾತಿಯ ಅಥವಾ ಧರ್ಮದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಮೂರ್ಖತನವನ್ನು ಬಹಳಷ್ಟು ಮಂದಿ ತೋರುತ್ತಿದ್ದಾರೆ. 


ಜಾತಿಪದ್ದತಿಯೇ ನಮ್ಮ ಸಮಾಜಕ್ಕೆ ಅಂಟಿರುವ ಒಂದು ಖಾಯಿಲೆ. ಇದನ್ನು ಬುಡಸಮೇತ ತೆಗೆದುಹಾಕಬೇಕಾದ ಅವಶ್ಯಕತೆ ಇರುವ ಸಂದರ್ಭದಲ್ಲಿ, ಜಾತಿ ಹಾಗು ಮತವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬರುವ ರಾಜಕಾರಣಿಗಳಿಂದ ದೇಶದ ಅಭಿವೃದ್ಧಿ ಸಾಧ್ಯವೇ ? ಇವರೆಲ್ಲರ ಮೂರ್ಖತನದಿಂದ ನಿಜವಾದ ನಷ್ಟವಾಗುವುದು ನಮ್ಮ ಮುಂದಿನ ಪೀಳಿಗೆಗೆ. ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವ ಬದಲು ಇಂದಿನ ದಿನಗಳಲ್ಲಿ ಅಂಧಶ್ರದ್ಧೆಯನ್ನು ತುಂಬಲಾಗುತ್ತಿದೆ. 

ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡುವುದು ಪ್ರಜೆಗಳ ಕರ್ತವ್ಯ. ಪ್ರಜೆಗಳು ಯಾವಾಗಲು ವಿರೋಧ ಪಕ್ಷದ ಜೊತೆ ನಿಂತು ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಮತ ಹಾಕುವಾಗ ನಾವು ನಮ್ಮ ಇಚ್ಛೆಯಂತೆ ಯಾರಿಗೆ ಬೇಕೋ ಅವರಿಗೆ ಮತ ಹಾಕಬೇಕು. ಗೆಲುವನ್ನು ಪಡೆದ ರಾಜಕಾರಣಿಗಳು ಜನರ ಸೇವಕರೇ ಹೊರತು ಪ್ರಶ್ನಾತೀತ ನಾಯಕರಲ್ಲ. ತಾವು ಪ್ರತಿನಿಧಿಸುವ ಜನರ ಕಷ್ಟಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವುದು ರಾಜಕಾರಣಿಗಳ ಕರ್ತವ್ಯ. 

ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದು, ಭ್ರಷ್ಟಾಚಾರ ನಿರುದ್ಯೋಗ  ಹೆಚ್ಚುತ್ತಿರುವುದು, ಹಸಿವಿನಿಂದ ಹಾಗು ಅಪೌಷ್ಟಿಕತೆಯಿಂದ ಜನರು ಕಂಗಾಲಾಗಿರುವ ಈ ಸಂದರ್ಭದಲ್ಲಿ ನಮ್ಮ ರಾಜಕೀಯ ವ್ಯವಸ್ಥೆಯ ಕರಾಳ ಮುಖಗಳು ಬೆಳಕಿಗೆ ಬರುತ್ತಿವೆ. ನನ್ನ ಪ್ರಕಾರ ದೇಶದಲ್ಲಿ ಸ್ವಲ್ಪ ಮಟ್ಟಿಗೆ ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದರೆ, ದೇಶದ ರಾಜಕಾರಣಿಯಾಗಲು ಮಿಲಿಟರಿಯಲ್ಲಿ ೧೫ ವರ್ಷ ಅಥವಾ ಐಎಎಸ್, ಕೆಎಎಸ್ ಅಂತಹ ಅಧಿಕಾರಿಯಾಗಿ ೧೫ ವರ್ಷ ಸೇವೆಯನ್ನು ಜನರಿಗೆ ಒದಗಿಸಿರಬೇಕಾದ ಕಡ್ಡಾಯ ಕಾನೂನನ್ನು ಜಾರಿಗೆ ತರಬೇಕು. ಆಗ ವಿದ್ಯಾರ್ಹತೆ ಇಲ್ಲದ ಪುಂಡ ಪೋಕರಿಗಳು ದೇಶವನ್ನು ಆಳುವುದು ತಪ್ಪುತ್ತದೆ. ಕನಿಷ್ಠ ಪಕ್ಷ ರಾಜಕಾರಣಿ ಹುದ್ದೆಗೆ ಹೋಗುವವರಿಗೆ ಒಂದು ಪ್ರವೇಶ ಪರೀಕ್ಷೆಯನ್ನಾದರೂ ಜಾರಿಗೆ ತರಬೇಕು. 

ದೇಶಭಕ್ತಿ ಎಂದರೆ ನಮಗೆ ಇಷ್ಟವಾದ ಪಕ್ಷಕ್ಕೆ ಅಧಿಕಾರ ಕೊಟ್ಟು ಜೈಕಾರ ಕೂಗುವುದಲ್ಲ, ಸಂವಿಧಾನದ ತತ್ವಗಳಿಗೆ ಚ್ಯುತಿ ಬಾರದಂತೆ ಆಡಳಿತ ನಡೆಸುವಂತೆ ವಿರೋಧ ಪಕ್ಷದ ಜೊತೆ ನಿಂತು ದೇಶದ ಜನರ ಒಳಿತಿಗಾಗಿ ಹೋರಾಡುವುದು. ಹಿಂದುಳಿದ ರಾಷ್ಟ್ರಗಳಿಗೆ ಸ್ವತಂತ್ರ ದೊರೆತಾಗ ಅಲ್ಲಿನ ಜನರೇ ಅಧಿಕಾರಕ್ಕೆ ಬಂದ  ನಂತರ ನಡೆಸುವ ಶೋಷಣೆ ಹಾಗು ಅಮಾನವೀಯ ಕೃತ್ಯಗಳಿಗೆ ಉದಾಹರೆಣೆಯಾಗಿ ಸಾಕಷ್ಟು ದೇಶಗಳಿವೆ. ಇನ್ನಾದರೂ ನಾವು ಪ್ರಜ್ಞಾವಂತ ನಾಗರೀಕರಾಗದಿದ್ದರೆ ನಮ್ಮ ನಾಶಕ್ಕೆ ನಾವೇ ಆಮಂತ್ರಣ ನೀಡಿದಂತಾಗುತ್ತದೆ. 

ಕಾಮೆಂಟ್‌ಗಳು

- Follow us on

- Google Search