ವಾಸ್ತವತೆ ಮತ್ತು ಒಂದಿಷ್ಟು ಹಿತವಚನಗಳು

ಜೀವನದಲ್ಲಿ ಕಷ್ಟಗಳು ಹೇಗೆ ಶುರುವಾಗುತ್ತವೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಒಂದು ಸರಳ ವಿಚಾರವೆಂದರೆ ನಾವು ನಾಳೆ ಬದುಕಿರುತ್ತೇವೆ ಎನ್ನುವುದಕ್ಕೂ ಸಹ ಯಾವುದೇ ಖಾತರಿ ಇಲ್ಲ. ಇಷ್ಟಾದರೂ ನಮ್ಮ ಜೀವನದ  ನಾಳೆಗಳ ಬಗ್ಗೆ ಒಂದಷ್ಟು ಕನಸುಗಳು ಇವೆ. ಮನುಷ್ಯರಿಗೆ ವಾಸ್ತವತೆಯನ್ನು ಅರಿತು ಜೀರ್ಣಿಸಿಕೊಳ್ಳುವ ಶಕ್ತಿ ಎಲ್ಲಾ ಸಮಯಗಳಲ್ಲೂ ಇರುವುದಿಲ್ಲ ಎಂದೆನಿಸುತ್ತದೆ. ಅದಕ್ಕಾಗಿಯೇ ನಾಳಿನ ಚಿಂತೆಯಲ್ಲಿ ಅಥವಾ ನಡೆದುಹೋದ ಘಟನೆಗಳ ಬಗ್ಗೆ ಮನಸ್ಸು ಆಲೋಚಿಲಸು ಪರತಪಿಸುತ್ತಿರುತ್ತದೆ. ನಮ್ಮ ಈ ಘಳಿಗೆಯ ಕಹಿಯನ್ನು ಮರೆಮಾಚಲು ಬೇರೊಂದು ಆಲೋಚನೆಯ ಅವಶ್ಯಕತೆ ಇದ್ದೇ ಇದೆ ಎಂಬುದು ನನ್ನ ಅನಿಸಿಕೆ. 


ಇನ್ನೇನು ಇಂಜಿನಿಯರಿಂಗ್ ಓದಿ ಮುಗಿಯಿತು, ಯಾರಿಗೂ ಸುಲಭವಾಗಿ ಸಿಗದ ಹೆಚ್ಚಿನ ಸಂಬಳ ಸಿಗುವ ಕೆಲಸವೂ ಸಿಕ್ಕಿತು ಎಂದು ಖುಷಿ ಪಟ್ಟು ಮುಂದಿನ ದಿನಗಳ ಬಗ್ಗೆ ಕನಸ್ಸು ಕಂಡಿದ್ದೆ ಬಂತು. ಆದರೆ, ಕಣ್ಣಿಗೆ ಕಾಣದ ಜೀವ ತೆಗೆಯುವ ಸಾಮರ್ಥ್ಯವಿರುವ ವೈರಾಣುವೊಂದು ಹದಿನಾರು ವರ್ಷಗಳಿಂದ ಕಷ್ಟ ಪಟ್ಟು ಓದಿ ಪಡೆದ ಕೆಲಸವೊಂದನ್ನು ಕಿತ್ತುಕೊಂಡಿದ್ದು ಸ್ವಲ್ಪ ದಿನಗಳ ಕಾಲ ದುಃಖವನ್ನು ಉಂಟುಮಾಡಿತು. ವಿದ್ಯಾಭ್ಯಾಸದ ಉದ್ದೇಶ ಕೇವಲ ಹಣ ಸಂಪಾದನೆಯೇ ಅಥವಾ ತನ್ನ ಜೀವನ ನಿರ್ವಹಣೆಗೆ ಸಹಾಯಕವಾಗದ ಜ್ಞಾನಕ್ಕೆ ಸಮಾಜ ಬೆಲೆ ಕೊಡುವುದೇ ಎಂಬ ಹತ್ತು ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. 


