ಗುಬ್ಬಚ್ಚಿ 🐦

ಅವತ್ತು ಒಂದು ದಿನ ಹೀಗೆ ಪೂರ್ಣಚಂದ್ರ ತೇಜಸ್ವಿಯವರು ಪರಿಸರದ ಬಗ್ಗೆ ಹೇಳಿರುವ ನುಡಿಗಳನ್ನು ಆಯ್ದು ಯೂಟ್ಯೂಬ್ ವಿಡಿಯೋ ಮಾಡಿದ್ದೆ. ಮಾಡಬೇಕಾದರೆ ಹಾಗೆಯೆ ಹಲವಾರು ಪಕ್ಷಿಗಳ ವಿಡಿಯೋಗಳನ್ನು ಉಪಯೋಗಿಸಿಕೊಂಡಿದ್ದೆ. ವಿಡಿಯೋ ಮಾಡಿ ಅಪ್ಲೋಡ್ ಮಾಡಿದ ನಂತರ ನಾನು ಚಿಕ್ಕ ಇದ್ದಾಗ ನಮ್ಮ ಮನೆಯಲ್ಲಿ ಹಂಚಿನ ಹತ್ತಿರ ಗೂಡು ಮಾಡಿಕೊಂಡಿದ್ದ ಹಲವಾರು ಗುಬ್ಬಿಗಳು ನೆನೆಪಿಗೆ ಬಂದವು. 

ಗುಬ್ಬಚ್ಚಿ 

ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಮೊಬೈಲ್ ಇರಲಿಲ್ಲ. ಪಕ್ಕದ ಆಫೀಸ್ ಲ್ಯಾಂಡ್ಲೈನ್ ಕನೆಕ್ಷನ್ ಹೊಂದಿತ್ತು. ಸ್ವಲ್ಪ ವರ್ಷಗಳ ನಂತರ ಮನೆಯ ಹತ್ತಿರ  ಮೊಬೈಲ್ ಟವರ್ ಬಂದ ಮೇಲೆ  ಗುಬ್ಬಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದನ್ನು ನಾನು ಗಮನಿಸಿದ್ದೇನೆ. 

ಕಣ್ಣು ಹಾಯಿಸಿದಲ್ಲೆಲ್ಲ ಕಾಣುತ್ತಿದ್ದ ಗುಬ್ಬಚ್ಚಿಗಳು ಇಂದು ಹುಡುಕಬೇಕಾದ ಸಂದರ್ಭ ಬಂದಿದೆ. ಒಂದು ಮನೆ ಒಳಗೆ ಬಂದು ಬಿದ್ದಿದ್ದ ಒಂದು ಹಕ್ಕಿಗೆ ನೀರು ಕುಡಿಸಿ ಹೊರಗೆ ಹೋಗದಂತೆ ಬಾಗಿಲು ಹಾಕಿ ಸ್ವಲ್ಪ ಹೊತ್ತು ಮನೆಯಲ್ಲೇ ಇರುವಂತೆ ಮಾಡಿದ್ದು ಇನ್ನು ನೆನಪಿದೆ. 

ಗಂಡು ಮತ್ತು ಹೆಣ್ಣು ಗುಬ್ಬಚ್ಚಿ 

ಗುಬ್ಬಚ್ಚಿಗಳನ್ನು ನೋಡಿದಾಗಲೆಲ್ಲ ನನ್ನ ಮನಸ್ಸಿನಲ್ಲಿ ಮೂಡುವ ಭಾವನೆಗಳೆಂದರೆ ಸ್ವಾತಂತ್ರ್ಯ, ಸ್ವಾವಲಂಬನೆ, ಸತತ ಪ್ರಯತ್ನ. ಗೂಡು ಕಟ್ಟುವುದರಿಂದ ಹಿಡಿದು ಆಹಾರ ಹುಡುಕುವ ತನಕ ಅಷ್ಟು ಪುಟ್ಟ ಜೀವಗಳು ಮಾಡುವ ಪ್ರಯತ್ನ ಎಂಥವರಿಗಾದರೂ ಪುಳಕವನ್ನುಂಟುಮಾಡುತ್ತವೆ. ಅಷ್ಟು ಮುದ್ದಾದ ಹಕ್ಕಿಗಳು ಮಾನವರ ದುರಾಸೆಯಿಂದಾಗಿ ಜಗತ್ತಿನಿಂದ ನಿರ್ಗಮಿಸುತ್ತಿರುವುದು ಬಹಳ ದುಃಖದ ಸಂಗತಿ. 

