ಇಂಜಿನಿಯರಿಂಗ್ ಮೊದಲನೇ ಸೆಮಿಸ್ಟರ್ ಮತ್ತು ಭಾರತದಲ್ಲಿ ಡಿಜಿಟಲ್ ಯುಗದ ಆರಂಭ : ನನ್ನ ಅನುಭವಗಳು

ನಾನು ಹತ್ತನೇ ತರಗತಿವರೆಗೆ ನಮ್ಮ ಊರಿನ ಶಾಲೆಯಲ್ಲೇ ಓದಿದ್ದು. ನಂತರ ಬೆಂಗಳೂರಿಗೆ ಓದಲು ಬಂದೆ. ಎರಡು ವರ್ಷದ ಪ್ರಯತ್ನದ ಫಲವಾಗಿ ಉತ್ತಮ ಅಂಕ ಪಡೆದು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡೆ. ಇಲ್ಲಿ ನಿಮಗೆ ಹೇಳಲು ಹೊರಟಿರುವ ಅನುಭವಗಳು ನನಗೆ ಆಗಾಗ ನೆನಪಾಗುವ ವಿಷಯಗಳು.


ನಾವು ಇಂಜಿನಿಯರಿಂಗ್ ಸೇರಿದ ವರ್ಷದಲ್ಲೇ ಮೊದಲ ಸೆಮಿಸ್ಟರ್ನ ಆರಂಭದ ತಿಂಗಳಲ್ಲಿ ಜಿಯೊ ಸಿಮ್ ಬಂತು. ಹಾಸ್ಟೆಲ್ ಹುಡುಗರೆಲ್ಲರೂ ಕಾಲೇಜು ವೈಫೈ ಇಂಟರ್ನೆಟ್ ಸ್ಪೀಡ್ ಗೆ ರೋಸಿಹೋಗಿದ್ದರು. ಈ ವಿಷಯ ತಿಳಿಯುತ್ತಿದಂತೆ ಉಚಿತವಾಗಿ ಸಿಗುತ್ತಿದ್ದ ಸಿಮ್ ಗಾಗಿ ಉದ್ದದ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸಿಮ್ ತಂದವರು ತಮ್ಮ ಸಾಹಸ ಗಾಥೆಯನ್ನು ಸಿಕ್ಕವರಿಗೆಲ್ಲ ವಿವರಿಸುತ್ತಾ ಇದ್ದಿದ್ದು ಅಂದಿನ ಸಾಮಾನ್ಯ ದೃಶ್ಯ. ನನ್ನ ಹತ್ತಿರ 4G ಮೊಬೈಲ್ ಇಲ್ಲದೆ ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ . 


ಸ್ವಲ್ಪ ದಿನಗಳ ನಂತರ ನನ್ನ ಕೆಲವು ಗೆಳೆಯರು ಹತ್ತು ಹದಿನೈದು ಜಿಯೋ ಸಿಮ್ ಇಟ್ಟಿಕೊಂಡಿದ್ದರು. ಆದರೆ ಆ ಹೊತ್ತಿಗೆ ಎಲ್ಲರೂ ಉಪಯೋಗಿಸಲು ಆರಂಭಿಸದ್ದರಿಂದ ಇಂಟರ್ನೆಟ್ ವೇಗ ಕಡಿಮೆಯಾಗಿತ್ತು. ಆ ಸಿಮ್ ಜೊತೆಗೆ ಕೊಡುತ್ತಿದ್ದ ಸ್ಟಿಕರ್ಗಳನ್ನು ಸಿಕ್ಕಿದ ಕಡೆಯೆಲ್ಲ ಹಚ್ಚಿ ಹಾಸ್ಟೆಲ್ ಒಂದು ರೀತಿ ಜಿಯೋಮಯವಾಗಿತ್ತು. ಕೆಲ ಗೆಳೆಯರಂತೂ ಜಿಯೋ ಸಿಮ್ ಹಂಚುತ್ತಿದ್ದವರೊಂದಿಗೆ ಒಪ್ಪಂದ ಮಾಡಿಕೊಂಡವರಂತೆ ಅವರೂ ಬೇಕಾದಷ್ಟು ಸಿಮ್ ಖರೀದಿಸಿ ಉಳಿದವರಿಗೂ ಪ್ರೋತ್ಸಾಹ ನೀಡುತ್ತಿದ್ದರು. 



ಎಲ್ಲರೂ ಸಿಮ್ ಪಡೆದ ನಂತರ ವೇಗ ಕಡಿಮೆಯಾದಂತೆ ಹುಡುಗರೆಲ್ಲರೂ ಕಾಲೇಜಿನ ಯಾವ ಮೂಲೆಯಲ್ಲಿ ಹೆಚ್ಚು ವೇಗದ ಇಂಟರ್ನೆಟ್ ಸಿಕ್ಕುತ್ತದೆ ಎಂದು ಹುಡುಕಾಡಲು ಶುರು ಮಾಡಿದರು. ಹೋದ ಬಂದ ಕಡೆಯೆಲ್ಲ ಮೊಬೈಲ್ ಅಲ್ಲಿ ಸ್ಪೀಡ್ ಹೇಗಿದೆ ಅಂತ ಚೆಕ್ ಮಾಡೋದು ನಮ್ಮ ದಿನಚರಿಯ ಭಾಗ ಆಗಿತ್ತು. ಹೀಗೆ ಸ್ವಲ್ಪ ದಿನಗಳ ನಂತರ ಊಟ ಕೊಡುವ ಮೆಸ್ಸ್ ನಲ್ಲಿ ಸ್ಪೀಡ್ ಚೆನ್ನಾಗಿದೆ ಎಂದು ತಿಳಿಯಿತು. ಊಟ ತಿಂಡಿ  ಆರಂಭವಾಗುವ ಬಹಳಷ್ಟು ಮುಂಚಿತವಾಗಿ ಹೋಗಿ ಮೊಬೈಲ್ ಹಿಡ್ಕೊಂಡು ಕೂರುವುದು ಬಹಳ ತಮಾಷೆಯ ವಿಷಯವಾಗಿತ್ತು. 
  


