ಈ ವಾರದಲ್ಲಿ ನಾನು ಓದಿದ ಪುಸ್ತಕಗಳು ೧. ಭೂಗರ್ಭಯಾತ್ರೆ - ಗೋಪಾಲಕೃಷ್ಣ ಅಡಿಗ ೨. ಅಣ್ಣನ ನೆನಪು - ಪೂರ್ಣಚಂದ್ರ ತೇಜಸ್ವಿ

 ೧. ಭೂಗರ್ಭಯಾತ್ರೆ - ಗೋಪಾಲಕೃಷ್ಣ ಅಡಿಗ 

ಜೂಲ್ಸ್ ವೆರ್ನ್ ಬರೆದಿರುವ ಕೃತಿಯನ್ನು ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಪ್ರಮುಖ ಮೂರು  ಪಾತ್ರಗಳೆಂದರೆ ಇಬ್ಬರು ವಿಜ್ಞಾನಿಗಳು ಹಾಗು ಅವರೊಂದಿಗೆ ಅವರ ಸಾಹಸ ಯಾತ್ರೆಯಲ್ಲಿ ಜೊತೆಯಾಗಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಳ್ಳುವ ಕೆಲಸಗಾರ.
ಒಬ್ಬ ವಿಜ್ಞಾನಿ ತರುಣ(ಹೆನ್ರಿ) ಹಾಗು ಅವನ ಚಿಕ್ಕಪ್ಪ ದೊಡ್ಡ ಪ್ರೊಫೆಸರ್(ಹಾರ್ಡ್ವಿಗ್ ).  


ಹೆನ್ರಿಯ ಚಿಕ್ಕಪ್ಪನಿಗೆ ಒಂದು ರಹಸ್ಯವನ್ನು ಒಳಗೊಂಡ, ಸುಲಭವಾಗಿ ಓದಲಾಗದಂತೆ ಬರೆದಿರುವ ಮಹಾನ್ ವಿಜ್ಞಾನಿಯೊಬ್ಬನ ಲೇಖನ ದೊರೆಯುತ್ತದೆ. ಅಲ್ಲಿಂದ ಶುರುವಾಗುವ ಇವರ ಸಾಹಸಯಾನದ  ಗುರಿ ಭೂಮಿಯ ಕೇಂದ್ರವನ್ನು ತಲುಪುವುದಾಗಿರುತ್ತದೆ. ಭೂಮಿಯ ಕೇಂದ್ರವನ್ನು ತಲುಪಲು ಅವರು ಪಡುವ ಸಾಹಸ ಶೌರ್ಯಗಳನ್ನು ಓದುತ್ತಿದ್ದರೆ ಇದು ನಿಜವೋ ಅಥವಾ ಕಾಲ್ಪನಿಕವೋ  ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ. ಉತ್ತಮ ಅನುವಾದಕರು ಹೇಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬಹುದು ಎನ್ನುವುದಕ್ಕೆ ಈ ಕೃತಿಯೇ  ಸಾಕ್ಷಿ.  

ಕಥೆ ಕಾದಂಬರಿಗಳ ಮೂಲಕವೂ ಕೂತಹಲದ ಮೂಲಕ ವೈಜ್ಞಾನಿಕ ವಿಷಯಗಳನ್ನು ಸುಲಭವಾಗಿ ತಿಳಿಸಲು ಸಾಧ್ಯ ಎಂದು ಇಂತಹ ಹಲವಾರು ಕೃತಿಗಳು ಸಾಬೀತುಪಡಿಸಿವೆ. 

೨. ಅಣ್ಣನ ನೆನಪು - ಪೂರ್ಣಚಂದ್ರ ತೇಜಸ್ವಿ

ನನ್ನ ಜೀವನದ ಮೇಲೆ ಹಾಗು ಚಿಂತನೆಗಳ ಮೇಲೆ  ಅಪಾರ ಪರಿಣಾಮ ಬೀರಿದ ವ್ಯಕ್ತಿತ್ವಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಅಗ್ರಗಣ್ಯರು. ಅವರ ಯಾವುದೇ ಕೃತಿಯಾಗಲಿ ಕಣ್ಣಿಗೆ ಬಿದ್ದರೆ ಪೂರ್ತಿಯಾಗಿ ಓದಿ ಮುಗಿಸುವ ತನಕ ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ. 



ಪುಸ್ತಕ ಓದುವುದನ್ನು ತಮ್ಮ ಹವ್ಯಾಸವಾಗಿ ಮಾಡಿಕೊಳ್ಳಲು ಇಷ್ಟವಿರುವವರು ತೇಜಸ್ವಿಯವರ ಕಾದಂಬರಿಗಳಿಂದ ಆರಂಭಿಸುವುದು ಬಹಳ ಒಳ್ಳೆಯ ಕೆಲಸ. ಏಕೆಂದರೆ, ಅರ್ಧಕ್ಕೆ ಓದುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲದಷ್ಟು ವಿಶಿಷ್ಟ ರೀತಿಯ ಬರಹಗಾರರು ನಮ್ಮ ಪೂರ್ಣಚಂದ್ರ ತೇಜಸ್ವಿ. 

ತೇಜಸ್ವಿಯವರ ಹಲವಾರು ಕೃತಿಗಳನ್ನು ನಾನು ಓದಿದ್ದರೂ ಅಣ್ಣನ ನೆನಪು ಪುಸ್ತಕ ಓದಿರಲಿಲ್ಲ. ಇದರಲ್ಲಿ ಅಣ್ಣ ಎಂದರೆ ಅವರ ತಂದೆ ಕುವೆಂಪು. ಕುವೆಂಪು ಅವರ ಮಗನಾಗಿ ತೇಜಸ್ವಿಯವರು ತಮ್ಮ ಬಾಲ್ಯ, ಕಾಲೇಜಿನ ದಿನಗಳು , ನವ್ಯ ಕಾಲಘಟ್ಟ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ತಮ್ಮ ನೆನಪಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
 
ಕುವೆಂಪು


ಕುವೆಂಪು ಒಬ್ಬ ಕವಿಯಾಗಿ ಲೇಖಕನಾಗಿ ಕಾಣುವುದಕ್ಕಿಂತ ತೇಜಸ್ವಿ ಅವರಿಗೆ ತಂದೆಯಾಗಿ ಕಾಣಿಸುತ್ತಾರೆ. ಕುವೆಂಪು ಅವರ ವಿಚಾರಧಾರೆ, ಸಾಹಿತ್ಯ ಸೃಷ್ಟಿ , ಕನ್ನಡ ಬಗ್ಗೆ ಇದ್ಧ ಅಭಿಮಾನ , ಮೂಡನಂಭಿಕೆಗಳ ವಿರುದ್ಧ ಧ್ವನಿಯೆತ್ತಿದಾಗ ಎದುರಿಸಬೇಕಾಗಿ ಬಂದ ವಿರೋಧಗಳು ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. 

ಪೂರ್ಣಚಂದ್ರ ತೇಜಸ್ವಿ 

ಕುವೆಂಪು ಹಾಗು ತೇಜಸ್ವಿಯವರ ಕುರಿತು ಹೆಚ್ಚು ತಿಳಿದುಕೊಳ್ಳಬೇಕಾದ ಆಸಕ್ತಿಯಿದ್ದಲ್ಲಿ ಖಂಡಿತವಾಗಿಯೂ ಈ ಪುಸ್ತಕವನ್ನು ತಪ್ಪದೇ ಓದಬೇಕು. 



ಕಾಮೆಂಟ್‌ಗಳು

- Follow us on

- Google Search