ಇದನೆಲ್ಲ ಯೋಚಿಸಿದ ನಂತರ ನನಗೆ ಏಕೋ ಒಂದು ರೀತಿಯ ಬೇಜಾರು ಶುರು ಆಯಿತು. ಇದೆ ಬೇಜಾರಿನಲ್ಲಿ ರಾತ್ರಿ ನಿದ್ದೆ ಮಾಡಿದೆ. ಬೆಳಿಗ್ಗೆ ಎಚ್ಚರವಾದಾಗ ನಾನು ಈಗ ಇರುವ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸಿತು. ನನಗೆ ರಾತ್ರಿ ಅದೇ ಯೋಚನೆ ಇತ್ತಲ್ಲ ಅದರಿಂದ ಹಾಗೆ ಆಗ್ತಾ ಇದೆ ಅನ್ಕೊಂಡು ಸುಮ್ಮನೆ ಮಲಗಲು ಪ್ರಯತ್ನಿಸಿದೆ. ಆದರೆ ಹಕ್ಕಿಯ ಚಿಲಿಪಿಲಿ ಹಾಗೆಯೇ ಮುಂದುವರೆಯಿತು.

ಹಾಸಿಗೆಯಿಂದ ಎದ್ದು ಹೋಗಿ ನೋಡಿದಾಗ, ಅಡುಗೆ ಮನೆಯ ಸ್ವಲ್ಪ ಮೇಲ್ಭಾಗದಲ್ಲಿ ಅಳವಡಿಸಿರುವ ಫ್ಯಾನ್ ಆಚೆ ಬದಿಯಲ್ಲಿ ಎರಡು ಗುಬ್ಬಚ್ಚಿಗಳು ಚಿಂವ್ ಚಿಂವ್ ಎನ್ನುತ್ತಿವೆ. ನನಗೆ ಆ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ನನಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಸ್ವಲ್ಪ ಹೊತ್ತು ಇದು ಕನಸಿರಬಹುದು ಎಂದು ಕೂಡ ಅನ್ನಿಸಿತು. ನಾನು ಅಲ್ಲಿಯೇ ಕೆಳಗೆ ನಿಂತು ಅವುಗಳನ್ನು ನೋಡುತ್ತಿದ್ದೆ. ಆಮೇಲೆ ೧೦-೧೫ ನಿಮಿಷದ ನಂತರ ಅವು ಹಾರಿ ಹೋದವು. ಮತ್ತೆ ಇಲ್ಲಿಯವರೆಗೆ ಆ ಜಾಗಕ್ಕೆ ಬಂದಿಲ್ಲ. 

ಪೂರ್ಣಚಂದ್ರ ತೇಜಸ್ವಿಯವರ ಒಂದು ಮಾತಿದೆ 

“ನಾವು ಹಕ್ಕಿಗಳ ಪರಿಸರವನ್ನು ನಾಶಮಾಡಿ. ಅವುಗಳು ಬದುಕುವ ಹಕ್ಕನ್ನು ಕಸಿದುಕೊಂಡರೆ,ಅವಕ್ಕೆ ನಮ್ಮಂತೆ ಮಾತಾಡಲು ಬರುವುದಿಲ್ಲ. ಅವು ತಮಗಾಗುಗುತ್ತಿರುವ ಅನ್ಯಾಯದ ವಿರುದ್ಧ ಕೋರ್ಟಿಗೆ ಹೋಗಲಾರವು. ಅವಕ್ಕೆ ಓಟಿನ ಹಕ್ಕೂ ಇಲ್ಲ. ಅವು ನಮ್ಮತ್ತ ನಿಸ್ಸಹಾಯಕ ಮುಗ್ಧ ನೋಟ ಬೀರಿ ನಿರ್ಗಮಿಸುತ್ತವೆ. ಕೆಲವೊಮ್ಮೆ ಶಾಶ್ವತವಾಗಿ. ಅವುಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿಯಷ್ಟೆ. ಏಕೆಂದರೆ ಅವು ಬದುಕಲಾರದ ಪರಿಸರದಲ್ಲಿ ನಾವೂ ಬದುಕಲಾಗುವುದಿಲ್ಲ"

                  
               


ಕಾಮೆಂಟ್‌ಗಳು

- Follow us on

- Google Search