ನಾನು ಸ್ವಲ್ಪ ತಿಂಗಳ ನಂತರ ಜಿಯೋ ಹಾಟ್ಸ್ಪಾಟ್ ಖರೀದಿಸಿದ್ದೆ. ಆ ಸಂದರ್ಭದಲ್ಲಿ ಅದು ಸಾಕಷ್ಟು ಉಪಯೋಗಕ್ಕೆ ಬಂದಿತ್ತು. ಒಟ್ಟಿನಲ್ಲಿ ಜಿಯೊ  ಬಂದಿದ್ದು ಮಾತ್ರ ಇಂಟರ್ನೆಟ್ ಉಪಯೋಗಿಸುವವರಿಗೆ ಮರುಭೂಮಿಯಲ್ಲಿ ತಣ್ಣನೆ ಪಾನಕ ಸಿಕ್ಕಿದ ಹಾಗಿತ್ತು. 



ಇದಾದ ಸ್ವಲ್ಪ ಸಮಯದ ನಂತರ PhonePe ಮೇಲೆ ನಮ್ಮ ಹುಡುಗರ ಕಣ್ಣು ಬಿತ್ತು. ಇನ್ಸ್ಟಾಲ್ ಮಾಡಿದರೆ ಐವತ್ತು ಅಥವಾ ನೂರು  ರೂಪಾಯಿ ಹಾಗು ಬೇರೆಯವರಿಗೆ ಶೇರ್ ಮಾಡಿ ಇನ್ಸ್ಟಾಲ್ ಮಾಡ್ಸಿದ್ರೆ ಆದಿಕ್ಕು ಎಷ್ಟೋ ದುಡ್ಡು ಬರ್ತಾ ಇತ್ತು. ಇದು ಗೊತ್ತಾಗಿದ್ದೇ ತಡ, ಎದುರಿಗೆ ಸಿಕ್ಕಿದವರು ಸರಿಯಾಗಿ ಪರಿಚಯ ಇಲ್ಲದೇ ಹೋದರೂ ಸಹ ಒಂದೆರಡು ಮಾತುಗಳಾದ ನಂತರ "ಮಗ, 'ಫೋನ್ ಪೆ'  ಇನ್ಸ್ಟಾಲ್ ಮಾಡಿದ್ಯಾ ??" ಅಂತ ಕೇಳುತ್ತಿದ್ದರು. 




ಇಲ್ಲ ಅಂದರೆ, "ಶೇರ್ ಮಾಡ್ತಿನಿ ಇನ್ಸ್ಟಾಲ್ ಮಾಡು" ಅನ್ನೋರು, ಇನ್ಸ್ಟಾಲ್ ಮಾಡಿದೀನಿ ಅಂದಿದ್ರೆ ,"150 ಹಾಕ್ತಿನಿ ನಿಂಗೆ , ವಾಪಸ್ಸು ಹಾಕು ಅನ್ನೋರು". ಇದು ಸ್ವಲ್ಪ ದಿನ ನಡೀತು. ಆಮೇಲೆ ನಂಗೆ ತಲೆಕೆಟ್ಟು ವಾಪಸ್ಸು ಹಾಕೋದೇ ನಿಲ್ಲಿಸಿಬಿಟ್ಟೆ. ಇದರಿಂದಾಗಿ ಈ ಕಾಟ ಕಡಿಮೆ ಆಗುತ್ತಾ ಬಂತು. ಸ್ವಲ್ಪ ದಿನಗಳ ನಂತರ 'ಗೂಗಲ್ ಪೆ ' ಬಂದಾಗಲೂ ಇದೆ ಕಥೆ. 


ಇದು ಒಬ್ಬರದೂ ಇಬ್ಬರದೋ ಕಥೆಯಲ್ಲ ಹಾಸ್ಟೆಲ್ ಅಲ್ಲಿ ಇದ್ದ ಪ್ರತಿಯೊಬ್ಬರೂ ಮಾಡುತ್ತಿದ್ದ ಕೆಲಸ. ಯಾರೋ  ಒಬ್ಬರು ಹೀಗೆ ಬ್ಯಾಂಕ್ ಪಾಸ್ಬುಕ್ ಪ್ರಿಂಟ್ ತೆಗೆಸಿದಾಗ ಪಾಸ್ ಬುಕ್ ನ ಎಲ್ಲ ಪುಟಗಳು ಭರ್ತಿಯಾದರೂ , ಇನ್ನು ಎಂಟ್ರಿ ಇದ್ದಿದ್ದು ನೋಡಿ ಬ್ಯಾಂಕ್ ಅವರು ಬೈದು ಕಳ್ಸಿದ್ರಂತೆ. ಇದರ ಗಲಾಟೆಯಲ್ಲಿ ಮೊದಲನೇ ಸೆಮಿಸ್ಟರ್ ಮುಗಿದಿದ್ದೇ ಗೊತ್ತಾಗಲಿಲ್ಲ. 


ಕಾಮೆಂಟ್‌ಗಳು

- Follow us on

- Google Search