ಯಾವುದೇ ಕೆಲಸ ಮಾಡಬೇಕೆಂದರೆ ಅದಕ್ಕೆ ಬೇಕಾದ ಕೌಶಲ್ಯತೆಯನ್ನು ಬೆಳೆಸಿಕೊಳ್ಳಲು ಸಾಕಷ್ಟು ಪ್ರಯತ್ನದ ಅಗತ್ಯವಿರುತ್ತದೆ. ಪ್ರಯತ್ನ ಪಡಲು ಸಾಕಷ್ಟು ಮಾನಸಿಕ ಸ್ಥೈರ್ಯ ಬೇಕಾಗಿರುತ್ತದೆ. ಮನಸ್ಸಿಗೆ ಇಷ್ಟವಿದ್ದಲ್ಲಿ ಬರುವ ಅಡೆತಡೆಗಳನ್ನು ದಾಟಿ ಮುಂದೆ ಸಾಗಬಹುದು. ಮನಸ್ಸಿಗೆ ಇಷ್ಟವಾಗುವುದು ಬಹಳ ಕಷ್ಟ. ಮೇಲ್ನೋಟಕ್ಕೆ ನಮಗೆ ನಾವು ಹೇಳಿಕೊಳ್ಳಬಹುದೇ ಹೊರತು ಆ ಕೆಲಸ ಮಾಡುವಾಗಲೇ ನಮಗೆ ಕೆಲಸ ಎಷ್ಟು ಇಷ್ಟ ಎಂಬುದು ಅರಿವಾಗುತ್ತದೆ. ಮನಸ್ಸಿಗೆ ಇಷ್ಟವಿಲ್ಲದೆ ಕೆಲಸ ಮಾಡುವುದು ಅಕ್ಷರಶಃ ನರಕವೇ ಸರಿ.


ಈಗ ತಾನೇ ಹತ್ತನೇ ತರಗತಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವವರು ನಿಮಗೆ ಏನೇ ಇಷ್ಟವಿರಲಿ, ಅದನ್ನೇ ಓದಿ. ಆ ವಿಭಾಗದಲ್ಲೇ ಕೆಲಸ ಪಡೆಯಲು ನಿರಂತರ ಪ್ರಯತ್ನಿಸಿ. ಸ್ವಲ್ಪ ಸಮಯ ನಿಮಗೆ ಇಷ್ಟವಿಲ್ಲದಿದ್ದರೂ, ಸಿಕ್ಕಿರುವ ಕೆಲಸದಲ್ಲಿ ಸಾಕಷ್ಟು ಸಂಪಾದನೆಯಿದ್ದರೆ, ಒಂದೆರಡು ವರ್ಷ ನಿಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ಹಣವನ್ನು ಸಂಪಾದಿಸಿ. ಜೀವನದಲ್ಲಿ ಹಣದ ಅವಶ್ಯಕತೆ ಸಾಕಷ್ಟು ಇರುತ್ತದೆ. ಹೊಟ್ಟೆಗೆ ಊಟವಿಲ್ಲದೆ ಯಾವ ಗುರಿಯನ್ನೂ ಸಾಧಿಸಲು ಆಗುವುದಿಲ್ಲ. ಸುಲಭದ ಕೆಲಸಗಳನ್ನು ಹುಡುಕುವ ಬದಲು ನಿಮಗೆ ಯಾವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವಿದೆ ಎಂಬುದರ ಮೇಲೆ ನಿಮ್ಮ ಕುಶಲತೆಯನ್ನು ಬೆಳೆಸಿಕೊಳ್ಳಿ. 


ಜೀವನಕ್ಕೊಂದು ಉತ್ತಮವಾದ ಗುರಿಯಿರಲಿ, ಮಾಡುವ ಕೆಲಸ ಏನೇ ಇರಲಿ ಆ ಗುರಿಯನ್ನು ಸಾಧಿಸುವತ್ತ ನಿಮ್ಮ ಗಮನವಿರಲಿ. ಕಷ್ಟಗಳು ಬಂದೇ ಬರುತ್ತವೆ, ಎದುರಿಸಲು ಸಿದ್ಧರಾಗಿರಿ. ಆದಷ್ಟು ಉತ್ತಮ ಹವ್ಯಾಸಗಳನ್ನು ನಿಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿ ಮಾಡಿಕೊಳ್ಳಿ. ಗುರಿ ತಲುಪದಿದ್ದರೂ ಪರವಾಗಿಲ್ಲ, ಸತತ ಪ್ರಯತ್ನ ನಿಮ್ಮದಾಗಿರಲಿ. 

ಕಾಮೆಂಟ್‌ಗಳು

- Follow us on

- Google Search